ಜೌಗು ಪ್ರದೇಶ ಜೀವ ವೈವಿಧ್ಯದ ತೊಟ್ಟಿಲು

Update: 2024-02-04 04:22 GMT

ಜೌಗು ಪ್ರದೇಶಗಳ ಅವನತಿಯ ವೇಗ ಕಾಡುಗಳಿಗಿಂತ ಮೂರು ಪಟ್ಟು ಇದೆ ಎಂಬುದು ಆತಂಕದ ಸಂಗತಿ. ಕೇವಲ 50 ವರ್ಷಗಳಲ್ಲಿ ಅಂದರೆ 1970ರಿಂದ ಇತ್ತೀಚೆಗೆ ಪ್ರಪಂಚದ ಶೇ. 35ರಷ್ಟು ಜೌಗುಭೂಮಿಗಳು ನಾಶವಾಗಿವೆ. ಜೌಗು ಪ್ರದೇಶಗಳ ನಷ್ಟಕ್ಕೆ ಮಾನವನ ಚಟುವಟಿಕೆಗಳೇ ಪ್ರಮುಖ ಕಾರಣ. ಕೃಷಿ, ಒಳಚರಂಡಿ, ಮಿತಿಮೀರಿದ ಮೀನುಗಾರಿಕೆ, ಸಂಪನ್ಮೂಲಗಳ ಅತಿಯಾದ ಶೋಷಣೆ, ಹವಾಮಾನ ಬದಲಾವಣೆ ಇವೆಲ್ಲವೂ ಕಾರಣಗಳಾಗಿವೆ.

ನನ್ನ ಬಾಲ್ಯದ ದಿನಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿತ್ತು. ನಮ್ಮೂರು ಹೊಳಗುಂದಿಗೆ ಹೊಂದಿಕೊಂಡಂತೆ ಸುಮಾರು 2 ಕಿ.ಮೀ. ಉದ್ದದ (50ಕ್ಕೂ ಹೆಚ್ಚು ಎಕರೆ ಪ್ರದೇಶ) ಬೆಟ್ಟದ ಸಾಲು ಇದೆ. ಮಳೆಗಾಲದಲ್ಲಿ ಬೆಟ್ಟದ ಅಕ್ಕಪಕ್ಕದ ಜಮೀನುಗಳಲ್ಲಿ ಸದಾ ನೀರು ಜಿನುಗುತ್ತಿತ್ತು. ಗ್ರಾಮೀಣ ಭಾಷೆಯಲ್ಲಿ ಇದನ್ನು ಊಟಿ ಇಡುವುದು ಎನ್ನುತ್ತಿದ್ದರು. ಮೂರ್ನಾಲ್ಕು ತಿಂಗಳುಗಳವರೆಗೆ ಇದೇ ಪರಿಸ್ಥಿತಿ ಇರುತ್ತಿತ್ತು. ಜಮೀನುಗಳಲ್ಲಿ ಕಾಲಿಟ್ಟರೆ ಸಾಕು, ಪಾದಗಳು ಕೆಸರಿನಲ್ಲಿ ಸಿಕ್ಕಿಹಾಕಿಕೊಳ್ಳುತ್ತಿದ್ದವು. ಬೆಟ್ಟದ ಸುತ್ತಮುತ್ತಲು ಸಣ್ಣ ಸಣ್ಣ ಝರಿಗಳಲ್ಲಿ ಸದಾ ನೀರು ಹರಿಯುತ್ತಿತ್ತು. ನಾಲ್ಕಾರು ಝರಿಗಳ ನೀರು ಸೇರಿಕೊಂಡು ಸಣ್ಣ ಸಣ್ಣ ಹಳ್ಳಗಳು ನಿರ್ಮಾಣವಾಗುತ್ತಿದ್ದವು. ಆ ನೀರಿನಲ್ಲಿ ಮೀನುಗಳು, ಏಡಿಗಳು ಹಾಗೂ ಇನ್ನಿತರ ಜಲಚರಗಳು ವಾಸಿಸುತ್ತಿದ್ದವು. ಜೀವವೈವಿಧ್ಯವೇ ಅಲ್ಲಿ ರಾರಾಜಿಸುತ್ತಿತ್ತು. ಈ ಜಲಚರಗಳನ್ನು ಹಿಡಿದು ತಿನ್ನಲು ದೂರದಿಂದ ಪಕ್ಷಿಗಳು ಬರುತ್ತಿದ್ದವು. ಹೀಗೆ ಬಂದ ಪಕ್ಷಿಗಳು ನಮ್ಮೂರಿನ ಕೆರೆಯ ಸುತ್ತಲ ಮರಗಳಲ್ಲಿ ವಾಸವಾಗಿದ್ದವು. ಸಂಜೆಯಾಗುತ್ತಿದ್ದಂತೆ ಗೂಡಿಗೆ ಮರಳಿದ ಪಕ್ಷಿಗಳ ಕಲರವ ಕೇಳುವುದು ಮನಸ್ಸಿಗೆ ಆನಂದ ನೀಡುತ್ತಿತ್ತು. ಬೆಳಗ್ಗೆಯಾಗುತ್ತಿದ್ದಂತೆ ಆ ಪಕ್ಷಿಗಳೆಲ್ಲ ಆಹಾರ ಹುಡುಕಿಕೊಂಡು ಹೋಗುತ್ತಿದ್ದವು.

ಈಗೀಗ ಮಳೆಯ ಪ್ರಮಾಣ ಕಡಿಮೆಯಾಗಿದೆ. ಬೆಟ್ಟದ ಅಕ್ಕಪಕ್ಕದ ಜಮೀನುಗಳಲ್ಲಿ ನೀರು ಜಿನುಗುವುದು ಕಡಿಮೆಯಾಗಿದೆ. ಕ್ರಮೇಣವಾಗಿ ಝರಿಗಳು ಮತ್ತು ಹಳ್ಳಗಳು ಬತ್ತಿದವು. ಅಲ್ಲಿದ್ದ ಜೀವಜಗತ್ತು ಈಗ ಸಂಪೂರ್ಣವಾಗಿ ಮಾಯವಾಗಿದೆ. ಈಗ ಉಳಿದಿರುವುದು ಕೆರೆ ಮಾತ್ರ. ಕೆರೆಯೂ ಈಗ ಮೊದಲಿನಂತಿಲ್ಲ. ಅಮಾವಾಸ್ಯೆ-ಹುಣ್ಣಿಮೆಗೆ ಊರಿನ ಟ್ರ್ಯಾಕ್ಟರ್ ಮತ್ತು ಜೆಸಿಬಿಗಳ ವಾಟರ್ ಸರ್ವಿಸ್ ಸೆಂಟರ್ನಂತಾಗಿದೆ. ಕೆರೆಯ ಸುತ್ತಮುತ್ತಲಿನ ಮರಗಳಲ್ಲಿ ಪಕ್ಷಿಗಳ ಕಲರವ ಕಡಿಮೆಯಾಗಿದೆ.

ಇದನ್ನೆಲ್ಲ ನೆನಪಿಸಿಕೊಳ್ಳಲು ಮುಖ್ಯ ಕಾರಣವೊಂದಿದೆ. ಮೊನ್ನೆ ಫೆಬ್ರವರಿ 2ರಂದು ವಿಶ್ವ ಜೌಗುಭೂಮಿ ದಿನ ಆಚರಿಸಲಾಯಿತು. ಜೌಗು ಭೂಮಿಯ ಮಹತ್ವವನ್ನು ಉಳಿಸಿ ಬೆಳೆಸಲು ಉದ್ದೇಶಿಸಿ 1971ರಿಂದ ಈ ದಿನವನ್ನು ಆಚರಿಸಲಾಗುತ್ತಿದೆ. ಜೌಗು ಭೂಮಿಗಳ ಮಹತ್ವದ ಬಗ್ಗೆ ಜಾಗತಿಕ ಜಾಗೃತಿ ಮೂಡಿಸುವ ಗುರಿಯೊಂದಿಗೆ ಇರಾನಿನ ರಾಮ್ಸರ್ ನಗರದಲ್ಲಿ 1971ರಲ್ಲಿ ಮೊದಲ ಜೌಗು ಪ್ರದೇಶಗಳ ಪ್ರತಿನಿಧಿ ಸಮಾವೇಶ ನಡೆಸಲಾಯಿತು. ರಾಮ್ಸರ್ನಲ್ಲಿ ಮೊದಲ ಬಾರಿಗೆ ಜೌಗು ಭೂಮಿ ಕುರಿತು ಮಹತ್ವದ ನಿರ್ಣಯಗಳನ್ನು ಕೈಗೊಂಡಿದ್ದರಿಂದ ಅದಕ್ಕೆ ರಾಮ್ಸರ್ ನಿರ್ಣಯಗಳು ಎಂದು ಕರೆಯಲಾಗುತ್ತದೆ. ಜೌಗು ಭೂಮಿ ಅಭಿವೃದ್ದಿ ಮೂಲಕ ಜೀವವೈವಿಧ್ಯ ಕಾಪಾಡುವುದು ಈ ದಿನದ ಪ್ರಮುಖ ಉದ್ದೇಶವಾಗಿದೆ.

 

 

ಪ್ರಮುಖ ಪರಿಸರ ವ್ಯವಸ್ಥೆಗಳಾದ ಜೌಗು ಪ್ರದೇಶಗಳು, ಜಲ ಪರಿಸರಕ್ಕೆ ಸಂಬಂಧಿತ ಸಸ್ಯ ಮತ್ತು ಪ್ರಾಣಿಗಳ ಜೀವನವನ್ನು ನಿಯಂತ್ರಿಸುವ ಪ್ರಾಥಮಿಕ ಅಂಶಗಳಾಗಿವೆ. ಇವು ಸಿಹಿನೀರು, ಸಮುದ್ರ ಮತ್ತು ಕರಾವಳಿ ಪರಿಸರ ವ್ಯವಸ್ಥೆಗಳನ್ನು ಒಳಗೊಂಡಿವೆ. ಎಲ್ಲಾ ಸರೋವರಗಳು ಮತ್ತು ನದಿಗಳು, ಜೌಗು ಹುಲ್ಲುಗಾವಲುಗಳು, ಬಿಸಿನೀರಿನ ಬುಗ್ಗೆಗಳು, ನದಿಮುಖಜಗಳು, ಮ್ಯಾಂಗ್ರೋವ್ಗಳು, ಹವಳದ ಬಂಡೆಗಳು, ಮೀನು ಕೊಳಗಳು, ಭತ್ತದ ಗದ್ದೆಗಳು, ಜಲಾಶಯಗಳು ಮುಂತಾದ ಎಲ್ಲಾ ತೇವಭರಿತ ತಾಣಗಳನ್ನು ಪ್ರತಿನಿಧಿಸುತ್ತವೆ. ಇಂತಹ ಎಲ್ಲಾ ಜೌಗು ಪ್ರದೇಶಗಳು ಅಮೂಲ್ಯ ಜೀವಿಗಳ ಆಶ್ರಯ ತಾಣ ಗಳಾಗಿವೆ. ಜೌಗು ಭೂಮಿಗಳು ಜೀವವೈವಿಧ್ಯ ಕಾಪಾಡುತ್ತವೆ, ಜಾಗತಿಕ ತಾಪಮಾನ ವನ್ನು ತಗ್ಗಿಸುತ್ತವೆ, ಸಿಹಿನೀರಿನ ಲಭ್ಯತೆಯನ್ನು ಹೆಚ್ಚಿಸುವ ಮೂಲಕ ವಿಶ್ವ ಆರ್ಥಿಕತೆಯನ್ನು ಉತ್ತೇಜಿಸುತ್ತವೆ.

ಜೌಗು ಪ್ರದೇಶಗಳು ಭೂಮಿಯ ಶೇಕಡಾ 6ರಷ್ಟನ್ನು ಮಾತ್ರ ಆವರಿಸಿದ್ದರೂ, ಶೇಕಡಾ 40ರಷ್ಟು ಸಸ್ಯ ಮತ್ತು ಪ್ರಾಣಿಗಳಿಗೆ ಆವಾಸ ತಾಣಗಳಾಗಿವೆ. ನಮ್ಮ ಆರೋಗ್ಯ, ಆಹಾರ ಪೂರೈಕೆ, ಪ್ರವಾಸೋದ್ಯಮ ಮತ್ತು ಉದ್ಯೋಗಗಳಿಗೆ ತೇವಭೂಮಿಯ ಜೀವವೈವಿಧ್ಯವು ಮುಖ್ಯವಾಗಿದೆ. ಜೌಗು ಪ್ರದೇಶಗಳು ಮಾನವರಿಗೆ ಸೇರಿದಂತೆ ಇತರ ಪರಿಸರ ವ್ಯವಸ್ಥೆಗಳಿಗೆ ಮತ್ತು ನಮ್ಮ ಹವಾಮಾನಕ್ಕೆ ಅತ್ಯಗತ್ಯ. ಪ್ರವಾಹ ನಿಯಂತ್ರಣ ಮತ್ತು ನೀರಿನ ಶುದ್ಧೀಕರಣ, ನೀರಿನ ನಿಯಂತ್ರಣದಂತಹ ಅಗತ್ಯ ಪರಿಸರ ವ್ಯವಸ್ಥೆಯ ಸೇವೆಗಳನ್ನು ಒದಗಿಸುತ್ತವೆ. ಪ್ರಪಂಚದಾದ್ಯಂತ ಒಂದು ಶತಕೋಟಿಗೂ ಹೆಚ್ಚು ಜನರು ತಮ್ಮ ಜೀವನೋಪಾಯಕ್ಕಾಗಿ ಜೌಗು ಪ್ರದೇಶಗಳನ್ನು ಅವಲಂಬಿಸಿದ್ದಾರೆ. ಅಂದರೆ ಭೂಮಿಯ ಮೇಲಿನ ಎಂಟು ಜನರಲ್ಲಿ ಒಬ್ಬರು ಜೌಗು ಪ್ರದೇಶದಿಂದ ತಮ್ಮ ಜೀವನವನ್ನು ಕಟ್ಟಿಕೊಂಡಿದ್ದಾರೆ. ಜೌಗು ಪ್ರದೇಶಗಳು ಒಂದು ಲಕ್ಷಕ್ಕೂ ಹೆಚ್ಚು ಪ್ರಭೇದದ ಜೀವಿಗಳಿಗೆ ಆಶ್ರಯ ನೀಡಿವೆ. ಈ ಜೌಗು ಪ್ರದೇಶಗಳಿಂದ ಬೆಳೆಯುವ ಅಕ್ಕಿ ಮುಂತಾದ ಪ್ರಧಾನ ಆಹಾರವನ್ನು 300 ಕೋಟಿ ಜನರು ಅವಲಂಬಿಸಿದ್ದಾರೆ. ಅಲ್ಲದೆ ಜೌಗು ಪ್ರದೇಶಗಳು ಪ್ರವಾಹ ಸಂದರ್ಭದಲ್ಲಿ ನೈಸರ್ಗಿಕ ಆಘಾತ ತಡೆಗಳ ಹಾಗೆ ವರ್ತಿಸಿ, ಅನಾಹುತವನ್ನು ತಪ್ಪಿಸುತ್ತವೆ. ಹಾಗಾಗಿ ಇವುಗಳು ನಿರ್ಣಾಯಕ ಪರಿಸರ ವ್ಯವಸ್ಥೆಗಳಾಗಿವೆ. ಇಂತಹ ಮಹತ್ವವುಳ್ಳ ಜೌಗು ಪ್ರದೇಶಗಳು ಇತ್ತೀಚಿನ ದಶಕಗಳಲ್ಲಿ ತೀವ್ರ ಅಪಾಯದಲ್ಲಿವೆ.

1700ರ ದಶಕದಿಂದ ಪ್ರಪಂಚದ ಶೇಕಡಾ 90ರಷ್ಟು ಜೌಗು ಪ್ರದೇಶಗಳು ಅವನತಿಗೆ ಒಳಗಾಗಿವೆ. ಇವುಗಳ ಅವನತಿಯ ವೇಗ ಕಾಡುಗಳಿಗಿಂತ ಮೂರು ಪಟ್ಟು ಇದೆ ಎಂಬುದು ಆತಂಕದ ಸಂಗತಿ. ಕೇವಲ 50 ವರ್ಷಗಳಲ್ಲಿ ಅಂದರೆ 1970ರಿಂದ ಇತ್ತೀಚೆಗೆ ಪ್ರಪಂಚದ ಶೇ. 35ರಷ್ಟು ಜೌಗುಭೂಮಿಗಳು ನಾಶವಾಗಿವೆ. ಜೌಗು ಪ್ರದೇಶಗಳ ನಷ್ಟಕ್ಕೆ ಮಾನವನ ಚಟುವಟಿಕೆಗಳೇ ಪ್ರಮುಖ ಕಾರಣ. ಕೃಷಿ, ಒಳಚರಂಡಿ, ಮಿತಿಮೀರಿದ ಮೀನುಗಾರಿಕೆ, ಸಂಪನ್ಮೂಲಗಳ ಅತಿಯಾದ ಶೋಷಣೆ, ಹವಾಮಾನ ಬದಲಾವಣೆ ಇವೆಲ್ಲವೂ ಕಾರಣಗಳಾಗಿವೆ.

ಜೌಗುಭೂಮಿಯ ನಷ್ಟದ ಅಪಾಯವು ಜನಜೀವನದ ಮೇಲೆ ಘೋರ ಪರಿಣಾಮ ಬೀರಲಿದೆ. ಜೌಗು ಪ್ರದೇಶಗಳು ಬಂಜರು ಭೂಮಿಯಾಗಿ ಪರಿವರ್ತನೆಯಾಗುತ್ತಿವೆ. ಇದನ್ನು ತಪ್ಪಿಸಿ ಅವುಗಳನ್ನು ಬಲಪಡಿಸುವ ಮತ್ತು ಸುಸ್ಥಿರ ಅಭಿವೃದ್ಧಿಯ ಮೂಲಗಳನ್ನಾಗಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ 1971ರಿಂದ ಆಚರಿಸುತ್ತಿರುವ ವಿಶ್ವ ಜೌಗು ಭೂಮಿ ಸಮಾವೇಶವು ಹೆಚ್ಚು ಮಹತ್ವ ಹೊಂದಿದೆ. ಈ ಸಮಾವೇಶದಿಂದ ಕಳೆದುಹೋದ ಜೌಗು ಭೂಮಿಯನ್ನು ಪುನರ್ ನಿರ್ಮಾಣ ಮಾಡುವ ಜೊತೆಗೆ ಹೊಸ ಜೌಗು ಭೂಮಿಗಳನ್ನು ನಿರ್ಮಿಸುವ ಕಾರ್ಯ ಮಾಡಲಾಗುತ್ತಿದೆ. ಪ್ರಪಂಚದ 175ಕ್ಕೂ ಹೆಚ್ಚು ದೇಶಗಳು ವಿಶ್ವ ಜೌಗು ಸಮಾವೇಶದಲ್ಲಿ ಭಾಗವಹಿಸುತ್ತವೆ. ಸಮಾವೇಶದಲ್ಲಿ ಭಾಗವಹಿಸುವ ಪ್ರತೀ ದೇಶವು ವಿಶ್ವ ಜೌಗು ಭೂಮಿ ದಿನದ ಅಂಗವಾಗಿ ಪ್ರತಿವರ್ಷ ಕೆಲವು ಜೌಗು ಪ್ರದೇಶಗಳನ್ನು ಗುರುತಿಸಿ ಅವುಗಳಿಗೆ ರಾಮ್ಸರ್ ಜೌಗು ಪ್ರದೇಶಗಳೆಂದು ನಾಮಕರಣ ಮಾಡಲಾಗುತ್ತದೆ. ಪ್ರಸಕ್ತ ಪ್ರಪಂಚದಾದ್ಯಂತ 2,400ಕ್ಕೂ ಹೆಚ್ಚು ರಾಮ್ಸರ್ ಜೌಗು ಪ್ರದೇಶಗಳಿವೆ. ಅದರಂತೆ ನಮ್ಮ ಭಾರತದಲ್ಲೂ 75 ರಾಮ್ಸರ್ ಜೌಗು ಪ್ರದೇಶಗಳನ್ನು ಗುರುತಿಸಲಾಗಿದೆ. ಈ ವರ್ಷ 5 ಸ್ಥಳಗಳು ಈ ಪಟ್ಟಿಗೆ ಸೇರಿವೆ. ಅದರಲ್ಲಿ ಕರ್ನಾಟಕದ 3 ಹಾಗೂ ತಮಿಳುನಾಡಿನ 2 ಜೌಗುಪ್ರದೇಶಗಳನ್ನು ಸೇರಿಸಲಾಗಿದೆ. ಕರ್ನಾಟಕದ ಗದಗ ಜಿಲ್ಲೆಯ ಮಾಗಡಿ ಪಕ್ಷಿಗಳ ಸಂರಕ್ಷಿತ ಪ್ರದೇಶ, ವಿಜಯನಗರ ಜಿಲ್ಲೆಯ ಅಂಕಸಮುದ್ರ ಪಕ್ಷಿ ಸಂರಕ್ಷಿತ ಮೀಸಲು ಹಾಗೂ ಕರಾವಳಿಯ ಅಘನಾಶಿನಿ ಅಳಿವೆಯನ್ನು ಸೇರಿಸಲಾಗಿದೆ.

ಸಮಾವೇಶದಲ್ಲಿ ಭಾಗವಹಿಸುವ ಪ್ರತೀ ದೇಶವು ಜೌಗು ಭೂಮಿ ನಿರ್ವಹಣೆಗಾಗಿ ರಾಷ್ಟ್ರೀಯ ಯೋಜನೆಗಳು, ನೀತಿಗಳು ಮತ್ತು ಶಾಸನಗಳು, ನಿರ್ವಹಣಾ ಕ್ರಮಗಳು ಮತ್ತು ಸಾರ್ವಜನಿಕ ಶಿಕ್ಷಣದ ಮೂಲಕ ತಮ್ಮ ಪ್ರದೇಶದಲ್ಲಿನ ಎಲ್ಲಾ ಜೌಗು ಪ್ರದೇಶಗಳು ಮತ್ತು ಜಲಸಂಪನ್ಮೂಲಗಳ ಬುದ್ಧಿವಂತ ಬಳಕೆಗೆ ಕೆಲಸ ಮಾಡಲು ಬದ್ಧವಾಗಿರುತ್ತವೆ. ಅಂದರೆ ರಾಮ್ಸರ್ ಜೌಗು ಪ್ರದೇಶ ಎಂದು ಘೋಷಣೆಯಾದ ನಂತರ ಜೌಗು ಪ್ರದೇಶಗಳಲ್ಲಿ ಸಮಗ್ರ ನಿರ್ವಹಣಾ ಯೋಜನೆಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಇದರಿಂದ ಈ ತಾಣಗಳು ಇನ್ನಷ್ಟು ಸಂರಕ್ಷಿತ ತಾಣಗಳಾಗಿ ಅಭಿವೃದ್ದಿ ಹೊಂದಲಿವೆ.

ರಾಮ್ಸರ್ ಪಟ್ಟಿಯಲ್ಲಿ ಜೌಗು ಪ್ರದೇಶವನ್ನು ಸೇರಿಸುವುದು ಅದರ ಪರಿಸರ ಗುಣಲಕ್ಷಣಗಳನ್ನು ಕಾಪಾಡಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳುವುದು ಸರಕಾರದ ಬದ್ಧತೆಯನ್ನು ಎತ್ತಿತೋರಿಸುತ್ತದೆ. ಕರ್ನಾಟಕದ ಇನ್ನಷ್ಟು ಪ್ರದೇಶಗಳು ರಾಮ್ಸರ್ ಪಟ್ಟಿಗೆ ಸೇರುವ ಜೀವವೈವಿಧ್ಯ ತಾಣಗಳಾಗಿ ಹೊರಹೊಮ್ಮಲಿ ಎಂಬುದು ನಮ್ಮ ಆಶಯ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಬಿ. ಗುರುಬಸವರಾಜ

contributor

Similar News