×
Ad

ಎಲ್‌ಪಿಜಿ ದರ ಏರಿಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ರಸ್ತೆಯಲ್ಲೇ ಒಲೆ ಹಾಕಿ ಚಹಾ ತಯಾರಿಸಿ ಕೇಂದ್ರದ ವಿರುದ್ಧ ಆಕ್ರೋಶ

Update: 2026-03-10 21:11 IST

ಉಡುಪಿ, ಮಾ.10: ಎಲ್‌ಪಿಜಿ ದರ ಏರಿಕೆ ಮಾಡಿರುವ ಕೇಂದ್ರ ಸರಕಾರದ ಜನವಿರೋಧಿ ನೀತಿಯನ್ನು ವಿರೋಧಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಂಗಳವಾರ ಉಡುಪಿ ಬ್ರಹ್ಮಗಿರಿ ಸರ್ಕಲ್ ಬಳಿ ಪ್ರತಿಭಟನೆ ನಡೆಸಲಾಯಿತು.

ಕಾಂಗ್ರೆಸ್ ಭವನದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಬ್ರಹ್ಮಗಿರಿ ಸರ್ಕಲ್‌ಗೆ ಸಾಗಿದ ಮುಖಂಡರು ಹಾಗೂ ಕಾರ್ಯಕರ್ತರು, ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು. ಇದೇ ಸಂದರ್ಭ ಕಾಂಗ್ರೆಸ್‌ನ ಮಹಿಳಾ ಕಾರ್ಯಕರ್ತೆಯರು ರಸ್ತೆಯಲ್ಲೇ ಒಲೆ ಹಾಕಿ ಚಹಾ ತಯಾರಿಸಿ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಬಡವರಿಗೆ, ಕಾರ್ಮಿಕರಿಗೆ, ಮಹಿಳೆಯರಿಗೆ ಅನ್ಯಾಯ ಮಾಡುತ್ತಿದೆ. ನಮ್ಮ ದೇಶವು ಅಮೆರಿಕದ ಮುಂದೆ ಮಂಡಿಯೂರಿ ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜನರ ಬದುಕಿನ ಜೊತೆ ಚೆಲ್ಲಾಟವಾಡುವ ಕೇಂದ್ರ ಬಿಜೆಪಿ ಸರಕಾರಕ್ಕೆ ಮುಂದಿನ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.

ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್ ಮಾತನಾಡಿ, ಮಧ್ಯಪ್ರಾಚ್ಯ ಬಿಕ್ಕಟ್ಟಿನ ನಡೆಯುವೆಯೂ ಭಾರತದಲ್ಲಿ ಇಂಧನ ಕೊರತೆ ಇಲ್ಲ, ಆದ್ದರಿಂದ ನಮ್ಮ ಇಂಧನ ಗ್ರಾಹಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಕೆಂದ್ರ ಪೆಟ್ರೋಲಿಂ ಸಚಿವರು ಹೇಳಿದರು. ಆದರೆ ಕೇಂದ್ರ ಸರಕಾರವು ಗೃಹ ಬಳಕೆ ಸಿಲಿಂಡರ್ ಬೆಲೆಯನ್ನು ಏಕಾ ಏಕಿ ಹೆಚ್ಚಳ ಮಾಡಿದೆ. ಇದು ಮಧ್ಯಮ ವರ್ಗ ಮತ್ತು ಬಡ ಕುಟುಂಬಗಳ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ ಎಂದು ದೂರಿದರು.

ಇರಾಕ್ ಮೇಲೆ ನಡೆಯುತ್ತಿರುವ ದಾಳಿ ಬಗ್ಗೆ ವಿಶ್ವಗುರು ಎಂದು ಹೇಳುತ್ತಿರುವವರು ಒಂದೇ ಒಂದು ಮಾತುಗಳನ್ನು ಆಡುತ್ತಿಲ್ಲ. ಕೂಡಲೇ ಯುದ್ಧ ನಿಲ್ಲಬೇಕು ಮತ್ತು ದೇಶದಲ್ಲಿ ಬೆಲೆ ಏರಿಕೆಯನ್ನು ತಡೆಯಬೇಕು. ಆದರೆ ಬಿಜೆಪಿ ಇಂದು ಜನರ ಮಧ್ಯೆ ಧರ್ಮದ ಹೆಸರಿನಲ್ಲಿ ಒಡಕು ಮೂಡಿಸುವ ಕಾರ್ಯ ಮಾಡುತ್ತಿದೆ. ಈ ಮೂಲಕ ಮತ ಪಡೆದು ರಾಜ ಕೀಯ ಲಾಭ ಗಳಿಸುವ ಹುನ್ನಾರ ನಡೆಸುತ್ತಿದೆ ಎಂದು ಅವರು ಟೀಕಿಸಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ದಿನೇಶ್ ಹೆಗ್ಡೆ ಮೊಳಹಳ್ಳಿ, ವೆರೋನಿಕಾ ಕರ್ನೆಲಿಯೋ, ಜ್ಯೋತಿ ಹೆಬ್ಬಾರ್, ಹರೀಶ್ ಕಿಣಿ, ಶಂಕರ್ ಕುಂದರ್, ಗೋಪಿನಾಥ್ ಭಟ್, ಭುಜಂಗ ಶೆಟ್ಟಿ, ಭಾಸ್ಕರ್ ರಾವ್ ಕಿದಿಯೂರು, ಪ್ರಖ್ಯಾತ್ ಶೆಟ್ಟಿ, ಶಬ್ಬಿರ್ ಅಹ್ಮದ್, ಕೀರ್ತಿ ಶೆಟ್ಟಿ, ಪ್ರಶಾಂತ ಜತ್ತನ್ನ, ಮಹಾಬಲ ಕುಂದರ್, ಕಿರಣ್ ಹೆಗ್ಡೆ, ಜಯ ಕುಮಾರ್, ಮಮತಾ ಶೆಟ್ಟಿ, ಸುಖಾನ್ಯ, ಮೀನಾಕ್ಷಿ ಮಾಧವ ಬನ್ನಂಜೆ, ಪ್ರಭಾ ಶೆಟ್ಟಿ, ರೋಶನ್ ಶೆಟ್ಟಿ, ಕಿಶೋರ್ ಕುಮಾರ್ ಎರ್ಮಾಳ್, ಗಣೇಶ್ ನೆರ್ಗಿ, ಸತೀಶ್ ಕೊಡವೂರು, ಫಾ,ವಿಲಿಯಂ ಮಾರ್ಟಿಸ್, ಸರ್ಪುದ್ದೀನ್ ಶೇಖ್, ಶಶಿಧರ ಶೆಟ್ಟಿ ಎಲ್ಲೂರು, ಶೇಖ್ ವಾಹಿದ್ ಮೊದಲಾದವರು ಉಪಸ್ಥಿತರಿದ್ದರು.



 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News