ನಾಗ್ಪುರ ಚಲನಚಿತ್ರೋತ್ಸವ ಮಾಹೆಯ ‘ಯಕ್ಷಗಾನ’ ಕುರಿತ ಸಾಕ್ಷ್ಯಚಿತ್ರಕ್ಕೆ ಅಗ್ರಪ್ರಶಸ್ತಿ
ಮಣಿಪಾಲ, ಎ.1:ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ)ಯಿಂದ ನಿರ್ಮಾಣಗೊಂಡ ‘ಡಿಸರ್ನಿಂಗ್ ಇಂಡಿಯಾ: ಯಕ್ಷಗಾನ’ ಸಾಕ್ಷ್ಯಚಿತ್ರವು ನಾಗ್ಪುರ ಚಲನಚಿತ್ರೋತ್ಸವ-2026ರಲ್ಲಿ ವೃತ್ತಿಪರ ವಿಭಾಗದ ’ಅತ್ಯುತ್ತಮ ಸಾಕ್ಷ್ಯಚಿತ್ರ’ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಮಾಹೆಯ ಅಂತರ ಸಾಂಸ್ಕೃತಿಕ ಅಧ್ಯಯನ ಮತ್ತು ಸಂವಾದ ಕೇಂದ್ರ (ಸಿಐಎಸ್‌ಡಿ)ವು ಈ ಸಾಕ್ಷ್ಯಚಿತ್ರವನ್ನು ನಿರ್ಮಿಸಿದ್ದು, ಕರಾವಳಿ ಕರ್ನಾಟಕದ ಹೆಮ್ಮೆಯ ಕಲೆಯಾದ ಯಕ್ಷಗಾನದ ಐತಿಹಾಸಿಕ ವಿಕಸನ ಮತ್ತು ಸಾಂಸ್ಕೃತಿಕ ಮಹತ್ವವನ್ನು ಇದು ಜಗತ್ತಿಗೆ ಪರಿಚಯಿಸಿದೆ.
ಈ ಬಾರಿಯ ನಾಗ್ಪುರ ಚಲನಚಿತ್ರೋತ್ಸವಕ್ಕೆ ದೇಶದಾದ್ಯಂತ ವಿವಿಧ ವಿಭಾಗಗಳಲ್ಲಿ ಒಟ್ಟು 304 ಪ್ರವೇಶಗಳು ಬಂದಿದ್ದವು. ಕಠಿಣ ಆಯ್ಕೆ ಪ್ರಕ್ರಿಯೆಯ ನಂತರ 189 ಚಿತ್ರಗಳನ್ನು ಪ್ರದರ್ಶನಕ್ಕೆ ಆಯ್ಕೆ ಮಾಡಲಾಗಿತ್ತು. ಇದರಲ್ಲಿ ಮಾಹೆಯ ‘ಯಕ್ಷಗಾನ’ ಸಾಕ್ಷ್ಯಚಿತ್ರವು ಕಲಾತ್ಮಕ ಮೌಲ್ಯ ಮತ್ತು ಆಳವಾದ ಸಂಶೋಧನೆಯಿಂದಾಗಿ ಈ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ನಾಗ್ಪುರದ ರಾಷ್ಟ್ರ ಸಂತ ತುಕಾಡೋಜಿ ಮಹಾರಾಜ್ ವಿಶ್ವವಿದ್ಯಾಲಯದಲ್ಲಿ ಮಾ.29ರಂದು ಈ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು. ಸಿಐಎಸ್‌ಡಿ ಸಂಸ್ಥೆಯ ‘ಲಿವಿಂಗ್ ಕಲ್ಚರ್ಸ್ ಆಫ್ ತುಳುನಾಡು’ ಎಂಬ ಮಹತ್ವಾಕಾಂಕ್ಷೆಯ ಸಂಶೋಧನಾ ಯೋಜನೆಯ ಭಾಗವಾಗಿ ಈ ಸಾಕ್ಷ್ಯಚಿತ್ರವನ್ನು ಸಿದ್ಧಪಡಿ ಸಲಾಗಿದೆ. ಕರಾವಳಿಯ ಸಂಪ್ರದಾಯ ಗಳನ್ನು ಸಂರಕ್ಷಿಸುವ ಮತ್ತು ವಿಶ್ಲೇಷಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ.
ಈ ಪ್ರಶಸ್ತಿ, ಸಂಸ್ಥೆ ನಿರ್ಮಿಸುವ ವಿವಿಧ ವಿಷಯಗಳ ಕುರಿತ ಸಾಕ್ಷ್ಯಚಿತ್ರದ ಸಾಧನೆಗೆ ಹೊಸ ಗರಿಯಂತಾಗಿದೆ. ಇದು ಈಗಾಗಲೇ ವಾರಣಾಸಿಯ ಅಂತಾರಾಷ್ಟ್ರೀಯ ಕಿರು ಚಿತ್ರೋತ್ಸವದಲ್ಲಿ ಜ್ಯೂರಿ ಪ್ರಶಸ್ತಿಯನ್ನೂ ಪಡೆದಿದೆ. ಜತೆಗೆ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ನಡೆದ ‘ವರ್ಲ್ಡ್ ಕಲ್ಚರ್ಸ್ ಫಿಲ್ಮ್ ಫೆಸ್ಟಿವಲ್’ನಲ್ಲಿ ಸೆಮಿಫೈನಲ್ ಹಂತ ತಲುಪಿದೆ.
‘ಯಕ್ಷಗಾನ’ ಸಾಕ್ಷ್ಯಚಿತ್ರದ ಕುರಿತು ಮಾತನಾಡಿದ ಸಿಐಎಸ್‌ಡಿ ಸಂಯೋಜಕ ಡಾ. ಪ್ರವೀಣ್ ಕೆ. ಶೆಟ್ಟಿ, ಪ್ರಶಸ್ತಿಯು ಶೈಕ್ಷಣಿಕ ಸಂಶೋಧನೆ ಮತ್ತು ಸಾಂಸ್ಕೃತಿಕ ದಾಖಲೀಕರಣದ ನಡುವೆ ಅರ್ಥಪೂರ್ಣ ಸೇತುವೆಯನ್ನು ನಿರ್ಮಿಸುವ ಹಾಗೂ ಅಂತರಶಿಸ್ತೀಯ ಸಂಶೋಧನೆಗೆ ಉತ್ತೇಜನ ನೀಡಿದೆ. ಈ ಸಾಕ್ಷ್ಯಚಿತ್ರದ ಯಶಸ್ಸು, ಆಳವಾದ ಸಂಶೋಧನೆ ಮತ್ತು ನವೀನ ಕಥಾವಾಚನದ ಮೂಲಕ ಭಾರತದ ಪರಂಪರೆಗಳೊಂದಿಗೆ ನಿರಂತರ ಸಂಪರ್ಕವನ್ನು ಸಾಧಿಸುವಲ್ಲಿ ಸಿಐಎಸ್‌ಡಿ ವಹಿಸುತ್ತಿರುವ ಮಹತ್ವದ ಪಾತ್ರವನ್ನು ಗಟ್ಟಿಗೊಳಿಸಿದೆ ಎಂದು ತಿಳಿಸಿದ್ದಾರೆ.