×
Ad

ಜನತೆಗೆ ಅಚ್ಚೇದಿನ್ ಬದಲು ಬಡತನದ ಕೊಡುಗೆ ನೀಡಿದ ಪ್ರಧಾನಿ: ಕಾಂಗ್ರೆಸ್ ಟೀಕೆ

Update: 2026-05-24 19:53 IST

ಉಡುಪಿ, ಮೇ 24: ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಪಡೆದ ಕೂಡಲೇ ದೇಶದ ಜನತೆಗೆ ಅಚ್ಚೇದಿನ್ ಬರುತ್ತದೆ ಎಂದು ನಂಬಿಸಿ ಈಗ 12 ವರ್ಷಗಳ ಅಧಿಕಾರ ಅನುಭವಿಸಿದ ಬಳಿಕ ಪ್ರಧಾನಿಗಳು ದೇಶಕ್ಕೆ ಬಡತನ ಬರುತ್ತದೆ ಹುಷಾರ್ ಎಂದು ಜನರಿಗೆ ಎಚ್ಚರಿಕೆ ನೀಡುತ್ತಿರುವುದು ನಂಬಿದ ಜನತೆಗೆ ದ್ರೋಹ ಬಗೆದಂತೆ. ಆದರೆ ಈ ದೇಶದಲ್ಲಿ ಬಡತನ ಹೆಚ್ಚಲು ಕಾರಣ ಮತ್ತು ಸರಕಾರದ ಆಡಳಿತ ವೈಫಲ್ಯದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವುದು ಅಗತ್ಯ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಟೀಕಿಸಿದೆ.

ಕಳೆದ ಹಲವಾರು ವರ್ಷಗಳಿಂದ ದೇಶದ ಸಂಪತ್ತಿನ ದೊಡ್ಡ ಭಾಗ ಕೆಲವೇ ಶ್ರೀಮಂತ ಕಾರ್ಪೊರೇಟ್‌ಗಳು ಮತ್ತು ಆರ್ಥಿಕವಾಗಿ ಪ್ರಬಲ ವರ್ಗಗಳ ಕೈಯಲ್ಲಿ ಕೇಂದ್ರೀಕೃತವಾಗುವಲ್ಲಿ ಬಿಜೆಪಿಯ ಆಡಳಿತ ಪೂರಕವಾಗಿದೆ. ಈ ಹಿನ್ನಲೆಯಲ್ಲಿ ಕೋಟ್ಯಾಂತರ ಯುವಕರು ಉದ್ಯೋಗ ಕ್ಕಾಗಿ ಅಲೆದಾಡುತ್ತಿದ್ದಾರೆ. ಸಣ್ಣ ವ್ಯಾಪಾರಿಗಳು, ರೈತರು ಮತ್ತು ಕಾರ್ಮಿಕರು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಆರ್ಥಿಕ ಒತ್ತಡವನ್ನು ಎದುರಿಸುತ್ತಿದ್ದಾರೆ. ಇಂತಹ ಪರಿಸ್ಥಿತಿ ಯಲ್ಲಿ ಪ್ರಧಾನಿಗಳ ಬಡತನ ಬರುತ್ತದೆ ಹುಷಾರ್ ಎಂಬ ಎಚ್ಚರಿಕೆಯ ಹೇಳಿಕೆಯು ಜನರ ಆತಂಕವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಕಾಂಗ್ರೆಸ್ ತಿಳಿಸಿದೆ.

ಬಡತನದ ವಿರುದ್ಧ ಹೋರಾಟವು ಕೇವಲ ಭಾಷಣಗಳಿಂದ ಸಾಧ್ಯವಿಲ್ಲ. ಗುಣಮಟ್ಟದ ಶಿಕ್ಷಣ, ಉದ್ಯೋಗ ಸೃಷ್ಟಿ, ರೈತರಿಗೆ ನ್ಯಾಯಯುತ ಬೆಲೆ, ಕಾರ್ಮಿಕರ ಹಕ್ಕುಗಳ ರಕ್ಷಣೆ, ಸಣ್ಣ ವ್ಯಾಪಾರಿಗಳಿಗೆ ಬೆಂಬಲ ಮತ್ತು ಸಾಮಾಜಿಕ ನ್ಯಾಯದ ನೀತಿಗಳ ಮೂಲಕವೇ ಬಡತನವನ್ನು ಶಾಶ್ವತವಾಗಿ ಕಡಿಮೆ ಮಾಡಬಹುದು. ದೇಶಕ್ಕೆ ಬೇಕಾಗಿರುವುದು ಬಡತನದ ಎಚ್ಚರಿಕೆ ಅಲ್ಲ; ಬಡತನವನ್ನು ನಿರ್ಮೂಲನೆ ಮಾಡುವ ದೃಢ ಸಂಕಲ್ಪ ಇರಬೇಕಾಗಿದೆ ಕೇಂದ್ರದ ಬಿಜೆಪಿ ಆಡಳಿತ ಆದಕ್ಕೆ ವಿರುದ್ಧವಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಭಾಸ್ಕರ ರಾವ್ ಕಿದಿಯೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News