×
Ad

ದಲಿತರು ನಾಮ ಹಾಕಿದ ತಕ್ಷಣ ಮೇಲ್ಜಾತಿಯವರಾಗುವುದಿಲ್ಲ: ಜಯನ್ ಮಲ್ಪೆ

Update: 2026-06-09 20:09 IST

ಮಲ್ಪೆ, ಜೂ.9: ದಲಿತರು ನಾಮ ಹಾಕಿಕೊಂಡು ಧಾರ್ಮಿಕ ಆಚರಣೆ ಮಾಡಿದ ತಕ್ಷಣ ಮೇಲ್ಜಾತಿಯವರಾಗುತ್ತೇವೆ ಎಂದುಕೊಂಡಿದ್ದರೆ ಅದನ್ನು ಬಿಟ್ಟುಬಿಡಬೇಕು. ನಾಮ ಹಾಕಿದರೆ ಸಮಾಜದಲ್ಲಿ ವಿಶೇಷ ಸ್ಥಾನಮಾನ ಸಿಗುತ್ತದೆ. ದಲಿತರನ್ನು ಅಸ್ಪಶ್ಯರಂತೆ ನೋಡುವುದಿಲ್ಲ ಎಂಬ ತಪ್ಪು ಕಲ್ಪನೆ ಯಿಂದ ಹೊರಬೇಕು ಎಂದು ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದ್ದಾರೆ.

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಉಡುಪಿ ಜಿಲ್ಲಾ ಶಾಖೆ ಆಶ್ರಯದಲ್ಲಿ ಮಲ್ಪೆ ಸರಸ್ವತಿ ಜಾನಪದ ಕಲಾಮಂದಿರದಲ್ಲಿ ಆಯೋಜಿಸ ಲಾದ ದಲಿತ ಚಳವಳಿಯ ಪಿತಾಮಹ ಪ್ರೋ.ಬಿ.ಕೃಷ್ಣಪ್ಪರವರ ಎಂಬತ್ತೆಂಟ್ಟನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಧಾರ್ಮಿಕ ಆಚರಣೆಗಿಂತಲೂ ದಲಿತರು ಅಂಬೇಡ್ಕರರನ್ನು ಅರ್ಥ ಮಾಡಿಕೊಳ್ಳಬೇಕು. ಕೇವಲ ಕಾರ್ಯಕ್ರಮದಲ್ಲಿ ಭಾಗವಹಿಸಿ ಜೈಭೀಮ್ ಹೇಳಿ ಮನೆಗೆ ಹೋಗಿ ಸತ್ಯನಾರಾಯಣ ಪೂಜೆ ಮಾಡುವುದಲ್ಲ. ಅಧಿಕಾರದ ಕೇಂದ್ರವಾದ ಗ್ರಾಮ ಪಂಚಾಯತ್‌ನಿಂದ ಹಿಡಿದು ಪಾರ್ಲಿಮೆಂಟ್‌ನ ಮೆಟ್ಟಲು ಹತ್ತಲು ಪ್ರಯತ್ನಿಸಬೇಕು ಎಂದರು.

ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ ಮಾತನಾಡಿ ಕೃಷ್ಣಪ್ಪನವರಂತಹ ಮೊದಲ ಸಾಲಿನ ದಲಿತ ನಾಯಕರ ಧೋರಣೆಗಳನ್ನು ಅರಗಿಸಿಕೊಂಡೇ ರಾಜ್ಯದಲ್ಲಿ ದಲಿತ ಸಮುದಾಯ ಬಲಗೊಳ್ಳಬೇಕಿದೆ. ಪ್ರತ್ಯೇಕವಾಗಿ ಯಾವುದೇ ಸ್ವಂತ ವಾದವೊಂದನ್ನು ಕೃಷ್ಣಪ್ಪ ಮಂಡಿಸದಿದ್ದರೂ ದಲಿತ ವಿವೋಚನೆ ಪ್ರಶ್ನೆ ಬಂದಾಗಲೆಲ್ಲ ಅವರು ಅಂಬೇಡ್ಕರ್ ಕಡೆಗೆ ಕಣ್ಣು ತೆರೆಸಿದ್ದರು ಎಂದರು.

ಪರಿಶಿಷ್ಟಜಾತಿ ಮತ್ತು ಪಂಗಡದ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಪರಮೇಶ್ವರ ಉಪ್ಪೂರು ಮುಖ್ಯ ಅತಿಥಿಯಾ ಗಿದ್ದರು. ಅಧ್ಯಕ್ಷತೆಯನ್ನು ದಸಂಸ ಜಿಲ್ಲಾ ನಾಯಕ ಹರೀಶ್ ಸಾಲ್ಯಾನ್ ವಹಿಸಿದ್ದರು. ಹಿರಿಯ ದಲಿತ ಮುಖಂಡ ದಯಾಕರ ಮಲ್ಪೆ ಮಾತನಾಡಿದರು.

ದಲಿತ ನಾಯಕರಾದ ಶಿವಣ್ಣ ಪರ್ಕಳ, ಪ್ರಸಾದ್ ನೆರ್ಗಿ, ರವಿರಾಜ್ ಲಕ್ಷ್ಮಿನಗರ, ಕೃಷ್ಣ ಶಿರಿಯಾನ್ ನೆರ್ಗಿ, ನಾರಾಯಣ ಪರ್ಕಳ, ಬಿ.ಎನ್. ಪ್ರಶಾಂತ್, ಸುಶೀಲ್ ಕುಮಾರ್ ಕೊಡವೂರು, ಅರುಣ್ ಸಾಲ್ಯಾನ್, ದೀಪಕ್ ಕೊಡವೂರು, ಮುರಳಿ ಕೊಡಂಕೂರು, ಶ್ಯಾಮ್‌ರಾಜ್ ಸಾಬ್ರಕಟ್ಟೆ, ವಾದಿರಾಜ್ ಪಾಳೇಕಟ್ಟೆ, ಹರೀಶ್ ಅಮೀನ್ ನೆರ್ಗಿ, ಗುಣವಂತ ತೊಟ್ಟಂ, ಮೋಹನ್ ಗುಜ್ಜರಬೆಟ್ಟು, ನವೀನ್ ಬನ್ನಂಜೆ, ಜಯರಾಜ್ ಸಲ್ಯಾನ್, ಕಲಾವಿದ ಮೋಹನ್‌ದಾಸ್ ನೆರ್ಗಿ ಉಪಸ್ಥಿತರಿದ್ದರು. ಭಗವಾನ್ ಮಲ್ಪೆ ಸ್ವಾಗತಿಸಿದರು. ವಿನಯ ಬಲರಾಮನಗರ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News