×
Ad

ಉಡುಪಿ: ಸಿಡಿಲು ಬಡಿದು ಮನೆಗೆ ಹಾನಿ

Update: 2026-06-22 21:41 IST

ಉಡುಪಿ, ಜೂ.22: ಜಿಲ್ಲೆಗೆ ಮುಂಗಾರು ಮಳೆಯ ಪ್ರವೇಶವಾಗಿ ಮೂರು ವಾರಗಳು ಪೂರ್ಣಗೊಂಡಿದ್ದರೂ, ಮಳೆ ಇನ್ನೂ ಚುರುಕು ಗೊಂಡಿಲ್ಲ. ಇದರಿಂದ ಜಿಲ್ಲೆಯಲ್ಲಿ ಸಾಂಪ್ರದಾಯಿಕ ಕೃಷಿ ಚಟುವಟಿಕೆಗೆ ಇನ್ನೂ ಪೂರ್ಣಪ್ರಮಾಣ ದಲ್ಲಿ ಪ್ರಾರಂಭಗೊಂಡಿಲ್ಲ. ನೀರಿನ ವ್ಯವಸ್ಥೆ ಇದ್ದವರು ಇದ್ದಬದ್ಧ ವ್ಯವಸ್ಥೆಯಲ್ಲೇ ಬೀಜ ಬಿತ್ತನೆ ಮಾಡಿ ನೇಜಿಗಾಗಿ ಕಾಯುತಿದ್ದಾರೆ. ವಿವಿಧ ಆಧುನಿಕ ತಂತ್ರಜ್ಞಾನದ ಮೊರೆ ಹೋಗುತಿದ್ದಾರೆ.

ಜೂ.21ರಿಂದ ಕರ್ನಾಟಕ ಕರಾವಳಿ, ಮಲೆನಾಡು ಭಾಗಗಳಲ್ಲಿ ಮುಂಗಾರು ಚುರುಕು ಪಡೆಯಲಿದೆ ಎಂದು ಹವಾ ಮಾನ ಇಲಾಖೆ ಪ್ರಕಟಿಸಿದ್ದರೂ, ಸೋಮವಾರ ಅದರ ಯಾವ ಸೂಚನೆಯೂ ಸಿಕ್ಕಿಲ್ಲ. ಸಂಜೆಯ ಬಳಿಕ ಸಾಧಾರಣ ಮಳೆಯಾಗಿದೆ. ಆದರೆ ಇದು ‘ರಾವಣನ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ’ ಇದ್ದಂತೆ ಎಂದು ಕೃಷಿಕರು ಬಣ್ಣಿಸುತ್ತಾರೆ.

ಕಾಪು ತಾಲೂಕಿನ ಕುತ್ಯಾರು ಗ್ರಾಮದ ಶ್ರೀಧರ ಮೂಲ್ಯ ಎಂಬವರ ಮನೆಗೆ ರವಿವಾರ ಸಿಡಿಲು ಬಡಿದು ಮನೆಗೆ ಭಾಗಶ: ಹಾನಿಯಾಗಿದೆ. ಇದರಿಂದ ಉಂಟಾದ ನಷ್ಟದ ಪ್ರಮಾಣವನ್ನು 40ಸಾವಿರ ಎಂದು ಅಂದಾಜಿಸಲಾಗಿದೆ.

ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 20.7ಮಿ.ಮೀ. ಅಷ್ಟೇ ಮಳೆ ಬಿದ್ದಿದೆ. ಕಾಪುವಲ್ಲಿ 36.0ಮಿ.ಮೀ. ಮಳೆಯಾದರೆ, ಬೈಂದೂರಿನಲ್ಲಿ 27.8, ಕುಂದಾಪುರ ದಲ್ಲಿ 23.6, ಕಾರ್ಕಳದಲ್ಲಿ 22.4, ಉಡುಪಿಯಲ್ಲಿ 16.5, ಬ್ರಹ್ಮಾವರದಲ್ಲಿ 10.2 ಹಾಗೂ ಹೆಬ್ರಿಯಲ್ಲಿ 8.4ಮಿ.ಮೀ. ಮಳೆಯಾದ ವರದಿ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News