ಕೊರಗ ಸಮುದಾಯ ಜಾಗೃತಗೊಳ್ಳಬೇಕು: ನಾರಾಯಣ ಸ್ವಾಮಿ

ಕೊರಗರಿಂದ ಭೂಮಿಹಬ್ಬ -ಅಭಿವೃದ್ಧಿ ವಿಚಾರ ಸಂಕಿರಣ

Update: 2026-08-19 19:38 IST

ಉಡುಪಿ, ಆ.19: ಶಿಕ್ಷಣ ಕೊರಗ ಸಮುದಾಯದ ಮುಖ್ಯ ಧ್ಯೇಯ ಆಗಬೇಕು. ಈ ಸಮುದಾಯ ಇಂದು ವ್ಯವಸ್ಥೆ ಯನ್ನು ಪ್ರಶ್ನಿಸಲು ಶಿಕ್ಷಣವೇ ಮುಖ್ಯ ಕಾರಣ. ಆದುದರಿಂದ ಸಮುದಾಯದ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಅದೇ ರೀತಿ ಯುವಜನತೆ ತನ್ನ ಸಮುದಾಯದ ಬಗ್ಗೆ ಕಾಳಜಿ ಜೊತೆ ಎಚ್ಚರಿಕೆ ಕೂಡ ವಹಿಸಬೇಕಾಗಿದೆ. ಯಾರೂ ದುಶ್ಚಟಕ್ಕೆ ಬಲಿಯಾಗದಂತೆ ನೋಡಿ ಕೊಳ್ಳಬೇಕು ಎಂದು ಉಡುಪಿ ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆಯ ಯೋಜನಾ ಸಮನ್ವಯಾಧಿಕಾರಿ ಎಂ.ನಾರಾಯಣ ಸ್ವಾಮಿ ಹೇಳಿದ್ದಾರೆ.

ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ-ಕೇರಳ ವತಿಯಿಂದ ಶಿರ್ವ ಪೆರ್ನಾಲ್‌ನಲ್ಲಿರುವ ಆದಿವಾಸಿ ಶಿಕ್ಷಣ ಕೇಂದ್ರದಲ್ಲಿ ಮಂಗಳವಾರ ಆಯೋಜಿಸಲಾದ 19ನೇ ವರ್ಷದ ಭೂಮಿಯ ಹಬ್ಬ ಮತ್ತು ಅಭಿವೃದ್ಧಿ ವಿಚಾರ ಸಂಕಿರಣ ವನ್ನು ಡೋಲು ಬಡಿಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಕೊರಗ ಸಮುದಾಯ ತಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳಲು ತನ್ನ ವಿಶೇಷ ಸಂಸ್ಕೃತಿ, ಆಚರಣೆಗಳನ್ನು ಮುಂದುವ ರೆಸಿಕೊಂಡು ಹೋಗಬೇಕಾಗಿದೆ. ಸಮುದಾಯದ ಅಭಿವೃದ್ಧಿ ಜೊತೆ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಆ ಮೂಲಕ ಸಮುದಾಯವು ಜನಸಂಖ್ಯೆಗೆ ಅನುಗುಣವಾಗಿ ಇನ್ನಷ್ಟು ಪ್ರಗತಿ ಸಾಧಿಸಬೇಕು ಎಂದು ಅವರು ತಿಳಿಸಿದರು.

ಕರ್ನಾಟಕದಲ್ಲಿ ಜೇನು ಕುರುಬ ಹಾಗೂ ಕೊರಗ ಸಮುದಾಯ ಸೇರಿದಂತೆ ದೇಶದಲ್ಲಿ ಸುಮಾರು ಸಮುದಾಯ ವನ್ನು ವಿಶೇಷ ದುರ್ಬಲ ಬುಡಕಟ್ಟು ಗುಂಪುಗಳು(ಪಿವಿಟಿಜಿ) ಎಂಬುದಾಗಿ ಗುರುತಿಸಲಾಗಿದೆ. ಅದರಲ್ಲೂ ಕೊರಗ ಸಮುದಾಯ ವಿಶೇಷತೆಯನ್ನು ಬೆಳೆಸಿಕೊಂಡಿದೆ. ಭೂರಹಿತರಿಗೆ ಸರಕಾರ ದಿಂದ ದೊರೆತ ಭೂಮಿಯ ಸವಿನೆನಪಿ ಗಾಗಿ ಭೂಮಿ ಹಬ್ಬವನ್ನು ಇಂದಿಗೂ ಆಚರಿಸಿಕೊಂಡು ಬರುತ್ತಿದೆ ಎಂದರು.

ಮೂಡಬಿದಿರೆ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಕುರಿಯನ್, ಸಮುದಾಯದ ಹಿಂದಿನ ಸ್ಥಿತಿ, ನಡೆದ ಬಂದ ದಾರಿ, ಭವಿಷ್ಯದಲ್ಲಿ ಸಮುದಾಯ ಸಂಘಟನೆ, ಯುವಜನ, ವಿದ್ಯಾರ್ಥಿಗಳ ಕುರಿತು ವಿಚಾರ ಮಂಡಿಸಿದರು. ಸಮಗ್ರ ಗ್ರಾಮೀಣ ಆಶ್ರಮದ ಅಧ್ಯಕ್ಷ ಅಶೋಕ ಕುಮಾರ್ ಶೆಟ್ಟಿ ಮಾತನಾಡಿ, ಅಸ್ಪೃಶ್ಯತೆ ತಡೆಗಟ್ಟುವ ಕಾರ್ಯಕ್ರಮಗಳನ್ನು ಇಲಾಖೆ ಮಾಡಬೇಕು ಎಂದರು.

ಅಧ್ಯಕ್ಷತೆಯನ್ನು ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷೆ ಸುಶೀಲ ನಾಡ ವಹಿಸಿದ್ದರು. ಧ್ಯೇಯ ಗೀತೆಯನ್ನು ಗೆಳೆಯರ ಬಳಗ ಕಳ್ತೂರು ತಂಡದ ಸದಸ್ಯರು ಹಾಡಿದರು. ವಿನಂತಿ ಮುಂಡ್ಕೂರು ಸ್ವಾಗತಿಸಿದರು. ಸುಪ್ರಿಯಾ ಕಿನ್ನಿಗೋಳಿ ವಂದಿಸಿದರು. ವಿಮಲ ಕಳ್ತೂರು ಕಾರ್ಯಕ್ರಮ ನಿರೂಪಿಸಿದರು.

ಇದಕ್ಕೂ ಮುನ್ನಾ ಸೂಡಾ ಕ್ರಾಸ್‌ನಿಂದ ಆರಂಭಗೊಂಡ ಭೂಮಿ ಹಬ್ಬದ ಮೆರವಣಿಗೆಗೆ ಕೊರಗ ಸಂಘಟನೆಯ ಬೋಗ್ರ ಕೊಕ್ಕರ್ಣೆ ಡೋಲು ಬಾರಿಸುವ ಮೂಲಕ ಚಾಲನೆ ನೀಡಿದರು. ನಂತರ ಭೂಮಿ ಚಳುವಳಿ ಹೋರಾಟ ಗಾರ್ತಿ ಭಾರತಿ ಕಾಪು ಧ್ವಜಾರೋಹಣ ನರವೇರಿಸಿದರು. ಸುಶೀಲ ಕೆಮ್ಮಡೆ, ಹಾಗೂ ಬಸವ ಮುದೂರು ಸಸಿ ನೆಟ್ಟರು.

ಯುವಜನರ ಉದ್ಯೋಗ ನೇರ ನೇಮಕಾತಿಗಾಗಿ ನಡೆದ ಹೋರಾಟದಲ್ಲಿ 26 ದಿನಗಳ ಕಾಲವೂ ರಾತ್ರಿ ಹಗಲು ಪಾಲ್ಗೊಂಡ ನಾಗು ನಾಡ ಹಾಗೂ ಭೂಮಿ ಚಳುವಳಿಯ ಹೋರಾಟಗಾರ್ತಿ ಗೌರಿ ಪಾದೂರು ಹಬ್ಬದ ಜ್ಯೋತಿ ಬೆಳಗಿಸಿದರು. ಗುರುವಮ್ಮ ಐಕಳ ಹಬ್ಬದ ಸಿಹಿಜೇನು ಹಂಚಿದರು.

ಮಧ್ಯಾಹ್ನ ನಂತರ ವಿವಿಧ ತಂಡಗಳಿಂದ ಡೋಲು ವಾದನ, ಡೋಲು ಕುಣಿತ, ಮಕ್ಕಳು ಹಾಗೂ ಯುವಜನರಿಂದ ಹಾಡು, ಪ್ರಹಸನ, ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News