ಕಾರ್ಮಿಕರ ಸಮಸ್ಯೆಗಳಿಗೆ ಸಮಾಜ ವಾದವೇ ಪರ್ಯಾಯ: ಸುರೇಶ್ ಕಲ್ಲಾಗರ
ಉಡುಪಿ ಜಿಲ್ಲಾ ಹಂಚು ಕಾರ್ಮಿಕರ ಸಂಘದ ವಾರ್ಷಿಕ ಮಹಾಸಭೆ
ಕುಂದಾಪುರ, ಅ.25: ಬಂಡವಾಳಶಾಹಿ ವ್ಯವಸ್ಥೆ ಜನರ ಸಮಸ್ಯೆ ಪರಿಹರಿಸಲು ವಿಫಲವಾಗಿದೆ. ಕಾರ್ಮಿಕರ ಎಲ್ಲ ಸಮಸ್ಯೆಗಳಿಗೂ ಲಾಭಕೋರ ಬಂಡವಾಳ ಶಾಹಿ ಕಾರಣವಾಗಿದೆ. ಈ ಎಲ್ಲ ಸಮಸ್ಯೆಗಳಿಗೂ ಸಮಾಜವಾದವೇ ಪರ್ಯಾಯವಾಗಿದೆ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಹೇಳಿದ್ದಾರೆ.
ಕುಂದಾಪುರ ಹಂಚು ಕಾರ್ಮಿಕರ ಭವನದಲ್ಲಿ ರವಿವಾರ ನಡೆದ ಉಡುಪಿ ಜಿಲ್ಲಾ ಹಂಚು ಕಾರ್ಮಿಕರ ಸಂಘ (ಸಿಐಟಿಯು)ದ 26ನೇ ವಾರ್ಷಿಕ ಮಹಾಸಭೆ ಉದ್ದೇಶಿಸಿ ಅವರು ಮಾತನಾಡುತಿದ್ದರು.
ಅಧ್ಯಕ್ಷತೆ ವಹಿಸಿದ್ದ ಸಂಘ ಅಧ್ಯಕ್ಷ ವಿ.ನರಸಿಂಹ ಮಾತನಾಡಿ, ಕಾರ್ಮಿಕ ವರ್ಗದ ಉತ್ತಮ ಬದುಕಿಗಾಗಿ ದಾಳಿ ದಬ್ಬಾಳಿಕೆ ಎದುರಿಸಿ ಸಂಘಟನೆ ಬೆಳೆದಿದೆ. ಅಲ್ಲದೇ ಅಂತಹ ಕಾರ್ಮಿಕರ ಜೊತೆಯಲ್ಲಿ ಗ್ರಾಮಗಳ ಜನರಿಗೂ ಸಮಾಜ ಸೇವೆ ಮಾಡಲೂ ಸಾಧ್ಯವಾಗಿರುವುದು ಸಂಘದ ಇತಿಹಾಸ ವಾಗಿದೆ. ಇಂದಿಗೂ ಹಲವು ಸಮಸ್ಯೆಗಳನ್ನು ಪರಿಹರಿಸಲು ಸಂಘ ನಿರಂತರವಾಗಿ ಪ್ರಾಮಾಣಿಕವಾಗಿ ತೊಡಗಿಸಿಕೊಂಡಿದೆ ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ನರಸಿಂಹ 2025 ರ ಸಾಲಿನ ಚಟುವಟಿಕೆ ವರದಿ ಹಾಗೂ ಕೋಶಾಧಿಕಾರಿ ಪ್ರಕಾಶ್ ಕೋಣಿ ಲೆಕ್ಕಪತ್ರ ಮಂಡಿಸಿದರು. ವರದಿ ಮೇಲೆ 7 ಸಂಗಾತಿಗಳು ಮಾತಾಡಿದರು. ಚರ್ಚೆಯ ನಂತರ ವರದಿ ಲೆಕ್ಕಪತ್ರ ಅಂಗೀಕರಿಸಲಾಯಿತು.
ಸಭೆಯಲ್ಲಿ ಹಂಚು ಕಾರ್ಮಿಕರಿಗೆ ಕನಿಷ್ಠ ಕೂಲಿ ಜಾರಿಗಾಗಿ, ಕುಂದಾಪುರ ಇಎಸ್‌ಐ ಆಸ್ಪತ್ರೆ ಮೇಲ್ದರ್ಜೆಗೇರಿಸಲು, ಇಎಸ್‌ಐ ಆದಾಯ ಮಿತಿ ಹೆಚ್ಚಿಸಲು, ಇಎಸ್‌ಐಗೆ ಸ್ವಂತ ಕಟ್ಟಡಕ್ಕಾಗಿ ಒತ್ತಾಯಿಸಿ ಹಾಗೂ ಹಂಚು ಕಾರ್ಮಿಕರಿಗೆ ಕನಿಷ್ಠ 9000ರೂ. ಪಿಂಚಣಿಗಾಗಿ ಒತ್ತಾಯಿಸಿ ನಿರ್ಣಯ ಅಂಗೀಕರಿಸಲಾಯಿತು.
ಸಂಘದ ನೂತನ ಅಧ್ಯಕ್ಷರಾಗಿ ವಿ.ನರಸಿಂಹ, ಪ್ರಧಾನ ಕಾರ್ಯದರ್ಶಿ ಯಾಗಿ ಎಚ್.ನರಸಿಂಹ, ಕೋಶಾಧಿಕಾರಿ ಯಾಗಿ ಪ್ರಕಾಶ್ ಕೋಣಿ ಮರು ಆಯ್ಕೆಗೊಂಡರು ಹಾಗೂ 8 ಮಂದಿ ಪದಾಧಿಕಾರಿಗಳನ್ನೊಳಗೊಂಡ ಕಾರ್ಯಕಾರಿ ಸಮಿತಿ ರಚಿಸಲಾಯಿತು.
ಸಭೆಯಲ್ಲಿ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ್ ವಿ., ಬೀಡಿ ಸಂಘದ ಮುಖಂಡರಾದ ಮಹಾಬಲ ವಿ., ಬಲ್ಕಿಸ್, ಸಿಐಟಿಯು ಹಿರಿಯ ಮುಖಂಡರಾದ ಕೆ.ಶಂಕರ್, ಜೆ.ಎಂ.ಎಸ್. ಮುಖಂಡರಾದ ಶೀಲಾವತಿ ಉಪಸ್ಥಿತರಿ ದ್ದರು. ಸುರೇಂದ್ರ ಎಚ್. ಸ್ವಾಗತಿಸಿ, ಎಚ್.ನರಸಿಂಹ ವಂದಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಎಚ್ ನರಸಿಂಹ ವಾರ್ಷಿಕ ಕರಡು ವರದಿ ಮಂಡಿಸಿದರು, ಕೋಶಾಧಿಕಾರಿ ಪ್ರಕಾಶ್ ಕೋಣಿ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ವರದಿ, ಲೆಕ್ಕ ಪತ್ರ ಮೇಲೆ ಚರ್ಚೆ ನಡೆಸಿ ಅಂಗೀಕಾರ ಮಾಡಲಾಯಿತು.