ಉಡುಪಿ ಜಿಲ್ಲೆ| ಕೊರಗರ ಸಭಾಭವನಕ್ಕೆ 10.50 ಕೋಟಿ ರೂ.ಬಿಡುಗಡೆ: ಸಂಸದ ಕೋಟ
ಕುಂದಾಪುರ, ಜೂ.9: ಕೇಂದ್ರ ಸರಕಾರದ ಬುಡಕಟ್ಟು ಇಲಾಖೆ, ರಾಜ್ಯ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ (ಐಟಿಡಿಪಿ) ಉಡುಪಿ ಜಿಲ್ಲೆಯಲ್ಲಿ ಕೊರಗರಿಗಾಗಿ ನಿರ್ಮಿಸುತ್ತಿರುವ 18 ವಿವಿಧೋದ್ದೇಶ ಕೇಂದ್ರಗಳಿಗೆ 10.50 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಕುಂದಾಪುರ ತಾಲೂಕು ಬೆಳ್ವೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊರಗರ ಕಾಲೋನಿಗೆ ಕುಂದಾಪುರ ಶಾಸಕ ಕಿರಣ್ ಕೊಡ್ಗಿ ಅವರೊಂದಿಗೆ ಭೇಟಿ ನೀಡಿ ಅಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಸಭಾಭವನವನ್ನು ಪರಿಶೀಲಿಸಿದ ಬಳಿಕ ಮಾತನಾಡುತಿದ್ದರು.
ಕೊರಗರ ಈ ವಿವಿಧೋದ್ದೇಶ ಕಟ್ಟಡವು ತಲಾ 60 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು, 17 ಕಟ್ಟಡಗಳ ಕಾಮಗಾರಿ ಪ್ರಗತಿಯಲ್ಲಿದ್ದು ಕಾರ್ಕಳದ ಒಂದು ಕಟ್ಟಡಕ್ಕೆ ನಿವೇಶನ ಒದಗಿಸಬೇಕಾಗಿದೆ ಎಂದು ಅವರು, ಬಡವರ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ನುಡಿದರು.
ಶಾಸಕ ಕಿರಣ್ ಕೊಡ್ಗಿ ಮಾತನಾಡಿ, ಕುಂದಾಪುರ ಕ್ಷೇತ್ರಕ್ಕೂ ಕೇಂದ್ರದ ಯೋಜನೆ ಬಂದಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಬೆಳ್ವೆ ಗ್ರಾಪಂನ ಮಾಜಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಮಾಜಿ ಉಪಾಧ್ಯಕ್ಷೆ ಕಲಾವತಿ ಆಚಾರ್ಯ, ಮಾಜಿ ಸದಸ್ಯ ಬಾಲಕೃಷ್ಣ ಶೆಟ್ಟಿ, ಮಾಜಿ ತಾಪಂ ಸದಸ್ಯ ಸದಾನಂದ ಪೂಜಾರಿ, ದೀಪಿಕಾ ಶೆಟ್ಟಿ, ಸತೀಶ್ ಶೆಟ್ಟಿ ಹಾಗೂ ಪ್ರಮುಖರಾದ ಜಯಕುಮಾರ್ ಶೆಟ್ಟಿ ಗೊಳಿಯಂಗಡಿ, ಸಂತೋಷ್ ಪೂಜಾರಿ, ಕೃಷ್ಣ ನಾಯ್ಕ್, ಮತ್ತಿತರರು ಉಪಸ್ಥಿತರಿದ್ದರು.