ಬಜೆಯಲ್ಲಿ ಮೇ 15ರವರೆಗೆ ನೀರಿನ ಸಂಗ್ರಹ: ಶಿರೂರಿನಲ್ಲಿ ಪಂಪಿಂಗ್

Update: 2024-04-29 16:04 GMT

ಉಡುಪಿ, ಎ.29: ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಸ್ವರ್ಣ ನದಿಯ ಬಜೆ ಅಣೆಕಟ್ಟಿನಲ್ಲಿ ಸದ್ಯಕ್ಕೆ ಮೇ 15ರವರೆಗೆ ಬೇಕಾಗುವಷ್ಟು ನೀರಿನ ಸಂಗ್ರಹ ಇದ್ದು, ನದಿಯಲ್ಲಿ ಅಲ್ಲಲ್ಲಿ ಸಂಗ್ರಹವಾಗಿರುವ ನೀರನ್ನು ಪಂಪಿಂಗ್ ಮಾಡಿ ಹಾಯಿಸುವ ಕಾರ್ಯ ನಡೆಯುತ್ತಿದೆ.

ಸದ್ಯ ಶಿರೂರು, ಸಾಣೆಕಲ್ಲು ಪ್ರದೇಶದಲ್ಲಿರುವ ಸ್ವರ್ಣ ನದಿಯಲ್ಲಿ ಸಂಗ್ರಹ ವಾಗಿರುವ ನೀರನ್ನು ಎರಡು ಪಂಪ್ ಅಳವಡಿಸಿ ಬಜೆ ಡ್ಯಾಂಗೆ ಹರಿಸುವ ಕಾರ್ಯ ಮುಂದುವರೆಯುತ್ತಿದೆ. ಈಗ ಇರುವ ನೀರಿನ ಪ್ರಮಾಣ ಮುಂದಿನ 15 ದಿನಗಳಿಗೆ ಸಾಕಾಗಬಹುದು ಎಂಬುದು ಅಧಿಕಾರಿಗಳ ಅಂದಾಜು.

ಬಜೆಗೆ ಶಾಸಕರ ಭೇಟಿ: ಬಜೆ ಅಣೆಕಟ್ಟು ಪ್ರದೇಶಕ್ಕೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಭೇಟಿ ನೀಡಿ ನೀರಿನ ಲಭ್ಯತೆಯ ಬಗ್ಗೆ ಅಧಿಕಾರಿ ಗಳಿಂದ ಮಾಹಿತಿ ಪಡೆದು ವ್ಯವಸ್ಥಿತ ರೀತಿಯಲ್ಲಿ ನೀರು ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ಪ್ರಸ್ತುತ ನೀರಿನ ಲಭ್ಯತೆಯಂತೆ ಈ ವಾರ ಪೂರ್ತಿ ನಿರಂತರ ನೀರು ಪೂರೈಕೆಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿ, ಮುಂದಿನ ವಾರದ ಲಭ್ಯತೆ ಪರಿಗಣಿಸಿ ರೇಷನಿಂಗ್ ವ್ಯವಸ್ಥೆಯ ಬಗ್ಗೆ ನಿರ್ಧರಿಸುವಂತೆ ತಿಳಿಸಿದರು.

ನಗರಸಭೆ ವ್ಯಾಪ್ತಿಯ ಸಾರ್ವಜನಿಕ ಬಾವಿ ಹಾಗೂ ಕೊಳವೆ ಬಾವಿ ಮುಂತಾದ ನೀರಿನ ಮೂಲಗಳನ್ನು ಸಮರ್ಪಕವಾಗಿ ಬಳಕೆ ಹಾಗೂ ಈಗಾಗಲೇ ಟ್ಯಾಂಕರ್ ನೀರು ಸರಬರಾಜು ಟೆಂಡರ್ ಪಡೆದ ಗುತ್ತಿಗೆದಾರರ ಮೂಲಕ ಅವಶ್ಯಕ ಪ್ರದೇಶಗಳಿಗೆ ನೀರು ಒದಗಿಸಬೇಕು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಪ್ರಭಾಕರ ಪೂಜಾರಿ, ಗಿರೀಶ್ ಅಂಚನ್, ಬಾಲಕೃಷ್ಣ ಶೆಟ್ಟಿ, ಸುಂದರ ಕಲ್ಮಾಡಿ, ನಗರಸಭೆ ಇಂಜಿನಿಯರ್ ಯಶವಂತ್ ಪ್ರಭು ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News