ಮಂಗಳೂರು: "ಕರಿಯರ್ ಯಾತ್ರಾ 2024" ಮಾಹಿತಿ ಕಾರ್ಯಕ್ರಮ

Update: 2024-05-07 14:37 GMT

ಮಂಗಳೂರು, ಮೇ 7: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಮತ್ತು ಸಿಗ್ಮಾ ಇಂಡಿಯಾ ಬೆಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ನಂತರ ಮುಂದೇನು ‘ಕರಿಯರ್ ಯಾತ್ರಾ -2024’ ಉಚಿತ ಕರಿಯರ್ ಗೈಡೆನ್ಸ್ (ವೃತ್ತಿ ಮಾರ್ಗದರ್ಶನ ) ಮತ್ತು ಸ್ಕಾಲರ್‌ಶಿಪ್ ಜಾಗೃತಿ ಕಾರ್ಯಕ್ರಮ ನಗರದ ಪುರಭವನದಲ್ಲಿ ಮಂಗಳವಾರ ನಡೆಯಿತು.

ಅಲ್ ಮುಝೈನ್ ಗ್ರೂಪ್ ಜುಬೈಲ್ (ಕೆಎಸ್‌ಎ) ಇದರ ವ್ಯವಸ್ಥಾಪಕ ನಿರ್ದೇಶಕ ಝಕರಿಯಾ ಜೋಕಟ್ಟೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಶುಭ ಹಾರೈಸಿದರು.


ಬೆಂಗಳೂರು ಸಿಗ್ಮಾ ಫೌಂಡೇಶನ್‌ನ ಸ್ಥಾಪಕ ಮತ್ತು ಸಿಇಒ ಅಮೀನೆ ಮುದಸ್ಸಿರ್ ಅವರು ಮಾತನಾಡಿ ಕರಿಯರ್ ಗೈಡೆನ್ಸ್ (ವೃತ್ತಿ ಮಾರ್ಗದರ್ಶನ) ಮತ್ತು ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿ ನೀಡಿ ‘ಮಕ್ಕಳು ಯಾವುದೇ ಗೊಂದಲಕ್ಕೆ ಒಳಗಾಗದೆ ಮತ್ತು ಒತ್ತಡವಿಲ್ಲದೆ ವೃತ್ತಿಯನ್ನು ಖುಷಿಯಿಂದಲೇ ಆಯ್ದುಕೊಳ್ಳಬೇಕು. ಅವರಿಗೆ ಯಾರಿಂದಲೂ ಒತ್ತಡ ಇರಬಾರದು. ಮಕ್ಕಳು ಸ್ವಾಭಾವಿಕ ಸಾಮರ್ಥ್ಯ, ವ್ಯಕ್ತಿತ್ವ ಮತ್ತು ಅಭಿರುಚಿ ಮೂಲಕ ಸರಿಯಾದ ಕೋರ್ಸ್‌ನ್ನು ಆಯ್ದುಕೊಳ್ಳುವುದಕ್ಕೆ ಸರಿಯಾದ ಮಾರ್ಗದರ್ಶನವನ್ನು ಎರಡೂ ಸಂಸ್ಥೆಗಳು ಜಂಟಿಯಾಗಿ ನೀಡುತ್ತಿದೆ ಎಂದು ಹೇಳಿದರು.


ಅಧ್ಯಕ್ಷತೆ ವಹಿಸಿದ್ದ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಅಧ್ಯಕ್ಷ ರಿಯಾದ್ ಅಹ್ಮದ್ ಕಣ್ಣೂರು ಅವರು ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸಂಸ್ಥೆಯು ಪ್ರತಿ ವರ್ಷ ಸಿಗ್ಮಾ ಫೌಂಡೇಶನ್ ಸಹಯೋಗದಲ್ಲಿ ಮುಸ್ಲಿಂ ಸಮುದಾಯದ ಎಸೆಸೆಲ್ಸಿ ಮತ್ತು ಪಿಯುಸಿ ಪಾಸಾಗಿರುವ ವಿದ್ಯಾರ್ಥಿಗಳಿಗೆ ಕರಿಯರ್ ಗೈಡೆನ್ಸ್ ಕಾರ್ಯಕ್ರಮವನ್ನು ಉಚಿತವಾಗಿ ಆಯೋಜಿಸುತ್ತಿದೆ. ಎಸೆಸೆಲ್ಸಿ ಮತ್ತು ಪಿಯುಸಿ ಉತ್ತೀರ್ಣರಾದ ಬಳಿಕ ತಮ್ಮ ಮಕ್ಕಳು ಮುಂದೆ ಯಾವ ಕೋರ್ಸ್‌ನ್ನು ಆಯ್ದುಕೊಳ್ಳಬೇಕು ಎಂಬ ಗೊಂದಲದಲ್ಲಿ ಹೆತ್ತವರು ಇರುತ್ತಾರೆ. ಅವರ ಗೊಂದಲಕ್ಕೆ ಪರಿಹಾರ ಒದಗಿಸುವುದು, ಆ ಮೂಲಕ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಲು ನೆರವಾಗುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.


ದ.ಕ ಮತ್ತು ಉಡುಪಿ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಮೂಸಬ್ಬ ಪಿ ಬ್ಯಾರಿ, ಮಂಗಳೂರು ಹಿದಾಯ ಫೌಂಡೇಶನ್‌ನ ಅಧ್ಯಕ್ಷ ಮನ್ಸೂರ್ ಅಹ್ಮದ್ ಆಝಾದ್, ಖತರ್ ಯುರೋ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಅಬ್ದುಲ್ಲಾ ಮೋನು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸಿತಾರ್ ಮಜೀದ್ ಹಾಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭ ಮಾಹಿತಿ ಪತ್ರವನ್ನು ಬಿಡುಗಡೆಗೊಳಿಸಲಾ ಯಿತು. ಕಾರ್ಯಕ್ರಮದಲ್ಲಿ 500 ಮಂದಿ ವಿದ್ಯಾರ್ಥಿಗಳು ಭಾಗವಹಿಸಿ ಮಾಹಿತಿ ಪಡೆದರು.


ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಕಣ್ಣೂರು ಸ್ವಾಗತಿಸಿದರು. ನಕಾಶ್ ಬಾಂಬಲ ವಂದಿಸಿದರು. ಮಹಮ್ಮದ್ ನಾಝಿಕ್ ಬಜಾಲ್ ಕಾರ್ಯಕ್ರಮ ನಿರೂಪಿಸಿದರು.













 


 


 


 



Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News