ಮೇ 3ರಂದು ‘ಗಬ್ಬರ್‌ಸಿಂಗ್’ ತುಳು ಸಿನಿಮಾ ತೆರೆಗೆ

Update: 2024-05-02 15:42 GMT

ಉಡುಪಿ, ಮೇ 2: ಬಾರಕೂರಿನ ಮುತ್ತುಗೋಪಾಲ ಪಿಲ್ಮ್ಸ್ ಲಾಂಛನದಡಿ ನಿರ್ಮಾಣಗೊಂಡಿರುವ ‘ಗಬ್ಬರ್‌ಸಿಂಗ್’ ತುಳು ಚಲನಚಿತ್ರ ನಾಳೆ ಮೇ 3ರಂದು ಕರಾವಳಿ ಜಿಲ್ಲೆಯಾದ್ಯಂತ ಸಿನಿಮಾ ಮಂದಿರಗಳಲ್ಲಿ ತೆರೆಕಾಣಲಿದೆ ಎಂದು ಚಿತ್ರದ ನಿರ್ಮಾಪಕರಾಗಿರುವ ಸತೀಶ್ ಪೂಜಾರಿ ಬಾರಕೂರು ತಿಳಿಸಿದ್ದಾರೆ.

ಉಡುಪಿ ಪ್ರೆಸ್ ಕ್ಲಬ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರದ ಉದ್ಘಾಟನಾ ಕಾರ್ಯಕ್ರಮ ಶುಕ್ರವಾರ ಬೆಳಗ್ಗೆ 9:30ಕ್ಕೆ ನಗರದ ಕಲ್ಪನಾ ಚಿತ್ರಮಂದಿರದಲ್ಲಿ ನಡೆಯಲಿದೆ. ಅಲ್ಲದೇ ಚಿತ್ರವು ಮಂಗಳೂರು, ಮಣಿಪಾಲ, ಕಾರ್ಕಳ, ಪಡುಬಿದ್ರೆ, ಪುತ್ತೂರು, ಬೆಳ್ತಂಗಡಿ ಸೇರಿದಂತೆ ಕರಾವಳಿ ಎರಡು ಜಿಲ್ಲೆಗಳಲ್ಲಿ ಪ್ರಮುಖ ಚಿತ್ರಮಂದಿರ ಗಳಲ್ಲಿ ಪ್ರದರ್ಶನಗೊಳ್ಳಲಿದೆ ಎಂದರು.

ಗಬ್ಬರ್‌ಸಿಂಗ್ ರಾಜಕೀಯ, ಪೊಲೀಸ್ ಹಾಗೂ ಸಾಮಾಜಿಕ ಕಳಕಳಿ ಹೊಂದಿರುವ ಚಿತ್ರವಾಗಿದ್ದು, ವಿಭಿನ್ನವಾಗಿ ಮೂಡಿ ಬಂದಿದೆ. ಹಾಸ್ಯವೂ ಇದರಲ್ಲಿ ಪ್ರದಾನ ಅಂಶವಾಗಿದೆ. ಚಿತ್ರದಲ್ಲಿ ಆರು ಹಾಡುಗಳಿದ್ದು, ಕರಾವಳಿಯಾದ್ಯಂತ 50 ದಿನಗಳ ಶೂಟಿಂಗ್‌ನಲ್ಲಿ ಚಿತ್ರೀಕರಣಗೊಂಡಿದೆ ಎಂದರು.

ತುಳುವಿನ ಖ್ಯಾತನಾಮ ಹಾಸ್ಯನಟರಾದ ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು ಚಿತ್ರದಲ್ಲಿ ವಿಭಿನ್ನವಾಗಿ ನಟಿಸಿದ್ದಾರೆ. ಚಿತ್ರಕ್ಕೆ ಹೊಸಬರಾದ ಶರಣ್ ಶೆಟ್ಟಿ ಹಾಗೂ ವೆನ್ಸಿಟಾ ಡಾಯಸ್ ನಾಯಕ-ನಾಯಕಿ ಯರು. ಗಿರೀಶ್ ಎಂ.ಶೆಟ್ಟಿ, ವೀಣಾ ಎಸ್.ಶೆಟ್ಟಿ, ಉಮೇಶ್ ಮಿಜಾರ್, ಸಾಯಿಕೃಷ್ಣ ಕುಡ್ಲ, ಸಂದೀಪ್ ಭಕ್ತ, ಪ್ರಸನ್ನ ಶೆಟ್ಟಿ ಬೈಲೂರು, ಚಂದ್ರಹಾಸ ಶೆಟ್ಟಿ ಮುಂತಾದವರು ಪ್ರಮುಖ ಪಾತ್ರದಲ್ಲಿದ್ದಾರೆ ಎಂದು ಸತೀಶ್ ಪೂಜಾರಿ ಬಾರ್ಕೂರು ತಿಳಿಸಿದರು.

ಪ್ರದೀಪ್ ಚಿತ್ರದ ನಿರ್ದೇಶಕರಾಗಿದ್ದು, ಪುಷ್ಪರಾಜ್, ಜಯರಾಜ್ ಸಹ ನಿರ್ದೇಶಕರು. ರವಿ ಸುವರ್ಣ ಕೆಮರಾ ಮೆನ್, ಡಾಲ್ವಿನ್ ಕೊಳಲಗಿರಿ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಪ್ರಜ್ವಲ ಸುವರ್ಣ ಸಂಕಲನಕಾರರಾಗಿದ್ದು, ಅಲ್ಟಿಮೇಟ್ ಶಿವು ಸಾಹಸ ಸಂಯೋಜಕರು. ಕಥೆ ಚಿತ್ರಕತೆಯನ್ನು ನಿರ್ಮಾಪಕ ಸತೀಶ್ ಪೂಜಾರಿ ಬಾರಕೂರು ಬರೆದಿದ್ದು, ಮಧು ಸುರತ್ಕಲ್ ಸಂಭಾಷಣೆಕಾರರು.

ಪತ್ರಿಕಾಗೋಷ್ಠಿಯಲ್ಲಿ ನಾಯಕ ಶರಣ್ ಶೆಟ್ಟಿ, ವೀಣಾ ಎಸ್.ಶೆಟ್ಟಿ, ಸಂದೀಪ್ ಭಕ್ತ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News