ಉಡುಪಿ: ಮುಂದುವರಿದ ಸಾಮಾನ್ಯ ಮಳೆ; 3 ಮನೆಗಳಿಗೆ ಹಾನಿ
ಉಡುಪಿ, ಜೂ.9: ಹವಾಮಾನ ಇಲಾಖೆ ನೀಡಿದ ರೆಡ್ ಅಲರ್ಟ್‌ಗೆ ವ್ಯತಿರಿಕ್ತವಾಗಿ ಇಂದೂ ಸಹ ಉಡುಪಿ ಜಿಲ್ಲೆಯಲ್ಲಿ ಸಾಮಾನ್ಯ ಮಳೆ ಮುಂದುವರಿದಿದೆ. ಒಂದೆರಡು ಬಾರಿ ಜೋರಾಗಿ ಮಳೆ ಬಂದಿದ್ದು ಬಿಟ್ಟರೆ ಜಿಲ್ಲೆಯಾದ್ಯಂತ ಹೆಚ್ಚಾಗಿ ಹನಿಮಳೆಯೇ ಸುರಿದಿದೆ. ಜಿಲ್ಲೆಯ ಕೆಲವು ಕಡೆಗಳಲ್ಲಿ ಸಂಜೆಯ ಬಳಿಕ ಮಳೆಯ ಪ್ರಮಾಣ ಹೆಚ್ಚಾಗಿತ್ತು.
ಉಡುಪಿ, ಕುಂದಾಪುರ, ಬೈಂದೂರು, ಬ್ರಹ್ಮಾವರ, ಕಾಪು ಸೇರಿದಂತೆ ಹೆಚ್ಚಿನ ಕಡೆಗಳಲ್ಲೂ ಸಾಮಾನ್ಯವಾಗಿ ಮುಂಗಾರು ಆರಂಭಿಕ ದಿನಗಳಲ್ಲಿ ಸುರಿಯುವ ಜಡಿ ಮಳೆ ಇನ್ನೂ ಪ್ರಾರಂಭವಾಗಿಲ್ಲ. ಹೀಗಾಗಿ ಮೇ ತಿಂಗಳ ಮುಂಗಾರು ಪೂರ್ವ ಮಳೆಯ ಸಂದರ್ಭವಾಗಲಿ, ಈಗಿನ ಮುಂಗಾರು ಪ್ರಾರಂಭಗೊಂಡ ಬಳಿಕವಾಗಲೀ ಉಡುಪಿ ಜಿಲ್ಲೆ ಇನ್ನೂ ನೆರೆ, ಪ್ರವಾಹವನ್ನೇ ಕಂಡಿಲ್ಲ.
ಮಳೆಯ ಸಂದರ್ಭದಲ್ಲಿ ಆಗಾಗ ಬೀಸುವ ಗಾಳಿಯಿಂದ ಜಿಲ್ಲೆಯಲ್ಲಿ ಮೂರು ಮನೆಗಳಿಗೆ ಹಾನಿಯಾದ ವರದಿ ಬಂದಿದೆ. ಕುಂದಾಪುರ ತಾಲೂಕು ಹಳನಾಡು ಗ್ರಾಮದ ಸೀತಾ ಎಂಬವರ ಮನೆಗೆ ಗಾಳಿ-ಮಳೆಯಿಂದ ಭಾಗಶ: ಹಾನಿಯಾಗಿ 30ಸಾವಿರ ರೂ.ನಷ್ಟವಾದರೆ, ಹೊಸಾಡು ಗ್ರಾಮದ ಲಕ್ಷ್ಮೀ ಖಾರ್ವಿ ಎಂಬವರ ಮನೆಗೆ 60ಸಾವಿರ ರೂ.ನಷ್ಟು ನಷ್ಟ ಸಂಭವಿಸಿದೆ.
ಬೈಂದೂರು ತಾಲೂಕು ಶಿರೂರು ಗ್ರಾಮದ ಬಿದೀನಾ ಎಂಬವರ ಮನೆಯೂ ಗಾಳಿ-ಮಳೆಯಿಂದ ಭಾಗಶ: ಹಾನಿಗೊಂಡಿದ್ದು 60,000ರೂ. ನಷ್ಟದ ಅಂದಾಜು ಮಾಡಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಇಂದು ಮುಂಜಾನೆ 8:30ರವರೆಗೆ ಹಿಂದಿನ 24 ಗಂಟೆಗಳಲ್ಲಿ ಸರಾಸರಿ 35.7ಮಿ.ಮೀ. ಮಳೆಯಾಗಿದೆ. ಹೆಬ್ರಿಯಲ್ಲಿ ಅತ್ಯಧಿಕ 49.2ಮಿ.ಮೀ. ಮಳೆಯಾದರೆ ಕುಂದಾಪುರದಲ್ಲಿ 42.2, ಬ್ರಹ್ಮಾವರದಲ್ಲಿ 37.7, ಬೈಂದೂರಿನಲ್ಲಿ 37.5, ಉಡುಪಿಯಲ್ಲಿ 25.7, ಕಾರ್ಕಳದಲ್ಲಿ 25.6 ಹಾಗೂ ಕಾಪುನಲ್ಲಿ 20.2ಮಿ.ಮೀ. ಮಳೆ ಬಿದ್ದಿದೆ.
ಹವಾಮಾನ ಇಲಾಖೆ ಮುಂದಿನ ಮೂರು ದಿನಗಳಿಗೆ ವೇಗದ ಗಾಳಿ ಸಹಿತ ಭಾರೀ ಮಳೆ ಬೀಳುವ ಮುನ್ಸೂಚನೆ ನೀಡಿದೆ.ಅರಬಿಸಮುದ್ರದ ಕಡೆಯಿಂದ ಗಂಟೆಗೆ 60ಕಿ.ಮೀ. ವೇಗದ ಗಾಳಿ ಬೀಸಲಿದ್ದು, ಮೀನುಗಾರರು ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಿದೆ.