ಉಡುಪಿ| ಬಜೆ ಅಣೆಕಟ್ಟೆನಲ್ಲಿ 3.25 ಸೆ.ಮೀ. ನೀರಿನ ಸಂಗ್ರಹ: ಮೇ 8ರಿಂದ ರೇಷನಿಂಗ್ ವ್ಯವಸ್ಥೆ ಜಾರಿ

Update: 2024-05-06 14:40 GMT

ಉಡುಪಿ, ಮೇ 6: ನಗರಕ್ಕೆ ನೀರು ಪೂರೈಕೆ ಮಾಡುವ ಸ್ವರ್ಣ ನದಿಯ ಬಜೆ ಅಣೆಕಟ್ಟಿನಲ್ಲಿ ಬಿಸಿಲಿನ ತಾಪಕ್ಕೆ ನೀರಿನ ಸಂಗ್ರಹ ದಿನದಿಂದ ದಿನಕ್ಕೆ ಇಳಿಕೆ ಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಉಡುಪಿ ನಗರಸಭೆಯು ಮೇ 8ರಿಂದ ರೇಷನಿಂಗ್ ಮೂಲಕ ನೀರು ಪೂರೈಸಲು ನಿರ್ಧರಿಸಿದೆ.

ಬಜೆ ಅಣೆಕಟ್ಟಿನಲ್ಲಿ ಸೋಮವಾರ ನೀರಿನ ಪ್ರಮಾಣ 3.25 ಸೆ.ಮೀ. ಇದ್ದು, ಬಿಸಿ ವಾತಾವರಣಕ್ಕೆ ನೀರಿನ ಸಂಗ್ರಹ ಇಳಿಕೆ ಕಾಣುತ್ತಿದೆ. ಈಗ ಇರುವ ನೀರು ಇನ್ನು ಕೆಲವೇ ದಿನಗಳಿಗೆ ಸಾಕಾಗುತ್ತಿರುವುದರಿಂದ ನಗರಸಭೆಯು ರೇಷನಿಂಗ್ ವ್ಯವಸ್ಥೆ ಆರಂಭಿಸಲು ಮುಂದಾಗಿದೆ.

ರೇಷನಿಂಗ್ ವ್ಯವಸ್ಥೆ ಜಾರಿಗೆ ತರಲು ನಗರಸಭೆಯ 35 ವಾರ್ಡ್‌ಗಳನ್ನು ಮೂರು ವಲಯಗಳನ್ನು ವಿಂಗಡಿಸಲಾಗುವುದು. ದಿನದಲ್ಲಿ ಒಂದು ವಲಯಕ್ಕೆ ನೀರು ಪೂರೈಸಲಾಗುವುದು. ಇದರಿಂದ ಒಂದು ವಲಯಕ್ಕೆ ಮೂರು ದಿನಗಳಿಗೊಮ್ಮೆ ರೇಷನಿಂಗ್ ಮೂಲಕ ನೀರು ಪೂರೈಸಿದಂತೆ ಆಗುತ್ತದೆ ಎಂದು ಪೌರಾಯುಕ್ತ ರಾಯಪ್ಪ ತಿಳಿಸಿದ್ದಾರೆ.

ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಎತ್ತರ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಕೊಡಲು ಕ್ರಮ ತೆಗೆದು ಕೊಳ್ಳಲಾಗುತ್ತಿದೆ. ಅದಕ್ಕಾಗಿ ಈಗಾಗಲೇ ನಾಲ್ಕು ಟ್ಯಾಂಕರ್‌ಗಳನ್ನು ಸಜ್ಜುಗೊಳಿಸಲಾಗಿದೆ. ಅದೇ ರೀತಿ ಸ್ವರ್ಣ ನದಿಯ ಗುಂಡಿಗಳಲ್ಲಿ ಶೇಖರಣೆಯಾಗಿರುವ ನೀರುಗಳನ್ನು ಬಜೆ ಡ್ಯಾಂಗೆ ಹಾಯಿಸಲು ಎರಡು ಕಡೆ ಪಂಪ್ ಅಳವಡಿಸಲಾಗಿದೆ. ಸದ್ಯ ನಿರಂತರ ವಾಗಿ ನೀರನ್ನು ಪಂಪ್ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News