ಉಡುಪಿಯ 4 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಗಿ ಭದ್ರತೆ: ಎಸ್ಪಿ ಡಾ.ಅರುಣ್

Update: 2024-04-24 13:55 GMT

ಉಡುಪಿ, ಎ.24: ಲೋಕಸಭೆ ಚುನಾವಣೆ ಸಂಬಂಧ ಎ.26ರಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ನಡೆಯಲಿರುವ ಮತದಾನದ ಹಿನ್ನೆಲೆ ಯಲ್ಲಿ ಬಿಗಿ ಪೊಲೀಸ್ ಭದ್ರತೆಯನ್ನು ಏರ್ಪಡಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಅರುಣ್ ಕೆ. ತಿಳಿಸಿದ್ದಾರೆ.

ಚುನಾವಣಾ ಬಂದೋಬಸ್ತ್‌ಗಾಗಿ ಮೂರು ಎಸ್ಪಿ ಶ್ರೇಣಿಯ ಅಧಿಕಾರಿ ಗಳು, ಆರು ಡಿವೈಎಸ್ಪಿಗಳು, 15 ಪೊಲೀಸ್ ನಿರೀಕ್ಷಕರು, 1501 ಪೊಲೀಸ್ ಸಿಬ್ಬಂದಿ ಮತ್ತು 500 ಮೀಸಲು ಪಡೆಯ ಪೊಲೀಸರನ್ನು ನಿಯೋಜಿಸಲಾಗಿದೆ. ಒಟ್ಟು ನಾಲ್ಕು ಮೀಸಲು ಪೊಲೀಸ್ ಪಡೆಗಳನ್ನು ನೇಮಿಸಲಾಗುತ್ತಿದೆ ಎಂದು ಅವರು ಹೇಳಿದರು.

ಉಡುಪಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿರುವ ಒಟ್ಟು 866 ಮತಗಟ್ಟೆಗಳ ಪೈಕಿ 177 ಸೂಕ್ಷ್ಮ ಮತಗಟ್ಟೆ ಗಳಿವೆ. ಕ್ಷೇತ್ರದ ಎಲ್ಲಾ ಸಾಮಾನ್ಯ ಮತಗಟ್ಟೆಗಳಿಗೆ ಕನಿಷ್ಠ ಒಬ್ಬ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಎಲ್ಲಾ ಮತಗಟ್ಟೆಗಳನ್ನು 57 ಸೆಕ್ಟರ್‌ಗಳಾಗಿ ವರ್ಗೀಕರಿಸಲಾಗಿದ್ದು, ಪ್ರತಿ ಸೆಕ್ಟರ್‌ನ್ನು ಎಸ್ಸೈ ಅಥವಾ ಎಎಸ್ಸೈ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಈ 57 ಸೆಕ್ಟರ್ ಅಧಿಕಾರಿಗಳನ್ನು 14 ಪೊಲೀಸ್ ನಿರೀಕ್ಷಕರು ಮೇಲ್ವಿಚಾರಣೆ ಮಾಡಲಿದ್ದಾರೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಬ್ಬರಂತೆ ಒಟ್ಟು 4 ಡಿವೈಎಸ್ಪಿಗಳನ್ನು ನೇಮಕ ಮಾಡಲಾಗುತ್ತದೆ. ಅವರು ಮೇಲ್ವಿಚಾರಣೆಯೊಂದಿಗೆ ಇಡೀ ಕ್ಷೇತ್ರದಲ್ಲಿ ನಿಗಾ ವಹಿಸಲಿರುವರು ಎಂದು ಅವರು ತಿಳಿಸಿದರು.

ಗುರುವಾರ ಮಸ್ಟರಿಂಗ್ ಕೇಂದ್ರಗಳಿಂದ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಸಂಬಂಧಪಟ್ಟ ಮತಗಟ್ಟೆಗಳಿಗೆ ಚುನಾವಣಾ ತಂಡದೊಂದಿಗೆ ಕಳುಹಿಸಲಾಗುತ್ತದೆ. ಎಲ್ಲಾ ಪ್ರಮುಖ ನಗರಗಳಲ್ಲಿ ಪೊಲೀಸ್ ಪಥಸಂಚಲನ ನಡೆಸಲಾ ಗಿದೆ. ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಸಲು ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳಲಾಗಿದೆ. ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರು 112ಗೆ ಕರೆ ಮಾಡಬೇಕು ಎಂದು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ನಕ್ಸಲ್ ಬಾಧಿತ ಪ್ರದೇಶಗಳಲ್ಲಿ 36 ಮತಗಟ್ಟೆಗಳು

ಜಿಲ್ಲೆಯ 177 ಕ್ರಿಟಿಕಲ್ ಮತಗಟ್ಟೆಗಳ ಪೈಕಿ 36 ಮತಗಟ್ಟೆಗಳನ್ನು ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಗುರುತಿಸಲಾಗಿದೆ. ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ಈ ಎಲ್ಲಾ 36 ಮತಗಟ್ಟೆಗಳಿಗೆ ಸಶಸ್ತ್ರ ಪಡೆಗಳನ್ನು ನಿಯೋಜಿಸಲಾ ಗುತ್ತದೆ ಎಂದು ಎಸ್ಪಿ ಡಾ.ಅರುಣ್ ಕೆ. ತಿಳಿಸಿದರು.

ಅಲ್ಲದೆ ಹೆಚ್ಚುವರಿಯಾಗಿ ಆರು ಸಶಸ್ತ್ರ ಪೊಲೀಸ್ ಗಸ್ತು ವಾಹನಗಳನ್ನು ಇರಿಸಲಾಗುತ್ತಿದ್ದು, ಪ್ರತಿ ಆರು ಮತಗಟ್ಟೆಗಳಿಗೆ ಒಂದರಂತೆ ಈ ವಾಹನಗಳು ಗಸ್ತು ತಿರುಗಳಿವೆ. ಈ 36 ಮತಗಟ್ಟೆಗಳ ಮೇಲ್ವಿಚಾರಣೆ ಮಾಡಲು ಡಿವೈಎಸ್ಪಿ ಯನ್ನು ನಿಯೋಜಿಸಲಾಗಿದೆ.

ನಕ್ಸಲ್ ಪೀಡಿತ ಪ್ರದೇಶಗಳ ಮತಗಟ್ಟೆಗಳಿಗೆ ಕ್ಯಾಮೆರಾ ಅಳವಡಿಸಿ ವೆಬ್ ಕಾಸ್ಟಿಂಗ್ ಮಾಡಲಾಗುತ್ತದೆ ಮತ್ತು ಮೈಕ್ರೋ ಅಬರ್ಸವರ್‌ಗಳನ್ನು ನೇಮಿಸ ಲಾಗುತ್ತದೆ. ಎಲ್ಲ ಪೊಲೀಸ್ ನಿರೀಕ್ಷಕರು ಮತ್ತು ಅದಕ್ಕಿಂತ ಮೇಲಿನ ಅಧಿಕಾರಿ ಗಳು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪ್ರತ್ಯೇಕ ಸ್ಟ್ರೈಕಿಂಗ್ ಪಡೆಯನ್ನು ಹೊಂದಿರುತ್ತಾರೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News