ಸೆ.16ರಂದು ಮೀನುಗಾರಿಕಾ ಸಚಿವ ಬಸವಂತಪ್ಪ ಉಡುಪಿ, ಮಲ್ಪೆಗೆ ಭೇಟಿ
ಉಡುಪಿ, ಸೆ.15: ಕರ್ನಾಟಕ ಸರಕಾರದ ನೂತನ ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಕೆ.ಎಸ್ ಬಸವಂತಪ್ಪ ಅವರು ಸೆ.16ರಂದು ಮೊದಲ ಬಾರಿಗೆ ಉಡುಪಿ ಜಿಲ್ಲೆಗೆ ಭೇಟಿ ನೀಡಲಿದ್ದಾರೆ.
ಬುಧವಾರ ಬೆಳಗ್ಗೆ 10 ಗಂಟೆಗೆ ಜಿಲ್ಲಾ ಕಾಂಗ್ರೇಸ್ ಕಚೇರಿಗೆ ಭೇಟಿ ನೀಡುವ ಸಚಿವರು ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ನಂತರ ಮಲ್ಪೆ ಕೊಡವೂರು ಶ್ರೀ ಮಹತೋಭಾರ ಶಂಕರನಾರಾಯಣ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಮಲ್ಪೆ ಬಂದರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
ಮಲ್ಪೆಯಲ್ಲಿ ಮೀನುಗಾರರ ಸಹಕಾರಿ ಸಂಘದ ಪದಾಧಿಕಾರಿಗಳ ಭೇಟಿಯಾಗಿ ಅವರೊಂದಿಗೆ ಸಮಾಲೋಚನೆ ನಡೆಸುವ ಸಚಿವರು ನಂತರ ಮೀನುಗಾರಿಕಾ ಮತ್ತು ಮೀನು ಉತ್ಪನ್ನ ಸಾಮಾಗ್ರಿಗಳ ಸಹಕಾರಿ ಸಂಘ ಪಿತ್ರೋಡಿ ಇದರ ಮಲ್ಪೆಯಲ್ಲಿ ನೂತನವಾಗಿ ನವೀಕರಣಗೊಂಡ ಡೀಸೆಲ್ ಬಂಕ್ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಹೊಸಪೇಟೆಗೆ ಪ್ರಯಾಣ ಬೆಳೆಸಲಿದ್ದಾರೆ.