ಉಡುಪಿ ಜಿಲ್ಲಾ ಸಂಪ್ರದಾಯಬದ್ಧ ಕಂಬಳ ಸಮಿತಿಯ ವಾರ್ಷಿಕ ಸಭೆ
ಉಡುಪಿ : ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಂಪ್ರದಾಯ ಆಚರಣೆಗಳಲ್ಲೊಂದಾದ ಕಂಬಳವನ್ನು ಉಳಿಸಿ ಬೆಳೆಸುವ ದೃಷ್ಟಿಯಲ್ಲಿ ಕಾರ್ಯೋನ್ಮುಖರಾಗಿರುವ ಉಡುಪಿ ಜಿಲ್ಲಾ ಸಂಪ್ರದಾಯಬದ್ಧ ಕಂಬಳ ಸಮಿತಿಯ ವಾರ್ಷಿಕ ಸಭೆಯು ಬ್ರಹ್ಮಾವರದ ಧರ್ಮಾವರಂ ಆಡಿಟೋರಿಯಂನಲ್ಲಿ ಜರಗಿತು.
ಇದೀಗ ಮುಂದಿನ ಒಂದು ತಿಂಗಳಲ್ಲಿ ಜಿಲ್ಲೆಯ ಸುಮಾರು 35ಕ್ಕೂ ಹೆಚ್ಚಿನ ಸಂಪ್ರದಾಯ ಕಂಬಳ ಆಯೋಜನೆಯ ದಿನಾಂಕವನ್ನು ವಿವಿಧ ಸಂಘಟಕರು ತೀರ್ಮಾನಿಸುವುದರೊಂದಿಗೆ, ಇಂದಿನ ಕಾಲಘಟ್ಟದಲ್ಲಿ ಕಂಬಳವನ್ನು ಆಯೋಜನೆ ಮಾಡುವುದರ ಜೊತೆಗೆ ಈ ಪರಂಪರೆಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಬಗ್ಗೆಯೂ ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ಕಂಬಳ ಸಮಿತಿಯ ಕಾನೂನು ಸಲಹೆಗಾರ ನ್ಯಾಯವಾದಿ ಪ್ರೇಮ್ ಪ್ರಸಾದ್ ಶೆಟ್ಟಿ ಮಾತನಾಡಿ, ಸಹಕಾರಿ ಇಲಾಖೆಯಲ್ಲಿ ಸಮಿತಿಯ ನವೀಕರಣವನ್ನು ಮಾಡುವ ಬಗ್ಗೆ ಹಾಗೂ ಮುಂದಿನ ಬೈಲಾ ತಿದ್ದುಪಡಿಗಳ ಬಗ್ಗೆ ಮಾಹಿತಿ ನೀಡಿ, ಕಂಬಳದ ಸಾಂಪ್ರದಾಯಿಕತೆಯನ್ನು ಕಾಪಾಡುವ ಜವಾಬ್ದಾರಿ ಸಮಿತಿಯ ಎಲ್ಲಾ ಸದಸ್ಯರು ವಹಿಸಿಕೊಳ್ಳಬೇಕು. ಹಾಗೆಯೇ ಕಂಬಳವನ್ನು ಕೇವಲ ಮನೋರಂಜನೆ ಅಥವಾ ಕ್ರೀಡೆಯಾಗಿ ಮಾರ್ಪಾಡಾಗದಂತೆ ಜಾಗೃತಿ ಮೂಡಿಸುವ ಅವಶ್ಯಕತೆಯನ್ನು ತಿಳಿಸಿ, ರವು ಸಂಪ್ರದಾಯ ಕಂಬಳಕ್ಕೆ ವಿಶೇಷ ಅನುದಾನವನ್ನು ನೀಡುವಂತೆ ಒತ್ತಾಯಿಸಲಾಯಿತು.
ಹಿರಿಯ ಕಂಬಳ ಆಯೋಜಕ ಬಾರ್ಕೂರು ಶಾಂತಾರಾಮ್ ಶೆಟ್ಟಿ, ಕಂಬಳ ಸಮಿತಿಯ ಅಧ್ಯಕ್ಷ ಸುಧಾಕ ಹೆಗ್ಡೆ, ಕಾರ್ಯದರ್ಶಿ ಪೃಥ್ವಿರಾಜ್ ಶೆಟ್ಟಿ ಮಾತನಾಡಿದರು. ಜಿಲ್ಲೆಯ 30ಕ್ಕೂ ಹೆಚ್ಚಿನ ಕಂಬಳ ಸಂಘಟಕರು, ಕೋಣಗಳ ಮಾಲಕರು, ಓಟಗಾರರು ಸಭೆಯಲ್ಲಿ ಉಪಸ್ಥಿತರಿದ್ದರು.