ನೀರಿಗಾಗಿ ಕಣ್ಣೀರಿಡುವ ದುರಂತ ಕಾಲ ದೂರ ಮಾಡೋಣ: ಜೋಸೆಫ್ ಜಿ.ಎಂ. ರೆಬೆಲ್ಲೊ
ಉಡುಪಿ: ನಮ್ಮ ಬದುಕಿಗೆ ನೆಲೆ ಒದಗಿಸಿದ ಈ ನೆಲದೊಡಲಿನ ನೀರ ಖಜಾನೆಯನ್ನು ಬರಿದಾಗದಂತೆ ಕಾದುಕೊಳ್ಳದಿದ್ದರೆ ನೀರಿಗಾಗಿ ಕಣ್ಣೀರಿಡುವ ದುರಂತ ಕಾಲ ನಮ್ಮಿಂದ ಬಹಳ ದೂರ ಇಲ್ಲ ಎಂದು ಜಲಜೀವನ್ ಮಿಶನ್ನ ರಾಜ್ಯ ಸಂಪನ್ಮೂಲ ವ್ಯಕ್ತಿ ರತ್ನಶ್ರೀ ಜೋಸೆಫ್ ಜಿ.ಎಂ. ರೆಬೆಲ್ಲೋ ಹೇಳಿದ್ದಾರೆ.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಉಡುಪಿ ಜಿಲ್ಲಾ ಪಂಚಾಯತ್ ಜಲಜೀವನ್ ಮಿಶನ್ ವತಿಯಿಂದ ಹಿರಿಯಡಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾ.ಸೇ.ಯೋ. ಘಟಕ, ಯೂತ್ ರೆಡ್‌ಕ್ರಾಸ್ ಘಟಕಗಳ ಸಹಯೋಗದಲ್ಲಿ ಮಳೆನೀರು ಕೊಯ್ಲು ಮತ್ತು ಮಳೆನೀರು ಪುನರ್ ಬಳಕೆ ಕಾರ್ಯಕ್ರಮದ ಅಂಗವಾಗಿ ಕಾಲೇಜಿನಲ್ಲಿ ಆಯೋಜಿಸಲಾದ ಪ್ರಾತ್ಯಕ್ಷಿಕೆ ಪ್ರದರ್ಶನ ಮತ್ತು ಮಾಹಿತಿ ಕಾರ್ಯಾಗಾರ ದಲ್ಲಿ ಅವರು ಮಾತನಾಡುತಿದ್ದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಜಯಪ್ರಕಾಶ್ ಶೆಟ್ಟಿ ಎಚ್. ಮಾತನಾಡಿ, ನಮ್ಮ ಹಿರಿಯರು ನೀರನ್ನೇ ನಿಧಿಯಾಗಿ ಕಾದುಕೊಳ್ಳುವ ಸಲುವಾಗಿಯೇ ಅದಕ್ಕೆ ಆಸ್ತಿಕತೆಯ ಆವರಣವನ್ನು ಬೆಸೆದು ಮಳೆನೀರು ಕೊಯ್ಲಿನ ನಿಸರ್ಗ ಸಹಜ ಮಾದರಿಗಳಾದ ಹುತ್ತಗಳನ್ನು ಹೇಗೆ ಜತನವಾಗಿ ಕಾದುಕೊಂಡಿದ್ದರು ಎಂಬ ಅರಿವು ನಮಗೆ ಅಗತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಜಲಜೀವನ್ ಮಿಶನ್‌ನ ಐಎಸ್‌ಎ ಟೀಮ್ ಲೀಡರ್ ಉಷಾ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಸೌಮ್ಯಲತಾ ಪಿ., ಐಕ್ಯುಎಸಿ ಸಂಚಾಲಕ ಡಾ.ಲಿತಿನ್ ಬಿ.ಎಂ., ರಾ.ಸೇ.ಯೋ. ಮತ್ತು ಯೂತ್ ರೆಡ್‌ಕ್ರಾಸ್ ಕಾರ್ಯಕ್ರಮಾಧಿಕಾರಿ ನಂದೀಶ ಕುಮಾರ್ ಕೆ.ಸಿ. ಮತ್ತು ವಿದ್ಯಾರ್ಥಿ ನಾಯಕ ಈರಬಸು ಉಪಸ್ಥಿತರಿದ್ದರು. ಸುಹಾ ಸ್ವಾಗತಿಸಿದರು. ಯಮನಪ್ಪ ಅತಿಥಿಗಳನ್ನು ಪರಿಚಯಿಸಿದರು. ಖುಷಿ ವಂದಿಸಿದರು. ವೈಷ್ಣವಿ ಕಾರ್ಯಕ್ರಮ ನಿರೂಪಿಸಿದರು.