ಅಂತಾರಾಜ್ಯ ಮನೆ ಕಳ್ಳತನ ಪ್ರಕರಣ: ಚಿನ್ನಾಭರಣ ಸಹಿತ ಇಬ್ಬರು ಅರೋಪಿಗಳ ಬಂಧನ
ಮಣಿಪಾಲ, ಜೂ.9: ಅಂತಾರಾಜ್ಯ ಮನೆ ಕಳ್ಳತನದ ಮುಸುಕುಧಾರಿ ಟ್ಯಾಟೋ- 313 ಗ್ಯಾಂಗ್‌ನ್ನು ಬೇಧಿಸುವಲ್ಲಿ ಮಣಿಪಾಲ ಪೊಲೀಸರು ಯಶಸ್ವಿಯಾಗಿದ್ದು, ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರು ಸಿಂಗಸಂದ್ರ ವಾರ್ಡ್‌ನ ದರ್ಶನ್ ಆರ್.(21) ಹಾಗೂ ದಾವಣಗೆರೆಯ ಬಸವನಹಾಳದ ಚಂದ್ರು(26) ಬಂಧಿತ ಆರೋಪಿಗಳು. ಇವರಿಂದ ಚಿನ್ನದ ಕರಿಮಣಿ ಸರ, ಚಿನ್ನದ ನೆಕ್ಲೆಸ್, ಚಿನ್ನದ ಕಿವಿಯೋಲೆ, ಚಿನ್ನದ ಚೈನ್ ಸೇರಿದಂತೆ ಒಟ್ಟು 7,90,000 ರೂ. ಮೌಲ್ಯದ ಚಿನ್ನಾಭರಣಗಳನ್ನು ಹಾಗೂ 2 ಮೊಬೈಲ್ ಪೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಜಿಬೆಟ್ಟು ಮಂಚಿ ಕೋಡಿಯ ಅಮಿತ ಡ್ಯಾನಿಯಲ್ ಎಂಬವರ ಮನೆಗೆ ಫೆ.3ರಿಂದ ಫೆ.4ರ ಮಧ್ಯಾವಧಿಯಲ್ಲಿ ನುಗ್ಗಿದ ಕಳ್ಳರು, ಮನೆಯಲ್ಲಿದ್ದ 7 ಲಕ್ಷ ಮೌಲ್ಯದ 75 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದರು. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಮಧ್ಯೆ ಜೂ.6ರಂದು ಮಣಿಪಾಲ ಎಸ್ಸೈ ಶಂಭುಲಿಂಗಯ್ಯ ಹಾಗೂ ಠಾಣಾ ಅಪರಾಧ ಸಿಬ್ಬಂದಿ ರವಿರಾಜ್, ಮಂಜುನಾಥ ರಾತ್ರಿ ಗಸ್ತು ತಿರುಗುವಾಗ ಇಂದ್ರಾಳಿ ರೈಲ್ವೆ ಗೋಡಾನ್ ರಸ್ತೆ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ದರ್ಶನ್ ಹಾಗೂ ಚಂದ್ರುನನ್ನು ವಶಕ್ಕೆ ಪಡೆದುಕೊಂಡಿದ್ದರು. ಇವರನ್ನು ಕೂಲಂಕಷವಾಗಿ ವಿಚಾರಿಸಿದಾಗ ಅವರು, ರೈಲ್ವೆ ಹಳಿ ಹತ್ತಿರದ ಬೀಗ ಹಾಕಿದ ಮನೆಗಳ ಬಾಗಿಲು ಮುರಿದು ಒಳ ಪ್ರವೇಶಿಸಿ ಕಳ್ಳತನ ಮಾಡಿರುವುದಾಗಿ ತಿಳಿಸಿದ್ದರು. ಅವರಲ್ಲಿದ್ದ ಮನೆಗಳ ಬಾಗಿಲು ಮುರಿಯಲು ತಂದ ಸಾಮಾಗ್ರಿ ಗಳನ್ನು ಪೊಲೀಸರು ವಶಪಡಿಸಿಕೊಂಡರು.
ಮಣಿಪಾಲ ಪೊಲೀಸ್ ಠಾಣೆಗೆ ಕರೆ ತಂದ ಇವರಿಬ್ಬರನ್ನು ಪೊಲೀಸ್ ನಿರೀಕ್ಷಕ ಮಹೇಶ ಪ್ರಸಾದ್ ಅವರು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಇವರು, ಅಮಿತ ಡ್ಯಾನಿಯಲ್ ಎಂಬವರ ಮನೆಯಲ್ಲಿ ನಡೆದ ಕಳ್ಳತನದ ಆರೋಪಿಗಳು ಎಂಬುದು ದೃಢಪಟ್ಟಿತು. ಅದರಂತೆ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಪ್ರಕರಣದ ಚಿನ್ನಾಭರಣವನ್ನು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿತ್ತು. ಬಳಿಕ ಅವರಿಂದ ಶಿವಮೊಗ್ಗದ ಲಾಡ್ಜ್‌ನ ರೂಮ್‌ನಲ್ಲಿ ಇಟ್ಟಿದ್ದ ಚಿನ್ನಾಭರಣ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ರೈಲ್ವೆ ನಿಲ್ದಾಣ ಹತ್ತಿರದ ಮನೆಗಳೇ ಟಾರ್ಗೆಟ್!
ಬಂಧಿತ ಆರೋಪಿಗಳು ಕೈಗಳಿಗೆ ಟ್ಯಾಟೋ-313 ಎಂಬ ಅಚ್ಚೆ ಹಾಕಿ ಕೊಂಡು ಟ್ಯಾಟೋ-313 ಗ್ಯಾಂಗ್ ಎಂಬ ಹೆಸರಿನಲ್ಲಿ ಗುರುತಿಸಿ ಕೊಂಡಿದ್ದಾರೆ.
ಕರ್ನಾಟಕ, ತಮಿಳನಾಡು ಹಾಗೂ ಆಂಧ್ರಪ್ರದೇಶ ರಾಜ್ಯಗಳ ರೈಲ್ವೆ ನಿಲ್ದಾಣದ ಹತ್ತಿರವಿರುವ ಮನೆಗಳನ್ನು ಗುರಿಯಾಗಿರಿಸಿ ರಾತ್ರಿ ವೇಳೆ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಕೈಗಳಿಗೆ ಗ್ಲೌಸ್‌ಗಳನ್ನು ಧರಿಸಿ ಕಾಲಿಗೆ ಸಾಕ್ಸ್‌ಗಳನ್ನು ಹಾಕಿಕೊಂಡು ಹಾಗೂ ಕೈಯಲ್ಲಿ ಮನೆಯ ಬಾಗಿಲು ಒಡೆಯಲು ಕಬ್ಬಿಣದ ಆಯುಧಗಳನ್ನು ಹಿಡಿದುಕೊಂಡು ಬೀಗ ಹಾಕಿದ ಮನೆಗಳನ್ನು ಕಳ್ಳತನ ಮಾಡುವ ಪ್ರವೃತ್ತಿ ಹೊಂದಿದ್ದಾರೆ.
ಈ ಆರೋಪಿಗಳ ವಿರುದ್ಧ ಕರ್ನಾಟಕ ಹಾಗೂ ತಮಿಳನಾಡು ರಾಜ್ಯಗಳಲ್ಲಿ ಹಲವಾರು ಪ್ರಕರಣ ದಾಖಲಾಗಿವೆ. ತನಿಖೆ ವೇಳೆ ಆರೋಪಿಗಳು ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2025ರ ಸೆಪ್ಟೆಂಬರ್ ತಿಂಗಳಲ್ಲಿ ಕಳ್ಳತನ ಮಾಡಿರುವ ಬಗ್ಗೆ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಇಬ್ಬರು ಆರೋಪಿಗಳನ್ನು ಬಂಧಿಸಲು ಬಾಕಿ ಇದ್ದು, ಅವರಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.