ಎರಡನೇ ಬಾರಿಗೆ ಕುಕ್ಕುಜೆ ಸರಕಾರಿ ಪ್ರೌಢಶಾಲೆ ರಾಷ್ಟ್ರಮಟ್ಟಕ್ಕೆ ಆಯ್ಕೆ!
ಆದಿತ್ಯನ ‘ಕಟ್-ಇಟ್-ಈಸಿ’ ಯಂತ್ರಕ್ಕೆ ಮಾನ್ಯತೆ
ಉಡುಪಿ, ಸೆ.23: ಕೇಂದ್ರ ಸರಕಾರದ ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವಾಲಯವು ನಡೆಸುವ ರಾಷ್ಟ್ರಮಟ್ಟದ ಇನ್‌ಸ್ಪಾಯರ್ ಮಾನಕ್ ಮಾದರಿ ರಚನಾ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಸರಕಾರಿ ಪದವಿ ಪೂರ್ವ ಕಾಲೇಜು ಕುಕ್ಕುಜೆಯ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ಆದಿತ್ಯ ನಿರ್ಮಿಸಿದ ಯಂತ್ರವೊಂದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಸಂಸ್ಥೆಯ ಇತಿಹಾಸದಲ್ಲಿ ಎರಡನೇ ಬಾರಿಗೆ ಇನ್‌ಸ್ಪಾಯರ್ ಮಾನಕ್ ಸ್ಪರ್ಧೆಗೆ ಆಯ್ಕೆಯಾದಂತಾಗಿದೆ.
ಶಾಲೆಯ ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಮಾಜ ವಿಜ್ಞಾನ ಅಧ್ಯಾಪಕರಾದ ಸುರೇಶ್ ಮರಕಾಲ ಇವರ ಮಾರ್ಗದರ್ಶನ ದಲ್ಲಿ ರಚಿಸಿದ ‘ಕಟ್- ಇಟ್ - ಈಸಿ’ ಎಂಬ ಯಂತ್ರವು ರಾಷ್ಟ್ರಮಟ್ಟಕ್ಕೆ ತಲುಪಿದ ನೂತನ ಅನ್ವೇಷಣೆಯಾಗಿದೆ.
ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಸ್ನಾನಕ್ಕೆ, ಅಡುಗೆಗೆ ಸೌದೆಯನ್ನು ಬಳಸುತ್ತಾರೆ. ಹಾಗೆಂದು ದಪ್ಪದಪ್ಪದ ಸೌದೆಗಳನ್ನು ಒಡೆಯುವುದೇ ಬಹಳ ಕಷ್ಟದ ಕೆಲಸ. ಆದರೆ ಕಟ್-ಇಟ್-ಈಸಿ ಯಂತ್ರವು ಅತ್ಯಂತ ಸುಲಭವಾಗಿ ಈ ಕೆಲಸವನ್ನು ಮಾಡಿ ಮುಗಿಸುತ್ತದೆ. ವಿಶೇಷವೆಂದರೆ ಈ ಯಂತ್ರದಲ್ಲಿ ಯಾವುದೇ ಇಲೆಕ್ಟ್ರಿಕ್ ಅಥವಾ ಇಲೆಕ್ಟ್ರಾನಿಕ್ ಉಪಕರಣವಿಲ್ಲ. ಕೇವಲ ಕಬ್ಬಿಣದಿಂದ ರಚಿಸಿದ ಈ ಯಂತ್ರವನ್ನು ಬಳಸಿ ಚಿಕ್ಕ ಮಕ್ಕಳು ಕೂಡಾ ದೊಡ್ಡ ದೊಡ್ಡ ಕಟ್ಟಿಗೆಗಳನ್ನು ಒಡೆದು ಚಿಕ್ಕ ಚಿಕ್ಕ ಗಾತ್ರದ ಸೌದೆಯನ್ನಾಗಿ ಮಾಡಬಹುದು.
ಆದಿತ್ಯ ರೂಪಿಸಿದ ಸರಳ ಯಂತ್ರದ ಮತ್ತೊಂದು ವಿಶೇಷವೆಂದರೆ ಕಟ್ಟಿಗೆಯ ದಪ್ಪಕ್ಕೆ ಅನುಗುಣವಾಗಿ ಸಣ್ಣ, ಮಧ್ಯಮ ಹಾಗೂ ದಪ್ಪ ಎಂಬ ಮೂರು ಪ್ರಕಾರದ ಸೌದೆಗಳನ್ನು ಮಾಡುವ ಅನುಕೂಲವೂ ಈ ಯಂತ್ರದಲ್ಲಿದೆ! ಮಾದರಿಯ ಕಾರ್ಯವಿಧಾನ, ವಿನ್ಯಾಸವನ್ನು ವಿದ್ಯಾರ್ಥಿ ಆದಿತ್ಯ ರಚಿಸಿದ್ದರೆ, ಕಬ್ಬಿಣದ ಚೌಕಟ್ಟು ರಚನೆ, ವೆಲ್ಡಿಂಗ್ ಕೆಲಸ, ಪೈಂಟಿಂಗ್ ಇತ್ಯಾದಿ ಕಾರ್ಯ ಗಳನ್ನು ಶಿಕ್ಷಕ ಸುರೇಶ್ ಮರಕಾಲ ಹಾಗೂ ಪ್ರವೀಣ್ ಹೆಬ್ರಿ ಮಾಡಿದ್ದಾರೆ. ಶಾಲೆಯ ವಿಜ್ಞಾನ ಶಿಕ್ಷಕಿ ಪ್ರತಿಮಾ ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ಬಾಬುರಾಯ ಕಾಮತ್ ಅವರು ಇವರಿಗೆ ಸಂಪೂರ್ಣ ಬೆಂಬಲವನ್ನು ನೀಡಿ ಸಹಕರಿಸಿದ್ದರು.
ಎರಡು ವರ್ಷಗಳ ಹಿಂದೆ ಅಧ್ಯಾಪಕರಾದ ಸುರೇಶ್ ಮರಕಾಲ ಇವರ ಮಾರ್ಗದರ್ಶನದಲ್ಲಿ ಇದೇ ಶಾಲೆಯಲ್ಲಿ ಕಲಿಯುತ್ತಿದ್ದ ಇಬ್ಬರು ವಿದ್ಯಾರ್ಥಿನಿ ಯರಾದ ಅಮೂಲ್ಯ ಹಾಗೂ ನಿಕಿತಾ ರಚಿಸಿದ ಮಾದರಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಮುಂದೆ ಜಪಾನ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗೂ ಆಯ್ಕೆಯಾಗಿದ್ದವು.
ಇದೀಗ ಎರಡನೇ ಬಾರಿಗೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಹಾಗೂ ಶಿಕ್ಷಕರ ಸಾಧನೆ ಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಡಯಟ್ ಪ್ರಾಂಶುಪಾಲರು, ಕ್ಷೇತ್ರಶಿಕ್ಷಣಾಧಿಕಾರಿಗಳು, ಇನ್‌ಸ್ಪಾಯರ್ ನೋಡಲ್ ಅಧಿಕಾರಿಗಳು, ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ಎಸ್.ಬಿ.ಸಿ, ಎಸ್.ಡಿ.ಎಂ.ಸಿ, ಪೋಷಕರು, ಹಳೆ ವಿದ್ಯಾರ್ಥಿಗಳು ಶ್ಲಾಘಿಸಿದ್ದಾರೆ.
‘ನಮ್ಮ ಸುತ್ತಮುತ್ತಲೂ ಸೌದೆ ಒಡೆಯಲು ಎದುರಾಗುತ್ತಿದ್ದ ಸಮಸ್ಯೆಯನ್ನು ನೋಡಿ, ಗುರುಗಳ ಮಾರ್ಗದರ್ಶನದಲ್ಲಿ ಅದಕ್ಕೊಂದು ಯಂತ್ರದ ರೂಪ ನೀಡಿದೆವು. ಇದೀಗ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದು ಕೇಳಿ ಬಹಳ ಸಂತೋಷವಾಗಿದೆ. ನನಗೆ ಪ್ರೇರಣೆ ನೀಡಿ ನನ್ನ ಕಲ್ಪನೆಯು ಯಂತ್ರದ ರೂಪಕ್ಕೆ ಬರಲು ಕಾರಣೀಕರ್ತರಾದ ಸುರೇಶ್ ಮರಕಾಲ ಸರ್ ಅವರಿಗೆ ಧನ್ಯವಾದಗಳು.
- ಆದಿತ್ಯ, ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾದ ವಿದ್ಯಾರ್ಥಿ.
‘ಸಮಾಜ ವಿಜ್ಞಾನ ಶಿಕ್ಷಕನಾಗಿ ರಾಷ್ಟ್ರಮಟ್ಟದ ವಿಜ್ಞಾನ ಮಾದರಿ ಸ್ಪರ್ಧೆಗೆ ವಿದ್ಯಾರ್ಥಿಗಳನ್ನು ಅಣಿಗೊಳಿಸಲು ನನಗೆ ಶಾಲೆಯಲ್ಲಿ ಅವಕಾಶ ನೀಡಿದ್ದು ಬಹು ದೊಡ್ಡ ವಿಚಾರ. ಹೀಗಾಗಿ ಎರಡನೇ ಬಾರಿಗೆ ನಮ್ಮ ಶಾಲೆಯು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ಈ ಗೌರವವನ್ನು ನನ್ನೆಲ್ಲಾ ಆತ್ಮೀಯ ಸಹದ್ಯೋಗಿಗಳಿಗೆ, ಇಲಾಖಾ ಅಧಿಕಾರಿಗಳಿಗೆ, ಎಸ್.ಬಿ.ಸಿ, ಎಸ್.ಡಿ.ಎಂ.ಸಿಗೆ ಅರ್ಪಿಸುತ್ತೇನೆ.
-ಸುರೇಶ್ ಮರಕಾಲ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕಕ್ಷಕರು, ಕುಕ್ಕುಜೆ.