ಮಲ್ಪೆ| ಕೊಚ್ಚಿಹೋದ ಮೂವರು ಪ್ರವಾಸಿಗರು: ರಕ್ಷಣಾ ತಂಡದಿಂದ ಇಬ್ಬರ ರಕ್ಷಣೆ, ಓರ್ವ ಮೃತ್ಯು

Update: 2024-04-18 15:41 GMT

ಫೈಲ್‌ ಫೋಟೊ 

ಮಲ್ಪೆ, ಎ.18: ಜಿಲ್ಲೆಯ ಪ್ರವಾಸಕ್ಕೆ ಬಂದು ಮಲ್ಪೆ ಸಮುದ್ರದಲ್ಲಿ ಈಜಾಡುತಿದ್ದ ವೇಳೆ ಮೂವರು ಸಮುದ್ರದ ಅಲೆಗಳ ಸೆಳೆತಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗಿದ್ದು, ಮಲ್ಪೆಯ ಕಡಲ ರಕ್ಷಣಾ ತಂಡದವರು ಈ ಪೈಕಿ ಇಬ್ಬರನ್ನು ರಕ್ಷಿಸಿದ್ದು, ಓರ್ವ ಮೃತ ಪಟ್ಟ ಘಟನೆ ಇಂದು ಅಪರಾಹ್ನ ನಡೆದಿದೆ.

ಮೃತಪಟ್ಟವರನ್ನು ಹಾಸನ ಜಿಲ್ಲೆ ದಾಬೆ ಬೇಲೂರು ನಿವಾಸಿ ಗಿರೀಶ್ (26) ಎಂದು ಗುರುತಿಸಲಾಗಿದೆ. ಸಂತೋಷ್ (24) ಹಾಗೂ ಹರೀಶ್ (30)ರನ್ನು ರಕ್ಷಿಸಲಾಗಿದ್ದು, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಇವರಿಬ್ಬರೂ ಪ್ರಾಣಾಯಪಾಯದಿಂದ ಪಾರಾಗಿರುವುದಾಗಿ ತಿಳಿದುಬಂದಿದೆ.

ಹಾಸನ ಜಿಲ್ಲೆ ದಾಬೆ ಬೇಲೂರಿನಿಂದ 20 ಮಂದಿಯ ತಂಡ ಜಿಲ್ಲೆ ಪ್ರವಾಸಕ್ಕೆ ಬಂದಿದ್ದು, ಇಂದು ಮಲ್ಪೆ ಬೀಚ್‌ಗೆ ಆಗಮಿಸಿ ದ್ದರು. ಇವರು ಶೃಂಗೇರಿ, ಆಗುಂಬೆಗೆ ಭೇಟಿ ನೀಡಿ ಮಲ್ಪೆ ಬಂದಿದ್ದರೆಂದು ಹೇಳಲಾಗಿದೆ. ಮಲೆ ಬೀಚ್‌ಗೆ ಬಂದ ತಂಡದ ಮೂರು ಸಮುದ್ರಕ್ಕಿಳಿದು ನೀರಿನಲ್ಲಿ ಆಟವಾಡ ತೊಡಗಿದ್ದರು. ಮಧ್ಯಾಹ್ನದ ದೊಡ್ಡ ಅಲೆಗಳ ಸೆಳೆತಕ್ಕೆ ಸಿಕ್ಕಿ ಇವರು ಕೊಚ್ಚಿ ಹೋಗಿದ್ದಾರೆ.

ತತ್‌ಕ್ಷಣವೇ ಸ್ಥಳಕ್ಕೆ ಧಾವಿಸಿ ಬಂದ ಮುಳುಗು ತಜ್ಞ ಈಶ್ವರ ಮಲ್ಪೆ ಮತ್ತವರ ತಂಡದವರು ಮೂವರನ್ನೂ ರಕ್ಷಿಸಿ ದಡಕ್ಕೆ ತಂದಿದ್ದರು. ಮೂವರ ಪೈಕಿ ಗಂಭೀರ ಸ್ಥಿತಿಯಲ್ಲಿದ್ದ ಗಿರೀಶ್ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವನ್ನಪ್ಪಿದ್ದು, ಉಳಿದಿ ಬ್ಬರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತಿದ್ದಾರೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಿನದ ಕೆಲವು ಸಮಯದಲ್ಲಿ ಸಮುದ್ರದ ಅಲೆಗಳ ಅಬ್ಬರ ಹೆಚ್ಚಿರುತ್ತದೆ. ಸಮುದ್ರದ ಬಗ್ಗೆ ಯಾವುದೇ ಮಾಹಿತಿ ಇಲ್ಲದೇ ನೀರಾಟವಾಡಲು ಇಳಿದು ಮುಂದೆ ಹೋದಾಗ ಇವರು ಹಠಾತ್ತನೆ ಎದುರಾಗುವ ಸಮುದ್ರದಡಿಯ ನೀರಿನ ಸೆಳೆತಕ್ಕೆ ಸಿಲುಕಿ ದಡ ಸೇರಲು ಸಾಧ್ಯವಾಗದೇ ಕೊಚ್ಚಿ ಹೋಗುತ್ತಾರೆ. ಹೀಗಾಗಿ ಸಮುದ್ರಕ್ಕೆ ಇಳಿಯುವ ಮುನ್ನ ಪ್ರವಾಸಿಗರು ಎಚ್ಚರ ವಹಿಸಬೇಕಿದೆ. ಅಲ್ಲಿರುವ ಸೂಚನೆಗಳನ್ನು ಹಾಗೂ ರಕ್ಷಣಾ ಪಡೆಯ ಸದಸ್ಯರ ಸಲಹೆಗಳನ್ನು ಆಲಿಸಬೇಕು ಎಂದು ಈಶ್ವರ ಮಲ್ಪೆ ಪ್ರವಾಸಿಗರಿಗೆ ಕಿವಿಮಾತು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News