ಅಶಕ್ತರಿಗೆ ಆಸರೆಯಾಗುವುದು ಮನುಷ್ಯ ಧರ್ಮ: ನಾಗೇಶ್ ಕುಮಾರ್

Update: 2024-04-29 12:32 GMT

ಉಡುಪಿ: ಉದ್ಯಾವರ ಫ್ರೆಂಡ್ಸ್ ಸರ್ಕಲ್ ತನ್ನ ಸುವರ್ಣ ಸಂಭ್ರಮ ವರ್ಷದ ಏಪ್ರಿಲ್ ತಿಂಗಳ ಕಾರ್ಯಕ್ರಮವಾಗಿ ಆರ್ಥಿಕವಾಗಿ ಹಿಂದುಳಿದ ಅಂಕುದುರು ನಿವಾಸಿ ಜಾನಕಿಯವರಿಗೆ ಹೊಲಿಗೆ ಯಂತ್ರ ವಿತರಣಾ ಕಾರ್ಯಕ್ರಮವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.

ಹೊಲಿಗೆ ಯಂತ್ರ ವಿತರಿಸಿ ಮಾತನಾಡಿದ ಸಂಸ್ಥೆಯ ಗೌರವಾಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್, ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಅಶಕ್ತರ ಕೈಹಿಡಿದು ಮೇಲೆತ್ತಲು ಆಸರೆಯಾಗುವುದು ನಿಜವಾಗಿ ಮನುಷ್ಯನ ಸಹಜವಾದ ಧರ್ಮ. ಆದರೆ ಇಂದಿನ ಈ ಕೊಳ್ಳುಬಾಕ ಸಂಸ್ಕೃತಿಯ ಹಿನ್ನೆಲೆಯಲ್ಲಿ ಅವೆಲ್ಲವನ್ನು ನಾವು ಮರೆತು ನಮಗೆ ನಾವೇ ಪರಿಧಿ ಹಾಕಿಕೊಂಡು ಸ್ವಾರ್ಥದಿಂದ ಬದುಕುತ್ತಿದ್ದೇವೆ. ನಿಜವಾಗಿಯೂ ಸಮಾಜದ ಕಟ್ಟ ಕಡೆಯ ವ್ಯಕ್ತಿಯತ್ತ ದೃಷ್ಟಿ ಹರಿಸಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ಕರೆತರುವಲ್ಲಿ ನಾವೆಲ್ಲ ಪ್ರಯತ್ನಿಸಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಉದ್ಯಾವರ ಗ್ರಾಪಂ ಅಧ್ಯಕ್ಷೆ ಮಾಲತಿ ಸಂದೀಪ್ ಶುಭ ಸಂದೇಶವನ್ನು ನೀಡಿದರು. ಸಂಸ್ಥೆಯ ಸದಸ್ಯರಾದ ರಿಯಾಜ್ ಪಳ್ಳಿ, ಸುಹೇಲ್ ರಹಮತ್, ಹಮೀದ್ ಸಾಬ್ಜಾನ್, ಯು.ಸೀತಾರಾಮ್, ಆಶಾ ವಾಸು, ಸುಗಂಧಿ ಶೇಖರ್, ಶೇಖರ್ ಕೋಟಿಯಾನ್, ಅಜಿತ್ ಮೆಂಡನ್, ಸರೋಜಾ ಅನುಪ್, ಸುಂದರ ಸುವರ್ಣ, ಅನ್ಸರ್ ಸತ್ತಾರ್, ಅನುಪ್ ಕುಮಾರ್, ಶ್ರೀಧರ್ ಗಣೇಶ್ ನಗರ, ಭಾಸ್ಕರ್, ಹೆಲನ್ ಫೆರ್ನಾಂಡಿಸ್, ಶ್ರೀಧರ್ ಮಾಬಿಯಾನ್ ಮೊದಲಾದವರು ಉಪಸ್ಥಿತರಿದ್ದರು.

ಸಂಸ್ಥೆಯ ಅಧ್ಯಕ್ಷ ತಿಲಕ್‌ರಾಜ್ ಸಾಲಿಯಾನ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಅಬಿದ್ ಅಲಿ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News