ರಂಗ ರಂಗು ರಜಾ ಮೇಳ ಸಮಾರೋಪ

Update: 2024-04-29 12:35 GMT

ಕುಂದಾಪುರ, ಎ.29: ಸಮುದಾಯ ಸಾಂಸ್ಕೃತಿಕ ಸಂಘಟನೆ ಕುಂದಾಪುರ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ದಾನಿಗಳ ಮತ್ತು ಪೋಷಕರ ಸಹಕಾರದೊಂದಿಗೆ ಸರಕಾರಿ ಶಾಲೆಯ ಹಾಗೂ ವಲಸೆ ಕಾರ್ಮಿಕರ ಮಕ್ಕಳಿಗೆ ಹತ್ತು ದಿನಗಳ ಕಾಲ ಉಚಿತವಾಗಿ ಹಮ್ಮಿಕೊಳ್ಳಲಾದ ರಂಗ ರಂಗು ಬೇಸಿಗೆ ರಜಾ ಮೇಳದ ಸಮಾರೋಪ ಸಮಾರಂಭ ಇತ್ತೀಚೆಗೆ ನಡೆಯಿತು.

ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾದ, ಸಿನಿಮಾ ನಿರ್ದೇಶಕ ಯಾಕೂಬ್ ಖಾದರ್ ಗುಲ್ವಾಡಿ ಮಾತನಾಡಿ, ಮಹಾತ್ಮಾ  ಗಾಂಧಿ ಪಾರ್ಕಿನ ಈ ಸುಂದರ ಪರಿಸರದಲ್ಲಿ 10 ದಿನಗಳ ಕಾಲ ಮಕ್ಕಳು ವೈವಿಧ್ಯಮಯವಾದ ಸೃಜನಶೀಲ ಚಟುವಟಿಕೆಗಳಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡಿರುವುದಕ್ಕೇ ಈ ಸಂಭ್ರಮದ ವಾತಾವರಣವೇ ಸಾಕ್ಷಿಯಾಗಿದೆ. ಮಕ್ಕಳಲ್ಲಿನ ಪ್ರತಿಭೆಗಳನ್ನು ಗುರುತಿಸಿ, ಗೌರವಿಸುವಲ್ಲಿ ಸಮುದಾಯ ಸಂಘಟನೆ ಮಹತ್ವದ ಪಾತ್ರ ನಿರ್ವಹಿಸುತ್ತಾ ಬಂದಿದೆ ಎಂದು ಅಭಿಪ್ರಾಯಪಟ್ಟರು.

ಶಾರದಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಎಂ.ದಿನೇಶ್ ಹೆಗ್ಡೆ ಮಾತನಾಡಿ, ಕುಂದಾಪುರ ಸಮುದಾಯ ತನ್ನ ವಿಶಿಷ್ಟ ಕಾರ್ಯಕ್ರಮಗಳ ಮೂಲಕ ರಾಜ್ಯದಾದ್ಯಂತ ಗುರುತಿಸಲ್ಪಟ್ಟಿದೆ. ವಿಭಿನ್ನ ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ ಎಂದರು.

ವೇದಿಕೆಯಲ್ಲಿ ಪ್ರಭಾಕರ ನೇರಳೆಕಟ್ಟೆ ಉಪಸ್ಥಿತರಿದ್ದರು. ಶಿಬಿರ ನಿರ್ದೇಶಕ ವಾಸುದೇವ ಗಂಗೇರ ಶಿಬಿರದ ಅನುಭವ ಗಳನ್ನು ಹಂಚಿ ಕೊಂಡರು. ವಿದ್ಯಾರ್ಥಿಗಳು ರಜಾ ಮೇಳದ ಅನುಭವಗಳನ್ನು ವ್ಯಕ್ತಪಡಿಸಿದರು. ಕುಂದಾಪುರ ಸಮುದಾಯದ ಅಧ್ಯಕ್ಷ ಡಾ.ಸದಾನಂದ ಬೈಂದೂರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಗಣೇಶ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಇಡೀ ರಜಾ ಮೇಳದ ನಿರ್ವಹಣೆಯನ್ನು ಕುಂದಾಪುರ ಸಮುದಾಯದ ಕೋಶಾಧಿಕಾರಿ ಬಾಲಕೃಷ್ಣ ಕೆ ಎಂ ಮತ್ತು ವಿಕ್ರಂ ನಿರ್ವಹಿಸಿದ್ದರು. ಉತ್ಕಲಾ, ಚಂದ್ರಶೇಖರ್ ವಿ., ನರಸಿಂಹ ಎಚ್., ಪ್ರಭಾಕರ್ ನೆರಳಕಟ್ಟೆ, ರವಿ ವಿ.ಎಂ., ರಾಜೇಶ ವಡೇರಹೋಬಳಿ, ಭಾಗ್ಯವತಿ, ಶ್ರಾವ್ಯ, ನಿರಂಜನ, ಭಾಗ್ಯ, ಮಾನಸ, ಸುಧಾಕರ ಕಾಂಚನ್ ಸಹಕರಿಸಿದರು.

ಮೇಳದ ಸಂಪನ್ಮೂಲ ವ್ಯಕ್ತಿಗಳಾಗಿ ರಂಗಾಟಗಳಿಗಾಗಿ ರೋಹಿತ್ ಬೈಕಾಡಿ, ಕ್ರಾಫ್ಟ್ ತರಬೇತಿಗಾಗಿ ಡಾ.ಸದಾನಂದ ಬೈಂದೂರು ಹಾಗೂ ಅಶೋಕ ತೆಕ್ಕಟ್ಟೆ, ಜೇಡಿ ಮಣ್ಣಿನ ಆಕೃತಿಗಳಿಗಾಗಿ ಕೆ.ಎಂ.ಹೊಸೇರಿ ಜೊತೆಗಿದ್ದರು. ಮೇಳದಲ್ಲಿ ಅಂಬೇಡ್ಕರ್ ಜಯಂತಿ ಆಕಾಶ ವೀಕ್ಷಣೆ ಮತ್ತು ಮಕ್ಕಳ ಸಂತೆ ಕಾರ್ಯಕ್ರಮ ಗಳನ್ನು ನಿರ್ವಹಿಸಲಾಯಿತು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News