ಮೋದಿಯ ಏಕಚಕ್ರಾಧಿಪತ್ಯ ನೀತಿ ಕೊನೆಯಾಗಬೇಕು: ವೀರಪ್ಪ ಮೊಯ್ಲಿ

Update: 2024-04-29 15:49 GMT

ಕುಂದಾಪುರ, ಎ.29: ಮೋದಿಯವರ ಏಕಚಕ್ರಾಧಿಪತ್ಯ ನೀತಿ ಕೊನೆಯಾಗ ಬೇಕು. ಮೋದಿ ಮುಸ್ಲಿಂ, ಕ್ರಿಶ್ಚಿಯನ್ನರ ಮೇಲೆ ಗಧಾಪ್ರಹಾರ ಮಾಡುತ್ತಿದ್ದು ಆ ಗಧೆ ಅವರ ಮೇಲೆ ಬೀಳಲಿದೆ. ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಐಕ್ಯಕೂಟ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೆಮ್ಮಾಡಿ ಸಮೀಪದ ಜಾಲಾಡಿ ಯಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ಇಂದಿರಾ ಗಾಂಧಿಯವರಂತಹ ನಾಯಕರಿದ್ದ ಪಕ್ಷದಲ್ಲಿ ನಾನು ಇದ್ದ ಕಾರಣ ಬಡ ಜನರಿಗೆ ಸಹಕಾರ ಮಾಡಲು ಸಹಾಯ ವಾಗಿತ್ತು. ಬೇರೆ ಪಕ್ಷದಲ್ಲಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ. ಬಡವರಿಗೆ ಉದ್ಯೋಗ, ಶಿಕ್ಷಣ, ಉತ್ತಮ ಬದುಕು ಕಟ್ಟಿ ಕೊಟ್ಟ ಕಾಂಗ್ರೆಸ್ ಪಕ್ಷ ನನ್ನ ತಾಯಿ ಇದ್ದ ಹಾಗೆ ಎಂದು ಅವರು ಹೇಳಿದರು.

ನಾನು ಬದುಕಿದ್ದು ಬಡವರಿಗಾಗಿ, ಬಡವರಿಗಾಗಿ ಸಾಯುವ ನಿರ್ಧಾರವಿತ್ತು. ಶ್ರೀಮಂತರು ಮಕ್ಕಳು, ವೈದ್ಯರು, ಇಂಜಿನಿಯರ್ ಆಗುತ್ತಾರೆ. ಬಡವರ ಮಕ್ಕಳು ಕೂಡ ಡಾಕ್ಟರ್, ಇಂಜಿನಿಯರ್ ಆಗಬೇಕೆಂದು ಕಾನೂನು ಮಾಡಿದ್ದರಿಂದ ಬಡವರು ಬದುಕು ಕಟ್ಟಿಕೊಳ್ಳುವಂತಾಗಿತ್ತು. ಗ್ರಾಪಂನಲ್ಲಿ ಮೀಸ ಲಾತಿ, ಹೆಣ್ಣುಮಕ್ಕಳಿಗೆ ತಂದೆ ಆಸ್ತಿಯಲ್ಲಿ ಶೇ.50 ನೀಡಬೇಕೆಂಬುದು ಕಾಂಗ್ರೆಸ್ ತಂದ ಕಾನೂನು. ತ್ಯಾಗ ಮಾಡುವ ಗುಣ ಕಾಂಗ್ರೆಸ್ ಪಕ್ಷದಲ್ಲಿದೆ ಎಂದರು.

ಮುಖ್ಯಮಂತ್ರಿಯಾಗಿ ಜೈಲಿಗೆ ಹೋದ ಮೊದಲ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ. ಅವರ ಮಗ ಸಂಸದರಾಗಿ ಎಕರೆಗಟ್ಟಲೆ ಭೂಮಿ ಖರೀದಿಸಿ ದ್ದಾರೆ ಎಂದು ಅವರು ಆರೋಪಿಸಿದರು.

ಬೈಂದೂರು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ, ಬಂಡವಾಳ ಶಾಹಿಗಳನ್ನು, ಸ್ವಾಮೀಜಿ, ಮಠದ ವರನ್ನು ಎದುರು ಹಾಕಿಕೊಂಡು ಹಿಂದುಳಿದ ಸಮಾಜದವರು ವೈದ್ಯರಾಗುವ ಅವಕಾಶ ತಂದುಕೊಟ್ಟವರು ವೀರಪ್ಪ ಮೊಯ್ಲಿ. ಬಿಜೆಪಿಯಲ್ಲಿ ಬಿ.ಎಸ್.ಯಡಿಯೂರಪ್ಪ, ಬಿ.ವೈ. ರಾಘವೇಂದ್ರ ಸಂಸದರಾದ ಮೇಲೆ ಹೆಮ್ಮಾಡಿಗೆ ಏನು ಮಾಡಿಲ್ಲ. ಅಪಪ್ರಚಾರ ಗಳಿಗೆ ಕಿವಿಗೊಡದೆ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರನ್ನು ಗೆಲ್ಲಿಸಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಸುರೇಂದ್ರ ಶೆಟ್ಟಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆ ಬೈಲು, ಚುನಾವಣಾ ಉಸ್ತುವಾರಿ ಡಿ.ಆರ್.ರಾಜು ಕಾರ್ಕಳ, ಹೆಮ್ಮಾಡಿ ಗ್ರಾಪಂ ಮಾಜಿ ಅಧ್ಯಕ್ಷ ಸುಧಾಕರ ದೇವಾಡಿ ಗಕಟ್ಟು, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ಮುಖಂಡ ಚಂದ್ರ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು.

ಪ್ರಜ್ವಲ್‌ನಂತವರೇ ಬಿಜೆಪಿ ಪರಿವಾರದಲ್ಲಿ ಇರುವುದು: ವೀರಪ್ಪ ಮೊಲಿ

ಕುಂದಾಪುರ: ಪ್ರಜ್ವಲ್ ರೇವಣ್ಣ ಪ್ರಕರಣದ ಕುರಿತಂತೆ ರಾಜ್ಯ ಸರಕಾರ ತನಿಖೆಗೆ ಆದೇಶಿಸಿದೆ. ಬಿಜೆಪಿ ಮೈತ್ರಿ ಪಕ್ಷದ ಅಭ್ಯರ್ಥಿ ಪ್ರಜ್ವಲ್ ಮಹಿಳಾ ದೌರ್ಜನ್ಯ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡಿದ್ದು, ಇಂತಹವರೇ ಬಿಜೆಪಿ ಪರಿವಾರದಲ್ಲಿ ಇರುವಂತವರು ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಆರೋಪಿಸಿದ್ದಾರೆ.

ಹೆಮ್ಮಾಡಿಯ ಜಾಲಾಡಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯುಪಿಎ ಕಾಲದಲ್ಲಿ 3 ಲಕ್ಷ ಮಹಿಳಾ ದೌರ್ಜನ್ಯದ ಪ್ರಕರಣಗಳಿದ್ದವು. ಆದರೆ ಈಗ ಅದು 5 ಲಕ್ಷಕ್ಕೆ ಏರಿಕೆಯಾಗಿದೆ. ಮೋದಿಯವರ ಭೇಟಿ ಪಡಾವೋ ಭೇಟಿ ಬಚಾವ್ ಅಂದರೆ ನಿಜಾರ್ಥವೇನು? ಇವರ ಅವಧಿಯಲ್ಲಿ ಮಹಿಳಾ ದೌರ್ಜನ್ಯ ಹೆಚ್ಚಿದೆ ಎಂದು ಟೀಕಿಸಿದರು.

ರಾಜ- ಮಹಾರಾಜರಿಗೆ ಕಾಂಗ್ರೆಸ್‌ನಿಂದ ಅವಮಾನ ಎಂದಿರುವ ಮೋದಿಯವರೇ, ರಾಜರ ಸಿಂಹಾಸನ ತಪ್ಪಿಸಿ, ಜನರಿಗೆ ಸಿಂಹಾಸನ ಕೊಟ್ಟಿರುವುದು ಅವಮಾನವೇ? ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಮಾಜ್ರ್ಯಶಾಹಿ ಶಕ್ತಿಯನ್ನು ಹೆಚ್ಚಿಸುವ ಸರ್ವಾಧಿಕಾರಿ ಆಡುವ ಮಾತು ಗಳಾಗಿವೆ. ಅವರಿಗೆ ಪ್ರಜಾಪ್ರಭುತ್ವದ ಮೇಲೆ ವಿಶ್ವಾಸವಿಲ್ಲ. ಇವರು ಮತವನ್ನು ಮೋದಿಗಾಗಿ ಕೇಳುತ್ತಿದ್ದಾರೆಯೇ ಹೊರತು ಬಿಜೆಪಿಗೆ ಅಲ್ಲ ಎಂದರು.

ಈಗಿನ ಪರಿಸ್ಥಿತಿಯಲ್ಲಿ ಮೋದಿ ಮೊದಲು, ಆಮೇಲೆ ರಾಷ್ಟ್ರ, ಪಕ್ಷ ಮೂಲೆಗೆ ಎಂಬಾತಾಗಿದೆ. ಈ ರೀತಿಯ ಸರ್ವಾಧಿಕಾರಿ ಧೋರಣೆಯಿಂದ ದೇಶ ಉದ್ಧಾರ ಆಗಲ್ಲ. ಬಡವರ ಯಾವ ಕೆಲಸವನ್ನೂ ಮಾಡಲ್ಲ. ರಾಜ-ಮಹಾರಾಜರ ಮೇಲೆ ಕನಿಕರ ತೋರಿಸುವ ವ್ಯಕ್ತಿ ಯಾವ ಪ್ರಜಾಪ್ರಭುತ್ವವಾದಿ ಎಂದು ವೀರಪ್ಪ ಮೊಯ್ಲಿ ಪ್ರಶ್ನಿಸಿದರು.

ಯುಪಿಎ ಸರಕಾರದ ಅವಧಿಯಲ್ಲಿ ಬರ ಪರಿಹಾರ ಒಂದು ಪೈಸೆ ಕೂಡ ಬಾಕಿ ಇಟ್ಟಿರಲಿಲ್ಲ. ಮನಮೋಹನ್ ಸಿಂಗ್ ಅವರೊಂದಿಗೆ ನಾವೆಲ್ಲ ಒಟ್ಟು ಗೂಡಿ ರಾಜ್ಯಕ್ಕೆ ಹೆಚ್ಚಿನ ಅನುದಾನ ಕೊಟ್ಟಿದ್ದೆವು. ಆಗ ನಾವು ಕೊಟ್ಟಿಲ್ಲ ಅಂತ ಈಗ ನಾವು ಕೇಳುವಾಗ ಅಶೋಕ್‌ಗೆ ನೆನಪಾಯಿತೇ? ಎಂದು ಅವರು ಪ್ರಶ್ನಿಸಿದರು.

ನಮ್ಮ ಕಾಲದಲ್ಲಿ ಬಡಮಕ್ಕಳಿಗೆ ಅನುಕೂಲವಾಗಲೆಂದು ಸಿಇಟಿ ತಂದಿದ್ದೇವು. ಆದರೆ ಈಗ ನೀಟ್ ಮಾಡಿದ ಮೇಲೆ ಸುಮಾರು 19 ಸಾವಿರ ಸೀಟುಗಳು ಹೊರರಾಜ್ಯದ ವಿದ್ಯಾರ್ಥಿಗಳಿಗೆ ಸಿಗುತ್ತಿವೆ. ರಾಜ್ಯದ ವಿದ್ಯಾರ್ಥಿಗಳಿಗೆ ಇದರಿಂದ ಅನ್ಯಾಯವಾಗುತ್ತಿದೆ ಎಂದು ವೀರಪ್ಪ ಮೊಯ್ಲಿ ದೂರಿದರು.

‘ಕರಾವಳಿಯಲ್ಲಿಯೂ ಈ ಬಾರಿ ಕಾಂಗ್ರೆಸ್‌ಗೆ ಅನುಕೂಲಕರ ಪರಿಸ್ಥಿತಿಯಿದೆ. ಎರಡೂ ಕಡೆಗಳಲ್ಲಿಯೂ ನಾವು ಗೆಲ್ಲುತ್ತೇವೆ. ಚುನಾವಣೆ ನಡೆದ 14 ಕಡೆಗಳ ಪೈಕಿ ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಉತ್ತಮ ವಾತಾವರಣವಿದೆ. ಒಳ್ಳೆಯ ಮತಗಳು ಬರಲಿವೆ. ಮೋದಿ ವಿರುದ್ಧ ಜನರು ರೋಸಿ ಹೋಗಿದ್ದು, ರಾಜ್ಯದಲ್ಲಿ 28ರಲ್ಲಿ ಹೆಚ್ಚಿನ ಸೀಟುಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಕೇಂದ್ರದಲ್ಲಿಯೂ ಈ ಬಾರಿ ನಮ್ಮ ಒಕ್ಕೂಟದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ’

-ವೀರಪ್ಪ ಮೊಯ್ಲಿ, ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News