ಅಭಿವೃದ್ಧಿ ವಿಚಾರ ಬಿಟ್ಟು ಒಡೆದು ಆಳುವ ನೀತಿಗೆ ಬಿಜೆಪಿ ಒತ್ತು: ನಿಖೇತ್‌ರಾಜ್ ಮೌರ್ಯ

Update: 2024-04-30 12:26 GMT

ಬೈಂದೂರು, ಎ.30: ಎಲ್ಲಾ ಜಾತಿ ಧರ್ಮ-ಸಮುದಾಯಗಳವರನ್ನು ಒಗ್ಗೂಡಿಸುವುದು ಕಾಂಗ್ರೆಸ್ ಉದ್ದೇಶ. ಯಾವುದೇ ಸರಕಾರ ಹಸಿವು, ಶಾಲೆ, ಹೆಣ್ಮಕ್ಕಳ ಬದುಕು, ಬಡವರ ಮನೆ, ರಸ್ತೆ, ಶಾಲೆ-ಕಾಲೇಜು ವಿಚಾರದಲ್ಲಿ ಚಿಂತನೆ ಮಾಡಬೇಕೇ ಹೊರತು ಬಿಜೆಪಿ ಸರಕಾರದಂತೆ ಒಡೆದು ಆಳುವ ನೀತಿ ಅನುಸರಿಸಬಾರದು ಎಂದು ಕೆಪಿಸಿಸಿ ವಕ್ತಾರ ನಿಖೇತ್ ರಾಜ್ ಮೌರ್ಯ ಹೇಳಿದ್ದಾರೆ.

ಬೈಂದೂರು ಹಾಗೂ ವಂಡ್ಸೆ ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಮಂಗಳವಾರ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬೈಂದೂರು ತಾಲೂಕಿನ ಕಿರಿಮಂಜೇಶ್ವರದಲ್ಲಿ ಆಯೋಜಿಸಲಾದ ಮಹಿಳಾ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.

ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಗೆದ್ದರೆ ಸಂವಿಧಾನ, ನಾರಾಯಣ ಗುರುಗಳ ವಿಚಾರ ಧಾರೆ, ಚಿಂತನೆಗಳು ಗೆದ್ದಂತೆ. ಇಲ್ಲಿ ಬಸವಣ್ಣ ಹಾಗೂ ಕುವೆಂಪುರವರ ತತ್ವ ಸಿದ್ಧಾಂತಗಳನ್ನು ಜಾಗೃತಗೊಳಿಸ ಬೇಕಾಗಿದೆ ಎಂದ ಅವರು, ಅಡಿಕೆ ಬೆಳೆಗಾರರು, ರೈತರಿಗೆ ನ್ಯಾಯ ಒದಗಿಸಿ ಕೊಡಲು ಬಿಜೆಪಿ ಸರಕಾರದಿಂದ ಆಗಿಲ್ಲ. ಇಲ್ಲಿ ವಿದೇಶದಿಂದ ಅಡಿಕೆ ಆಮದಿಗೆ ಬಿಜೆಪಿ ಮುಂದಾಗಿದೆ. ಇದರಿಂದ ರೈತರ ಅಡಿಕೆ ತೋಟಗಳು ಅವನತಿಯ ಹಂತ ತಲುಪಲಿವೆ ಎಂದರು.

ದೇಶದಲ್ಲಿ ಬಿಜೆಪಿ 400 ಸ್ಥಾನ ಪಡೆದರೆ, ಸಂವಿಧಾನ ತಿದ್ದುಪಡಿ ಮಾಡುವು ದಾಗಿ ಹೇಳುತ್ತಿದ್ದಾರೆ. ಇದೇ ಸಂವಿಧಾನದಿಂದ ಬಡವರ ಮಕ್ಕಳು, ಕೂಲಿ ಕಾರ್ಮಿಕರ ಮಕ್ಕಳು ಸಮಾಜದಲ್ಲಿ ಉನ್ನತ ಸ್ಥಾನ ಪಡೆಯಲು ಸಾಧ್ಯವಾಗಿರು ವುದು. ಆದರೆ ಬಿಜೆಪಿಯವರು ಇಂತಹ ಸಂವಿಧಾನವನ್ನು ಅಳಿಸಲು ಮುಂದಾಗಿದ್ದಾರೆ. ಇದಕ್ಕೆ ಅವಕಾಶ ಕಲ್ಪಿಸಬಾರದು ಎಂದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ ಕುಮಾರ ಮಾತನಾಡಿ, ಕಾಂಗ್ರೆಸ್ ಸರಕಾರ ದಿಂದ ಮಾತ್ರ ಹೆಣ್ಣು ಮಕ್ಕಳಿಗೆ ಸಮಾನತೆ ದೊರಕಿಸಿಕೊಡಲು ಸಾಧ್ಯ. ಹೆಣ್ಣುಮಕ್ಕಳು ಬೆಲೆ ಏರಿಕೆ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು. ಬೆಲೆ ಏರಿಕೆಯ ಪರಿಸ್ಥಿತಿ ನಿಭಾಯಿಸಲು ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬರಬೇಕಾಗಿದೆ. ರಾಜ್ಯದ ಕಾಂಗ್ರೆಸ್ ಸರಕಾರ ನೀಡಿದ ಗ್ಯಾರೆಂಟಿ ಭಾಗ್ಯಗಳು ಯಾವ ಕಾರಣಕ್ಕೂ ನಿಲ್ಲುವುದಿಲ್ಲ. ಅದರ ಬಗ್ಗೆ ಅಪಪ್ರಚಾರವನ್ನು ಜನ ಸಾಮಾನ್ಯರು ನಂಬಬಾರದು ಎಂದು ಹೇಳಿದರು.

ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಮಾತನಾಡಿ, ಸರ್ವ ಧರ್ಮ, ಜಾತಿಯಿಲ್ಲದೆ ಒಟ್ಟುಗೂಡಿಸಿ ಕೊಂಡು ಹೋಗುವ ಪಕ್ಷ ಕಾಂಗ್ರೆಸ್. ದೇಶದ ಇತಿಹಾಸದಲ್ಲಿ ಮಹಿಳೆಯರ, ಅಲ್ಪಸಂಖ್ಯಾತರ, ಬಡವರ ಪರವಾಗಿ ನಿಂತಿದ್ದು ಕಾಂಗ್ರೆಸ್. ಜನರ ಮಧ್ಯೆ ಕೋಮು ಭಾವನೆ ಸೃಷ್ಟಿಸಿ, ಸುಳ್ಳಿನ ಮೂಲಕ ಕಳೆದ 9 ವರ್ಷಗಳ ಹಿಂದೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರು. ಸತ್ಯವನ್ನು ನುಡಿಯುವ ಕಾಂಗ್ರೆಸ್ ಪಕ್ಷ ಜನರಿಗೆ ಬದುಕು ರೂಪಿಸಿಕೊಟ್ಟಿದೆ ಎಂದರು.

ನಟ ಶಿವರಾಜಕುಮಾರ ಮಾತನಾಡಿ, ಮಾನವೀಯತೆಯ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು. ಬಡವರ ಸಮಸ್ಯೆಗಳಿಗೆ ನೆರವಾಗಲಿ ಎನ್ನುವ ಉದ್ದೇಶದಿಂದ ಸರಕಾರವನ್ನು ಆಯ್ಕೆ ಮಾಡಬೇಕು. ಇಲ್ಲಿ ಕೇವಲ ಭರವಸೆಗಳಿಗೆ ಮರಳಾಗ ಬಾರದು. ಆದುದರಿಂದ ಜನರ ಸೇವೆ ಮಾಡಲು ಗೀತಾಗೆ ಅವಕಾಶ ಕಲ್ಪಿಸಿಕೊಡಿ ಎಂದು ಮನವಿ ಮಾಡಿದರು.

ನಟ ದುನಿಯಾ ವಿಜಯ್, ಮಾಜಿ ಸಚಿವರಾದ ಕೆ.ಜಯಪ್ರಕಾಶ್ ಹೆಗ್ಡೆ, ಬಿ.ಬಿ.ಲಿಂಗಯ್ಯ, ಮಾಜಿ ಶಾಸಕರಾದ ಕೆ.ಗೋಪಾಲ ಪೂಜಾರಿ, ಬಿ.ಎಂ ಸುಕುಮಾರ ಶೆಟ್ಟಿ, ಮುಖಂಡ ಮುನಿಯಾಲು ಉದಯ ಕುಮಾರ್ ಶೆಟ್ಟಿ ಮಾತನಾಡಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಎಬಾವ, ಮಾಜಿ ಪ್ರಧಾನ ಕಾರ್ಯದರ್ಶಿ ಅಶ್ವಿನ್ ಕುಮಾರ್ ರೈ, ಶೃಂಗೇರಿ ಶಾಸಕ ಟಿ.ಡಿ.ರಾಜುಗೌಡ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಗೀತಾ ವಾಗ್ಳೆ, ಬೈಂದೂರು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೌರಿ ದೇವಾಡಿಗ, ಮಂಜುನಾಥ ಶೆಟ್ಟಿ, ಅನಿಲ್, ಡಿ.ಆರ್.ರಾಜು, ಎಸ್.ರಾಜು ಪೂಜಾರಿ, ವಿಜಯ ಶೆಟ್ಟಿ ಕಾಲ್ತೋಡು, ಎಸ್.ಪ್ರಕಾಶ್ಚಂದ್ರ ಶೆಟ್ಟಿ, ಮದನ್ ಕುಮಾರ್, ರೋಶನ್ ಕುಮಾರ್ ಶೆಟ್ಟಿ, ಡಾ.ಸುಬ್ರಮಣ್ಯ ಭಟ್, ಬಾಬು ಹೆಗ್ಡೆ, ಶಂಕರ್ ಪೂಜಾರಿ, ಜಗದೀಶ್ ದೇವಾಡಿಗ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ ಉಪಸ್ಥಿತರಿದ್ದರು.

’ಬಿಜೆಪಿಯಿಂದ ಧರ್ಮಗಳ ಮಧ್ಯೆ ವಿಷ: ದುನಿಯಾ ವಿಜಯ್

ದೇಶದಲ್ಲಿ ಹಿಂದೂ- ಮುಸ್ಲಿಮರು ಹೊಡೆದಾಡಿಕೊಂಡು ಇರಬೇಕೆಂಬ ಪರಿಸ್ಥಿತಿಯನ್ನು ಬಿಜೆಪಿಯವರು ನಿರ್ಮಾಣ ಮಾಡು ತ್ತಿದ್ದಾರೆ. ಅದಕ್ಕೆ ನಾವು ಆಸ್ಪದ ಕೊಡಬಾರದು ಎಂದು ನಟ ದುನಿಯಾ ವಿಜಯ್ ಹೇಳಿದರು.

ಬಿಜೆಪಿಯವರು ಹಿಂದೂ ಮುಸ್ಲಿಂರ ನಡುವೆ ವಿಷ ಬೀಜ ಬಿತ್ತಿ ಸಮಾಜದಲ್ಲಿ ಬಿರುಕು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ಅವಕಾಶ ಕಲ್ಪಿಸಿ ಕೊಡಬಾರದು. ಅದಕ್ಕಾಗಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರಿಗೆ ಮತ ನೀಡಿ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.

‘ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನ ಸಾಮಾನ್ಯರ ಅಳಲು ಆಲಿಸಲು ಸರಕಾರದ ವ್ಯವಸ್ಥೆ ಇರುವುದು. ಆದರೆ ಕೇಂದ್ರದಲ್ಲಿ ಬಿಜೆಪಿ ಆಡಳಿತ ಬಂದಾಗಿನಿಂದ ಜಾತಿ- ಧರ್ಮಗಳ ನಡುವೆ ಬಿರುಕು ಮೂಡಿಸುತ್ತಿದೆ. ಸಮುದಾಯಗಳ ನಡುವೆ ಭೇದ-ಭಾವ ಮೂಡಿಸಿ, ಮಾನವ ಹಕ್ಕಿಗೆ ಧಕ್ಕೆ ಉಂಟು ಮಾಡಲಾಗುತ್ತಿದೆ’

-ನಿಖೇತ್ ರಾಜ್ ಮೌರ್ಯ, ಕೆಪಿಸಿಸಿ ವಕ್ತಾರರು

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News