ಹೆಬ್ರಿ ಅಡಾಲ್‌ಬೆಟ್ಟು ಚರಂಡಿಯಲ್ಲಿ ಕೊಳಚೆ ನೀರು: ಸಾಂಕ್ರಾಮಿಕ ರೋಗದ ಭೀತಿ, ಗ್ರಾಪಂ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ

Update: 2024-04-30 13:15 GMT

ಹೆಬ್ರಿ: ಅಡಾಲ್ ಬೆಟ್ಟು ಶಿಶುಮಂದಿರದ ಸಮೀಪ ಇರುವ ಪರಿಸರದಲ್ಲಿ ಹಾದು ಹೋದ ಚರಂಡಿಯಲ್ಲಿ ಕೊಳಚೆ ನೀರು ನಿಂತು ದುರ್ನಾಥ ಬೀರುತ್ತಿದ್ದು ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ.

ಅಡಾಲ್‌ಬೆಟ್ಟು ಪರಿಸರದಲ್ಲಿ ಅನೇಕ ಮನೆಗಳಿದ್ದು ಈ ಭಾಗದಲ್ಲಿ ಮಳೆಗಾಲ ದಲ್ಲಿ ಮಳೆನೀರು ಹರಿಯುವ ಸಣ್ಣ ಚರಂಡಿ ಇದೆ. ಹೆಬ್ರಿ ಪಟ್ಟಣದ ಹೋಟೆಲ್ ಗಳಿಂದ, ವಿನು ನಗರದಿಂದ ಕೆಲವು ಮನೆಯವರು ಹಾಗೂ ಸುತ್ತಮುತ್ತಲಿನ ಮನೆಯವರ ತ್ಯಾಜ್ಯ ನೀರನ್ನು ಇದೇ ಚರಂಡಿ ಮೂಲಕ ಬಿಡುತ್ತಿದ್ದಾರೆ.

ಅಡಲ್‌ಬೆಟ್ಟು ಬಳಿ ಈ ಚರಂಡಿ ಬ್ಲಾಕ್ ಆಗಿ ಅಲ್ಲಿಯೇ ನೀರು ನಿಂತು ತ್ಯಾಜ್ಯ ಕೊಳೆತು ದುರ್ನಾಥ ಬೀರುತ್ತಿದೆ. ಇದರಿಂದ ಪರಿಸರದಲ್ಲಿ ಸೊಳ್ಳೆ ಕಾಟ ಹೆಚ್ಚಾಗಿದ್ದು, ರೋಗದ ಭಯ ಆವರಿಸಿದೆ. ಈ ಪರಿಸರದಲ್ಲಿ ಹಲವಾರು ಮಕ್ಕಳು ಶಾಲೆಗೆ ಹೋಗುತ್ತಿದ್ದು ದುರ್ನಾಥ ಹಾಗೂ ಸೊಳ್ಳೆ ಕಾಟದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಹೆಬ್ರಿ ಗ್ರಾಪಂಗೆ ಮನವಿ: ತ್ಯಾಜ್ಯ ನೀರು ತೋಡಿ ಹರಿದು ಬಾರದಂತೆ ಕ್ರಮ ತೆಗೆದುಕೊಳ್ಳುಬೇಕೆಂದು ಆಗ್ರಹಿಸಿ ಈ ಪರಿಸರದ ಗ್ರಾಮಸ್ಥರು ಹೆಬ್ರಿ ಗ್ರಾಪಂಗೆ ಮನವಿ ಸಲ್ಲಿಸಿದ್ದಾರೆ.

ತ್ಯಾಜ್ಯ ನೀರು ಹರಿದು ಬಂದು ಈ ಭಾಗದಲ್ಲಿ ನಿಲ್ಲುತ್ತಿದ್ದು ಇದರಿಂದ ಈ ಭಾಗದ ಜನರಿಗೆ ಅನೇಕ ತೊಂದರೆಗಳಾಗುತ್ತಿದೆ ಹಾಗು ಮಾರಣಾಂತಿಕ ಕಾಯಿಲೆಗಳು ಹರಡುವ ಸಾಧ್ಯತೆಗಳಿವೆ. ತಾವು ಈ ಭಾಗದ ಪ್ರತಿ ಮನೆಯವರಿಗೂ ಇಂಗು ಗುಂಡಿ ಯನ್ನು ನಿರ್ಮಿಸಿಕೊಳ್ಳಲು ಸೂಚಿಸುವಂತೆ ಹಾಗೂ ವಿನು ನಗರ ಹಾಗು ಹೋಟೆಲ್‌ಗಳಿಂದ ಬರುವ ನೀರನ್ನು ಈ ತೋಡಿಗೆ ಬಿಡದಿರುವಂತೆ ಸೂಚಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಒತ್ತಾಯಿಸಲಾಗಿದೆ.

ಈ ಸಂಬಂಧ ಹಲವು ವರ್ಷಗಳಿಂದ ಗ್ರಾಮ ಪಂಚಾಯತ್ ಅಧ್ಯಕ್ಷರು, ಈ ಭಾಗದ ಸದಸ್ಯರು ಹಾಗೂ ಪಿಡಿಓಗೆ ಮನವಿ ಸಲಿಸಿದ್ದರೂ ಈವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈ ಮೂಲಕ ಇಲ್ಲಿನ ಸಮಸ್ಯೆ ಬಗ್ಗೆ ಗ್ರಾಪಂ ತೀವ್ರ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

‘ಕೊಳಚೆ ನೀರು ನಿಂತು ಸೊಳ್ಳೆಗಳು ಉತ್ಪತ್ತಿಕೊಂಡು ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಇದ್ದು ಈ ಬಗ್ಗೆ ಆರೋಗ್ಯ ಇಲಾಖೆ ಕೂಡಲೇ ಎಚ್ಚೆತ್ತು ಕೊಂಡು ಸಂಬಂಧ ಪಟ್ಟವರಿಗೆ ತಿಳಿಸಿ, ಸಮಸ್ಯೆ ಬಗೆಹರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

‘ಬೇರೆ ಯಾರಿಗೂ ಸಮಸ್ಯೆ ಆಗಬಾರದು ಎಂದು ನಮ್ಮ ಮನೆಯ ಕೊಳಚೆ ನೀರನ್ನು ಮನೆಯ ಪರಿಸರದಲ್ಲಿ ಇಂಗು ಗುಂಡಿ ನಿರ್ಮಾಣ ಮಾಡಿ ಸಮಸ್ಯೆ ಬಗೆಹರಿಸಲಾಗಿದೆ. ಆದರೆ ಮನೆಯ ಪಕ್ಕದಲ್ಲಿ ಕಾಂಪೌಂಡ್ ತಾಗಿ ಬೇರೆಯವರ ಕೊಳಚಿ ನೀರು ಬಂದು ನಮ್ಮ ಮನೆಯ ಪಕ್ಕದಲ್ಲಿ ನಿಂತು ದುರ್ನಾಥ ಬೀರುತ್ತಿದೆ. ಇದರಿಂದ ಸೊಳ್ಳೆ ಕಾಟ ಹೆಚ್ಚಾಗಿ ಈ ಪ್ರದೇಶ ದಲ್ಲಿ ವಾಸ ಮಾಡುವುದೇ ಕಷ್ಟ ಎನಿಸಿದೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ’

-ಸೋನಿ ಶೆಟ್ಟಿ, ಸ್ಥಳೀಯರು

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News