ಬಣ್ಣ ಅಳಿಸುತ್ತಿರುವಾಗ ಹೃದಯಾಘಾತದಿಂದ ಚೌಕಿಯಲ್ಲೇ ನಿಧನರಾದ ಗಂಗಾಧರ ಪುತ್ತೂರು

Update: 2024-05-02 14:14 GMT

 ಗಂಗಾಧರ ಪುತ್ತೂರು

ಉಡುಪಿ, ಮೇ 2: ದಿನದ ಪಾತ್ರ ಮುಗಿಸಿ ಚೌಕಿಯಲ್ಲಿ ಮುಖದ ಬಣ್ಣ ಅಳಿಸಲು ಸಿದ್ಧರಾಗುತಿದ್ದ ವೇಳೆ ತೀವ್ರ ಹೃದಯಾ ಘಾತಕ್ಕೊಳಗಾದ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಹಿರಿಯ ಕಲಾವಿದ ಗಂಗಾಧರ ಪುತ್ತೂರು (60) ನಿಧನರಾಗಿದ್ದಾರೆ.

ಧರ್ಮಸ್ಥಳ ಯಕ್ಷಗಾನ ಮೇಳ ಮೇ 1ರಂದು ಕೋಟ ಗಾಂಧಿ ಮೈದಾನದಲ್ಲಿ ಹರಕೆಯ ಬಯಲಾಟದಲ್ಲಿ ‘ಶ್ರೀಧರ್ಮಸ್ಥಳ ಕ್ಷೇತ್ರ ಮಹಾತ್ಮೆ’ ಎಂಬ ಪ್ರಸಂಗದ ಪ್ರದರ್ಶನ ನೀಡುತ್ತಿತ್ತು. ಇದರಲ್ಲಿ ಕುಕ್ಕಿತ್ತಾಯ ದೈವದ ಪಾತ್ರ ನಿರ್ವಹಿಸಿದ್ದ ಗಂಗಾಧರ ಪುತ್ತೂರು ತನ್ನ ಪಾಲಿನ ವೇಷ ಮುಗಿಸಿ 12:30ರ ಸುಮಾರಿಗೆ ಚೌಕಿಗೆ ಬಂದು ವೇಷ ಕಳಚಿ ಮುಖದ ಬಣ್ಣ ಅಳಿಸುತ್ತಿದ್ದಾಗ ತೀವ್ರ ಹೃದಯಾಘಾತಕ್ಕೊಳಗಾಗಿ ನಿಧನರಾದರು ಎಂದು ತಿಳಿದುಬಂದಿದೆ.

ಪುತ್ತೂರು ತಾಲೂಕು ಸೇಡಿಯಾಪು ನಿವಾಸಿಯಾಗಿರುವ ಗಂಗಾಧರ್, ಧರ್ಮಸ್ಥಳ ಯಕ್ಷಗಾನ ಮೇಳದಲ್ಲಿ ನಾಲ್ಕು ದಶಕಗಳ ತಿರುಗಾಟ ನಿರ್ವಹಿಸಿದ್ದ ಹಿರಿಯ ಸವ್ಯಸಾಚಿ ಕಲಾವಿದರಾಗಿದ್ದಾರೆ. ತನ್ನ 18ನೇ ವಯಸ್ಸಿಗೆ ಯಕ್ಷಗಾನ ವೃತ್ತಿ ಪರ ಮೇಳದಲ್ಲಿ ಬಣ್ಣ ಹಚ್ಚಿದ ಗಂಗಾಧರ ಪುತ್ತೂರು, ಕೆ.ಗೋವಿಂದ ಭಟ್ ಹಾಗೂ ಕರ್ಗಲ್ಲು ವಿಶ್ವೇಶ್ವರ ಭಟ್‌ರಿಂದ ಯಕ್ಷಗಾನ ನೃತ್ಯಾಭ್ಯಾಸ ಕಲಿತಿದ್ದರು.ಮಳೆಗಾಲದಲ್ಲಿ ನಿಡ್ಲೆ ಗೋವಿಂದ ಭಟ್ಟರ ಮಹಾಗಣಪತಿ ಯಕ್ಷಗಾನ ಮಂಡಳಿಯಲ್ಲಿ ತಿರುಗಾಟ ಮಾಡುತಿದ್ದರು.

ಯಕ್ಷಗಾನದ ಸವ್ಯಸಾಚಿ ಕಲಾವಿದರೆಂದೇ ಖ್ಯಾತರಾದ ಇವರು ಸ್ತ್ರೀವೇಷದಿಂದ ಹಿಡಿದು ಪುಂಡುವೇಷ, ರಾಜವೇಷ, ಹೆಣ್ಣು ಬಣ್ಣದ ವೇಷಗಳನ್ನು ಸಮರ್ಥವಾಗಿ ನಿರ್ವಹಿಸುತಿದ್ದವರು. ಚಿತ್ರಾಂಗದೆ, ಮೋಹಿನಿ, ಪ್ರಮೀಳೆ, ಸೀತೆ, ಮಾಲಿನಿ, ದೇವೇಂದ್ರ, ದುಸ್ಯಾಸನ ಮುಂತಾದ ಪಾತ್ರಗಳನ್ನು ಅವರು ರಂಗಸ್ಥಳದಲ್ಲಿ ನಿರ್ವಹಿಸಿದ್ದರು.

ಕೆ.ನಾರಾಯಣಯ್ಯ ಮತ್ತು ಲಕ್ಷ್ಮೀ ದಂಪತಿಯ ಪುತ್ರನಾಗಿ ಸೇಡಿಯಾಪು ನಲ್ಲಿ ಜನಿಸಿದ ಗಂಗಾಧರ್, 7ನೇ ತರಗತಿ ಯವರೆಗೆ ಮಾತ್ರ ವಿದ್ಯಾಭ್ಯಾಸ ಮಾಡಿದ್ದರೂ, ಯಕ್ಷಗಾನ ರಂಗಸ್ಥಳದಲ್ಲಿ ಹಿರಿಯ ಕಲಾವಿದರ ಮೂಲಕ ಮಾತುಗಾರಿಕೆ, ಕುಣಿತವನ್ನು ಕಲಿತಿದ್ದರು. ಅವರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News