ದೇಶದ ಪದವೀಧರರ ಸಂಖ್ಯೆ ದ್ವಿಗುಣಗೊಳ್ಳಬೇಕು: ಕೆ.ವಿ.ಕಾಮತ್

Update: 2024-05-02 13:25 GMT

ಮಣಿಪಾಲ, ಮೇ 2: ದೇಶದ ಪದವೀಧರರ ಸಂಖ್ಯೆ ದ್ವಿಗುಣಗೊಂಡು ಅವರನ್ನು ದೇಶಾಭಿವೃದ್ಧಿಗೆ ಸಜ್ಜುಗೊಳಿಸುವ ಕಾರ್ಯವನ್ನು ಮಣಿಪಾಲದ ಮಾಹೆಯಂಥ ಸಂಸ್ಥೆಗಳು ಮಾಡಬೇಕಾಗಿದೆ ಎಂದು ನೇಶನಲ್ ಬ್ಯಾಂಕ್ ಫಾರ್ ಫೈನಾನ್ಸಿಂಗ್ ಇನ್‌ಫ್ರಾಸ್ಟ್ರಕ್ಚರ್ ಆ್ಯಂಡ್ ಡೆವಲಪ್‌ಮೆಂಟ್ ಹಾಗೂ ಜಿಯೋ ಫೈನಾನ್ಸಿಯಲ್ ಸರ್ವಿಸಸ್‌ನ ಅಧ್ಯಕ್ಷ ಕೆ.ವಿ.ಕಾಮತ್ ಹೇಳಿದ್ದಾರೆ.

ಡಾ ಟಿಎಂಎ ಪೈ ಅವರ 126ನೇ ಜನ್ಮದಿನದ ಅಂಗವಾಗಿ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ), ಅಕಾಡೆಮಿ ಆಫ್ ಜನರಲ್ ಎಜ್ಯುಕೇಷನ್ ಮಣಿಪಾಲ, ಮಣಿಪಾಲ್ ಮೀಡಿಯಾ ನೆಟ್‌ವರ್ಕ್ ಹಾಗೂ ಡಾ.ಟಿಎಂಎ ಪೈ ಪ್ರತಿಷ್ಠಾನದ ವತಿಯಿಂದ ಮಣಿಪಾಲದ ಹೊಟೇಲ್ ವ್ಯಾಲಿವ್ಯೆನಲ್ಲಿ ಮಂಗಳವಾರ ಸಂಜೆ ನಡೆದ ಸಂಸ್ಥಾಪಕರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು.

ಮುಂದಿನ ಎಂಟು ವರ್ಷಗಳಲ್ಲಿ ದೇಶದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ದ್ವಿಗುಣಗೊಳ್ಳುವ ನಿರೀಕ್ಷೆ ಇದ್ದು, ಈ ಸಂದರ್ಭದಲ್ಲಿ ಪದವೀಧರರ ಸಂಖ್ಯೆಯೂ ಈಗಿನ ಸಂಖ್ಯೆಗೆ ಹೋಲಿಸಿದರೆ ದ್ವಿಗುಣಗೊಳ್ಳಬೇಕಿದೆ. ಈ ಮೂಲಕ ದೇಶದ ಯುವಶಕ್ತಿಯ ಕಾರ್ಯಕ್ಷಮತೆ ಅಧಿಕಗೊಳ್ಳಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಮಾಹೆ ಟ್ರಸ್ಟ್‌ನ ಅಧ್ಯಕ್ಷ ಡಾ.ರಂಜನ್ ಆರ್.ಪೈ, ಟ್ರಸ್ಟಿ ವಸಂತಿ ಆರ್.ಪೈ, ಡಾ.ಟಿಎಂಎ ಪೈ ಫೌಂಡೇಷನ್‌ನ ಅಧ್ಯಕ್ಷ ಟಿ.ಅಶೋಕ್ ಪೈ, ಮಣಿಪಾಲ ಮೀಡಿಯಾ ನೆಟ್‌ವರ್ಕ್‌ನ ಸತೀಶ್ ಯು.ಪೈ, ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್, ಮಾಹೆಯ ಕುಲಪತಿ ಲೆ.ಜ. (ಡಾ) ಎಂ.ಡಿ. ವೆಂಕಟೇಶ್ ಹಾಗೂ ಮಣಿಪಾಲ ಗ್ರೂಪ್‌ನ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ರತಿಭಾ ಪುರಸ್ಕಾರ, ಅತ್ಯುತ್ತಮ ಮಹಿಳಾ ಸಿಬ್ಬಂದಿಗಳಿಗೆ ಪ್ರಶಸ್ತಿ, ಪ್ರತಿಭಾನ್ವಿತರಿಗೆ ವಿದ್ಯಾರ್ಥಿ ವೇತನ ವಿತರಣೆ, ಹಿರಿಯ ದಾದಿಯರು ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಅಧ್ಯಕ್ಷ ಮಾಹೆ ಪ್ರೊಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಅತಿಥಿಗಳನ್ನು ಸ್ವಾಗತಿಸಿದರು. ಮಾಹೆ ಕುಲಪತಿ ಲೆ.ಜ.(ಡಾ) ಎಂ.ಡಿ. ವೆಂಕಟೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಹೆ ಕುಲಸಚಿವ ಡಾ.ಪಿ.ಗಿರಿಧರ ಕಿಣಿ ಅತಿಥಿಗಳನ್ನು ಪರಿಚಯಿಸಿ ಸಹಕುಲಪತಿ ಡಾ.ಎನ್.ಎನ್.ಶರ್ಮ ವಂದಿಸಿದರು.ಎಂಐಟಿ ಪ್ರಾಧ್ಯಾಪಕ ಡಾ.ಪ್ರವೀಣ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.


Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News