ಉಡುಪಿ: ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಜಿಲ್ಲಾಡಳಿತದಿಂದ ಸಲಹೆ, ಸೂಚನೆ

Update: 2024-05-02 15:40 GMT

ಡಿಸಿ ಡಾ. ವಿದ್ಯಾಕುಮಾರಿ

ಉಡುಪಿ, ಮೇ 2: ಅತಿಯಾದ ಉಷ್ಣತೆ ಮತ್ತು ಬಿಸಿಗಾಳಿಯಿಂದ ರಕ್ಷಣೆ ಪಡೆಯಲು, ಆರೋಗ್ಯ ಕಾಪಾಡಿಕೊಳ್ಳಲು ಮತ್ತು ಡೆಂಗಿ ಜ್ವರದ ನಿಯಂತ್ರಣದ ಬಗ್ಗೆ ಸಾರ್ವಜನಿಕರಿಗೆ ಜಿಲ್ಲಾಡಳಿತವು ಹಲವಾರು ಸಲಹೆ- ಸೂಚನೆಗಳನ್ನು ನೀಡಿದೆ.

ಬಾಯಾರಿಕೆ ಇಲ್ಲದಿದ್ದರೂ ಸಹಾ ಹೆಚ್ಚು ನೀರನ್ನು ಆಗಾಗ್ಗೆ ಕುಡಿಯುತ್ತಿರ ಬೇಕು. ಮೌಖಿಕ ಪುನರ್ಜಲೀಕರಣ ದ್ರಾವಣ (ಓಆರ್‌ಎಸ್), ಎಳನೀರು ಹಾಗೂ ಮನೆಯಲ್ಲಿಯೇ ಸಿದ್ಧಪಡಿಸಿದ ನಿಂಬೆ ಶರಬತ್ತು, ಹಣ್ಣಿನ ರಸಗಳು, ಮಜ್ಜಿಗೆ/ಲಸ್ಸಿಗಳನ್ನು ಒಂದು ಚಿಟಿಕೆ ಉಪ್ಪಿನೊಂದಿಗೆ ಬೆರೆಸಿ ಸೇವಿಸಬೇಕು ಮತ್ತು ಹೆಚ್ಚು ನೀರಿನ ಅಂಶವನ್ನು ಹೊಂದಿರುವ ಹಣ್ಣು, ತರಕಾರಿಗಳನ್ನು ಸೇವಿಸುವುದು ಉತ್ತಮ.

ಈ ಸಂದರ್ಭದಲ್ಲಿ ತಿಳಿಬಣ್ಣದ ಸಡಿಲವಾದ ಹತ್ತಿ ಬಟ್ಟೆಗಳನ್ನು ಹಾಗೂ ಗಾಳಿಯಾಡುವ ಪಾದರಕ್ಷೆಗಳನ್ನು ಧರಿಸುವುದು ಉತ್ತಮ. ಬಿಸಿಲಿನಲ್ಲಿ ಹೊರ ಹೋಗುವ ಸಂದರ್ಭದಲ್ಲಿ ಛತ್ರಿ, ಟೋಪಿ, ಟವೆಲ್, ತಂಪು ಕನ್ನಡಕಗಳನ್ನು ಬಳಸಬೇಕು.

ಸಾಧ್ಯವಾದಷ್ಟು ಬೆಳಗ್ಗೆ 11 ಗಂಟೆಯ ಒಳಗೆ ಹಾಗೂ ಸಂಜೆ 4 ಗಂಟೆಯ ನಂತರವೇ ಹೊರಾಂಗಣ ಚಟುವಟಿಕೆಗಳನ್ನು ಯೋಜಿಸಿಕೊಳ್ಳುವುದು ಸೂಕ್ತ ವಾಗಿದ್ದು, ಅಪರಾಹ್ನ 12 ರಿಂದ 4 ಗಂಟೆಯವರೆಗೆ ಬಿಸಿಲಿನಲ್ಲಿ ಓಡಾಡುವುದನ್ನು ಆದಷ್ಟು ತಪ್ಪಿಸಬೇಕು. ಸಾಧ್ಯವಾದಷ್ಟು ಗಾಳಿ ಬೀಸುವ, ತಣ್ಣಗಿರುವ ಹಾಗೂ ನೆರಳಿನ ಪ್ರದೇಶದಲ್ಲಿರಬೇಕು. ಮನೆಯಲ್ಲಿ ಕಿಟಕಿ ಪರದೆಗಳು, ಫ್ಯಾನ್, ಕೂಲರ್ ಹಾಗೂ ಎ.ಸಿ.ಯನ್ನು ಬಳಸಬಹುದು.

ಅತಿಯಾದ ಉಷ್ಣತೆಯಿಂದ ನವಜಾತ ಶಿಶುಗಳು ಮತ್ತು ಮಕ್ಕಳು, ಗರ್ಭಿಣಿಯರು, ಹಿರಿಯ ನಾಗರಿಕರು, ಹೃದ್ರೋಗ ಹಾಗೂ ರಕ್ತದ ಒತ್ತಡ ಗಳಂತಹ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳಿರುವವರು ಮತ್ತು ಹೊರಾಂಗಣದಲ್ಲಿ ಕೆಲಸ ಮಾಡುವವರಿಗೆ ಹೆಚ್ಚು ಅಪಾಯವಿರುವ ಹಿನ್ನಲೆ ಯಲ್ಲಿ ಇವರ ಬಗ್ಗೆ ಹೆಚ್ಚಿನ ಗಮನಹರಿಸಬೇಕು.

ಬಿಸಿಲಿನ ಪ್ರಖರತೆ ಹೆಚ್ಚಾಗಿರುವ ಈ ಅವಧಿಯಲ್ಲಿ ಚಿಕ್ಕಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ಯಬಾರದು. ಹಗಲಿನಲ್ಲಿ 11 ಗಂಟೆಯಿಂದ 4 ಗಂಟೆಯವರೆಗೆ ಅನಗತ್ಯವಾಗಿ ಬಿಸಿಲಿನಲ್ಲಿ ಓಡಾಡುವುದನ್ನು ತಪ್ಪಿಸಬೇಕು. ಮಕ್ಕಳು ಅಥವಾ ಸಾಕು ಪ್ರಾಣಿಗಳನ್ನು ನಿಲುಗಡೆ ಮಾಡಿರುವ ವಾಹನಗಳಲ್ಲಿ ಬಿಡಬಾರದು. ಮದ್ಯಪಾನ, ಕಾಫಿ, ಟೀ, ಕಾರ್ಬೋನೇಟೆಡ್ ಪಾನೀಯ ಗಳಿಂದ ದೂರವಿರಬೇಕು. ಮಧ್ಯಾಹ್ನದ ವೇಳೆಯಲ್ಲಿ ಶ್ರಮದಾಯಕವಾದ ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಬಾರದು.

ತಣ್ಣನೆಯ ನೀರಿನಲ್ಲಿ ಸ್ನಾನ ತುಂಬ ಉತ್ತಮ. ಬಾಯಿ ಒಣಗುವುದು, ವಿಪರೀತ ಸುಸ್ತು, ತಲೆ ಸುತ್ತು ಬರುವುದು, ಪ್ರಜ್ಞೆ ತಪ್ಪುವುದು, ಏರುಗತಿಯ ಉಸಿರಾಟ ಮತ್ತು ಹೃದಯ ಬಡಿತ, ವಾಕರಿಕೆ ಅಥವಾ ವಾಂತಿಯಾಗುವುದು ಇತ್ಯಾದಿ ಲಕ್ಷಣಗಳಿದ್ದಲ್ಲಿ ಕೂಡಲೇ ಹತ್ತಿರದ ಸರಕಾರಿ ಅಥವಾ ಖಾಸಗಿ ಆರೋಗ್ಯ ಸಂಸ್ಥೆಗಳನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದು ಕೊಳ್ಳಬೇಕು. ತುರ್ತು ಸಂದರ್ಭದಲ್ಲಿ ಇದ್ದಲ್ಲಿ 108ಕ್ಕೆ ಕರೆ ಮಾಡಬೇಕು ಹಾಗೂ ಅಗತ್ಯ ಮಾಹಿತಿ ಗಳಿಗಾಗಿ 102 ಸಹಾಯವಾಣಿಯನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾದಂಡಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡೆಂಗಿ ಜ್ವರ ನಿಯಂತ್ರಣಕ್ಕೆ ಕ್ರಮ

ಪ್ರಸ್ತುತ ಜಿಲ್ಲೆಯಲ್ಲಿ ಡೆಂಗಿ ಜ್ವರವು ವ್ಯಾಪಕವಾಗಿ ಹರಡುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಯಾವುದೇ ಜ್ವರವಿರಲಿ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ತಪಾಸಣೆಗೊಳಗಾಗಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು.

ಡೆಂಗಿ ಕಾಯಿಲೆಯನ್ನು ಹರಡುವ ಈಡಿಸ್ ಸೊಳ್ಳೆಯನ್ನು ನಿಯಂತ್ರಿಸಲು ಮನೆಯ ಒಳಾಂಗಣ ಮತ್ತು ಹೊರಾಂಗಣವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ನೀರು ಶೇಖರಿಸಿಡುವ ಪರಿಕರಗಳಾದ ತೊಟ್ಟಿ, ಡ್ರಂ, ಬ್ಯಾರೆಲ್‌ಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ, ಒಣಗಿಸಿ ಮತ್ತೆ ಭರ್ತಿ ಮಾಡಿ ಮುಚ್ಚಿಡಬೇಕು.

ಘನ ತ್ಯಾಜ್ಯಗಳಾದ ಟೈರು, ಟ್ಯೂಬ್ ತೆಂಗು ಮತ್ತು ಎಳನೀರಿನ ಚಿಪ್ಪುಗಳು, ಅನುಪಯುಕ್ತ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಫ್ರಿಡ್ಜ್, ಕೂಲರ್, ಹೂವಿನಕುಂಡಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸ್ವಯಂ ರಕ್ಷಣಾ ವಿಧಾನಗಳನ್ನು ಅನುಸರಿಸುವ ಮೂಲಕ ಸಾರ್ವಜನಿಕರು ಡೆಂಗಿ ಕಾಯಿಲೆ ಬಾರದಂತೆ ನೋಡಿಕೊಳ್ಳ ಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಹೀಟ್‌ವೇವ್‌ನಿಂದ ರಕ್ಷಿಸಿಕೊಳ್ಳಲು ಜಿಲ್ಲಾಡಳಿತದಿಂದ ಕಾರ್ಮಿಕರಿಗೆ ಸಲಹೆ

ಬೇಸಿಗೆಯ ಹಿನ್ನೆಲೆಯಲ್ಲಿ ಸೂರ್ಯನ ಶಾಖದಿಂದ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಹೀಟ್‌ವೇವ್ ಸ್ಟ್ರೋಕ್ (ಶಾಖದ ಹೊಡೆತ) ನಿಂದಾಗಿ ಹೊರಗೆ ದುಡಿಯುವ ಕಾರ್ಮಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದ್ದು, ಜಿಲ್ಲಾಡಳಿತ ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುಂಜಾಗ್ರತಾ ಕ್ರಮವಾಗಿ ಕೆಲವು ಸಲಹೆಗಳನ್ನು ನೀಡಿದೆ.

ದಿನದಲ್ಲಿ ಹೊರಗೆ ಕೆಲಸ ನಿರ್ವಹಿಸುವ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರು, ಬೀದಿ ಬದಿ ವ್ಯಾಪಾರಸ್ಥರು, ವಾಹನ ಚಾಲಕರು ಮತ್ತು ಇತರೆ ವರ್ಗದ ಎಲ್ಲಾ ಕೆಲಸಗಾರರ ಆರೋಗ್ಯವನ್ನು ಕಾಪಾಡುವ ಮತ್ತು ಸುರಕ್ಷತೆಯನ್ನು ಒದಗಿಸುವ ದೃಷ್ಟಿಯಿಂದ ಜಿಲ್ಲೆಯ ಎಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣದಾರ ಮತ್ತು ಇತರೆ ಉದ್ದಿಮೆಗಳ ಮಾಲಕರಿಗೆ ಮತ್ತು ಕಾರ್ಮಿಕರಿಗೆ ಈ ಕೆಳಕಂಡ ಸಲಹೆ-ಸೂಚನೆಗಳನ್ನು ನೀಡಿದ್ದು, ಮುಂದಿನ ದಿನಗಳಲ್ಲಿ ತಮ್ಮ ಸುರಕ್ಷತೆಯನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಮನವಿ ಮಾಡಲಾಗಿದೆ.

ಕೆಲಸದ ಸ್ಥಳದಲ್ಲಿ ಕಾರ್ಮಿಕರಿಗೆ ತಂಪಾದ ಕುಡಿಯುವ ನೀರು ಮತ್ತು ಎಲೆಕ್ಟ್ರೋಲೈಟ್ ಪೂರಕಗಳ ವ್ಯವಸ್ಥೆಯನ್ನು ಮಾಲಕರು ಮಾಡಬೇಕು. ಡಿ-ಹೈಡ್ರೇಟೆಡ್ ಆಗದಂತೆ ಕಾರ್ಮಿಕರು ಮತ್ತು ಎಲ್ಲರೂ ಪ್ರತಿ 20 ನಿಮಿಷಗಳಿಗೊಮ್ಮೆ ಅಥವಾ ಹೆಚ್ಚು ಭಾರಿ ನೀರನ್ನು ಕುಡಿಯಬೇಕು ಹಾಗೂ ಕೆಲಸದ ಮದ್ಯದಲ್ಲಿ ವಿಶ್ರಾಂತಿ ಪಡೆದು ಕೆಲಸ ಮಾಡಲು ಗಮನ ಹರಿಸಬೇಕು.

ಕಾರ್ಮಿಕರು ಶ್ರಮದಾಯಕ ಮತ್ತು ಹೊರಾಂಗಣ ಚಟುವಟಿಕೆಗಳನ್ನು ತಾಪಮಾನ ಕಡಿಮೆ ಇರುವ ಸಮಯದಲ್ಲಿ, ಅಂದರೆ ಬೆಳಗಿನ ಅಥವಾ ಸಂಜೆಯ ಸಮಯದಲ್ಲಿ ನಿರ್ವಹಿಸಬೇಕು. ಕಾರ್ಮಿಕರು ಅದಷ್ಟು ಬೆಳಗ್ಗೆ 11 ರಿಂದ ಸಂಜೆ 4ರವರೆಗೆ ನೇರ ಸೂರ್ಯನ ಬಿಸಿಲಿನಲ್ಲಿ ಕೆಲಸ ನಿರ್ವಹಿಸದಂತೆ ಮಾಲಕರು ಎಚ್ಚರ ವಹಿಸಬೇಕು. ಸಾಧ್ಯವಾದಲ್ಲಿ ಬೃಹತ್ ಕಟ್ಟಡ ಮತ್ತು ಇತರೆ ನಿರ್ಮಾಣದಾರರು ಕೆಲಸದ ಪಾಳಿಯನ್ನು ರಾತ್ರಿ ವೇಳೆ ಮಾಡಬಹುದಾಗಿದೆ.

ಹೆಚ್ಚಿನ ಬಿಸಿಲಿನ ತಾಪಮಾನವಿರುವ ಸಮಯದಲ್ಲಿ ಕಾರ್ಮಿಕರಿಗೆ ಕೆಲಸ ಮಾಡಲು ಅನುಕೂಲವಾಗುವಂತೆ ನೆರಳು ಇರುವ ಪ್ರದೇಶವನ್ನು ಮಾಲಕರು ಒದಗಿಸಬೇಕು ಅಥವಾ ನೌಕರರು ಮತ್ತು ಕಾರ್ಮಿಕರಿಗೆ ಕೆಲಸ ಸಮಯವನ್ನು ಕಾರ್ಮಿಕರೊಂದಿಗೆ ಸಮಾಲೋಚಿಸಿ ಮರು-ನಿಗದಿಪಡಿಸಿಕೊಳ್ಳಬೇಕು.

ಕೆಲಸದ ಸ್ಥಳದ ಬಳಿ ವಿಶ್ರಾಂತಿ ಪಡೆಯಲು ಗಾಳಿ, ಬೆಳಕು ಮತ್ತು ಕುಡಿಯುವ ನೀರಿನ ವ್ಯವಸ್ಥೆಯೊಂದಿಗೆ ತಾತ್ಕಾಲಿಕ ಶೆಡ್‌ ಗಳನ್ನು ಮಾಲಕರು ನಿರ್ಮಿಸಬೇಕು. ಕಾರ್ಮಿಕರಿಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಹೊರಡಿಸಿದ ಆರೋಗ್ಯ ಸಲಹೆಯನ್ನು ಅನುಸರಿಸಿ, ಕಾರ್ಮಿಕರ ನಿಯಮಿತ ಆರೋಗ್ಯ ತಪಾಸಣೆಯನ್ನು ಖಚಿತ ಪಡಿಸಿಕೊಳ್ಳಲು ಆರೋಗ್ಯ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಬೇಕು.

ಕೆಲಸದ ಸಮಯದಲ್ಲಿ ಕಾರ್ಮಿಕರು ಆದಷ್ಟು ಹತ್ತಿಯ ಮತ್ತು ಶ್ವೇತ ವರ್ಣದ ತುಂಬು ತೋಳಿನ ಅಂಗಿ/ಬಟ್ಟೆ, ಟೋಪಿ ಮತ್ತು ಕೂಲಿಂಗ್ ಗ್ಲಾಸ್ ಧರಿಸಬೇಕು. ಒಳಾಂಗಣದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸಂಬಂಧಿಸಿ ದಂತೆ ಕೊಠಡಿಯ ತಾಪಮಾನವನ್ನು ಕಡಿಮೆ ಮಾಡಲು ಮಾಲಕರು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು.

ಹೀಟ್ ಸ್ಟ್ರೋಕ್ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿಯನ್ನು ತಂಪಾದ ಜಾಗಕ್ಕೆ ಸ್ಥಳಾಂತರಿಸುವುದರೊಂದಿಗೆ ಶಾಖದ ಹೊಡೆತದಿಂದ ಬಳಲುತ್ತಿರುವ ವ್ಯಕ್ತಿಯು ಕನಿಷ್ಟ ಬಟ್ಟೆಯನ್ನು ಹೊಂದಿರುವಂತೆ ನೋಡಿಕೊಂಡು, ವ್ಯಕ್ತಿಗೆ, ತಣ್ಣೀರಿನಿಂದ ಸ್ಪಾಂಜ್ ಮಾಡಬೇಕು ಅಥವಾ ಐಸ್ ಪ್ಯಾಕ್‌ಗಳನ್ನು ಉಪಯೋಗಿಸಬೇಕು. ಹೀಟ್ ವೇವ್ ಸ್ಟ್ರೋಕ್‌ಗೆ ಒಳಗಾದ ವ್ಯಕ್ತಿಯಲ್ಲಿ ಯಾವುದೇ ಸುಧಾರಣೆ ಕಂಡುಬರದಿದ್ದರೆ, ತಕ್ಷಣ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲು ಕ್ರಮ ಕೈಗೊಂಡು ಸೂಕ್ತ ಚಿಕಿತ್ಸೆ ನೀಡುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆದ ಡಾ.ಕೆ. ವಿದ್ಯಾಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News