ಸಿಎನ್‌ಜಿ ಗ್ಯಾಸ್ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಸಚಿವರಿಗೆ ಮನವಿ

Update: 2024-05-04 15:11 GMT

ಉಡುಪಿ: ಜಿಲ್ಲೆಯ ಉಡುಪಿ, ಕುಂದಾಪುರ, ಬೈಂದೂರು ಇತ್ಯಾದಿ ಪ್ರದೇಶಗಳಲ್ಲಿ ಸಿಎನ್‌ಗ್ಯಾಸ್ ಕೊರತೆಯಿಂದಾಗಿ ಬಂಕ್‌ಗಳ ಮುಂದೆ ವಾಹನ ಗಳು ಸರತಿ ಸಾಲಿನಲ್ಲಿ ನಿಂತು ಚಾಲಕರು ಮತ್ತು ಮಾಲಕರು ಸಂಕಷ್ಟ ಪಡುತ್ತಿರುವ ಹಿನ್ನೆಲೆ ಯಲ್ಲಿ ಕೂಡಲೇ ಮಧ್ಯೆ ಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸುವಂತೆ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಸಂಪನ್ಮೂಲ ಸಚಿವ ಹಾರ್ದಿಕ್ ಸಿಂಗ್ ಪುರಿ ಅವರಿಗೆ ಪತ್ರ ಬರೆದು ಇಮೇಲ್ ಮೂಲಕ ಮನವಿ ಮಾಡಿದ್ದಾರೆ.

ಮನವಿಗೆ ಸ್ಪಂದಿಸಿರುವ ಕೇಂದ್ರ ಸಚಿವರು ಈ ಸಂಬಂಧ ಹೆಚ್ಚುವರಿ ಸಿಎನ್‌ಜಿ ಪೂರೈಸಲು ಒಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಜಿಲ್ಲೆಯಲ್ಲಿ ಸಿಎನ್‌ಜಿ ಪೂರೈಕೆ ಜವಾಬ್ದಾರಿ ಅದಾನಿ ಸಂಸ್ಥೆಯದಾಗಿದ್ದು, ತಾಂತ್ರಿಕ ತೊಂದರೆಯಿಂದ ಮತ್ತು ಹೆಚ್ಚುವರಿ ಬೇಡಿಕೆಯಿಂದಾಗಿ ಒಂದಷ್ಟು ಸಮಸ್ಯೆ ಆಗಿದೆ ಎಂದು ಸಂಸ್ಥೆ ಒಪ್ಪಿಕೊಂಡಿದೆ ಮತ್ತು ಸಮಸ್ಯೆಯನ್ನು ಕೂಡಲೇ ಬಗೆಹರಿಸುವುದಾಗಿ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಮಧ್ಯೆ ಅಗತ್ಯ ಬೇಡಿಕೆ ಪರಿಶೀಲಿಸಿ ಪ್ರಸ್ತಾಪನೆ ಸಲ್ಲಿಸಲು ಉಡುಪಿ ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಿ ಸೂಚನೆ ನೀಡಿದ್ದೇನೆ ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಅದಾನಿ ಸಂಸ್ಥೆಯ ಮೂಲಕ ಸಿಎನ್‌ಜಿ ಬಂಕ್ ನಿರ್ಮಿಸಲು ಈ ಸಂದರ್ಭದಲ್ಲಿ ಅವರು ಆಗ್ರಹಿಸಿದ್ದಾರೆ.

ಶಾಸಕ ಕೊಡ್ಗಿ ಆಗ್ರಹ: ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಉಡುಪಿ ಜಿಲ್ಲೆಗೆ ನಿರಂತರ ಸಿಎನ್‌ಜಿ ಪೂರೈಕೆಗೆ ಕ್ರಮ ವಹಿಸುವಂತೆ ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಪತ್ರ ಮೂಲಕ ಮನವಿ ಮಾಡಿದ್ದಾರೆ.

ಜಿಲ್ಲೆಯಲ್ಲಿ ಸಾವಿರಕ್ಕೂ ಮಿಕ್ಕಿ ಆಟೋಗಳು ಹಾಗೂ ಇತರ ವಾಹನಗಳು ಸಿಎನ್‌ಜಿ ಇಂಧನವನ್ನೇ ಅವಲಂಬಿಸಿದ್ದು, ಇಂಧನ ಕೊರತೆಯಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ದಿನೇ ದಿನೇ ಸಿಎನ್‌ಜಿ ಆಧರಿತ ವಾಹನಗಳ ಸಂಖ್ಯೆ ಗಣನೀಯ ವಾಗಿ ಹೆಚ್ಚಿದ್ದರೂ, ಸಿಎನ್‌ಜಿ ತುಂಬುವ ಬಂಕ್‌ಗಳ ಕೊರತೆಯಿಂದ ವಾಹನ ಮಾಲೀಕರು, ಆಟೋ ಚಾಲಕರು ಬಾಡಿಗೆ ಬಿಟ್ಟು ಬಂಕ್ ಗಳ ಮುಂದೆ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಎದುರಾಗಿದೆ. ಪೆಟ್ರೋಲಿಯಂ ಸಚಿವಾಲಯದ ಸಚಿವರಿಗೆ ಪತ್ರ ಬರೆಯಲಾಗಿದ್ದು ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News