ಪರಶುರಾಮನ ನಕಲಿ ಮೂರ್ತಿ ವಿವಾದ| ಶಿಲ್ಪಿ, ನಿರ್ಮಾಣ ಸಂಸ್ಥೆ ಬದಲಿಸಲು ಕಾಂಗ್ರೆಸ್ ಒತ್ತಾಯ

Update: 2024-05-04 16:02 GMT

ಉಡುಪಿ, ಮೇ 4: ಬೈಲೂರಿನ ಉಮಿಕ್ಕಲ್ ಬೆಟ್ಟದಲ್ಲಿ ನಿರ್ಮಾಣಗೊಂಡ ಪರಶುರಾಮ ಥೀಮ್ ಪಾರ್ಕ್ ಯೋಜನೆಯ ಕಾಮಗಾರಿಯಲ್ಲಿ ಭಾರೀ ಅವ್ಯವಹಾರ ನಡೆದಿದ್ದು, ಕಂಚಿನ ಪ್ರತಿಮೆಯ ಬದಲಿಗೆ ನಕಲಿ ಮೂರ್ತಿ ನಿರ್ಮಿಸಲಾಗಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಮುನಿಯಾಲು ಉದಯ ಕುಮಾರ್ ಶೆಟ್ಟಿ ಆರೋಪಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೈಲೂರಿನಲ್ಲಿ ಸುಸಜ್ಜಿತವಾದ ಥೀಮ್ ಪಾರ್ಕ್‌ನ ನಿರ್ಮಾಣವಾಗಬೇಕು. ಪರಶುರಾಮನ ಕಂಚಿನ ಪ್ರತಿಮೆ ಪ್ರತಿಷ್ಠಾಪನೆಗೊಳ್ಳಬೇಕು. ಆದರೆ ಇದಕ್ಕಾಗಿ ಈಗ ಮೂರ್ತಿಯ ನಿರ್ಮಾಣ ಗುತ್ತಿಗೆ ಪಡೆದಿರುವ ಶಿಲ್ಪಿ ಕೃಷ್ಣ ನಾಯಕ್ ಹಾಗೂ ಥೀಮ್ ಪಾರ್ಕ್ ನಿರ್ಮಾಣದ ಗುತ್ತಿಗೆ ಪಡೆದಿರುವ ನಿರ್ಮಿತಿ ಕೇಂದ್ರವನ್ನು ಬದಲಿಸಬೇಕು ಎಂದು ತಾವು ರಾಜ್ಯ ಸರಕಾರವನ್ನು ಒತ್ತಾಯಿ ಸುತ್ತೇವೆ. ರಾಜ್ಯದ ಅನೇಕ ಕಡೆಗಳಲ್ಲಿರುವ ಕೆಂಪೇಗೌಡ, ಶಿವಾಜಿ, ರಾಣಿ ಚೆನ್ನಮ್ಮ, ಮೈಸೂರು ಒಡೆಯರ್ ಮುಂತಾದವರ ಪ್ರತಿಮೆ ನಿರ್ಮಿಸಿದವರಿಂದ ಪರಶುರಾಮನ ಮೂರ್ತಿ ನಿರ್ಮಿಸಲಿ ಎಂದವರು ಒತ್ತಾಯಿಸಿದರು.

2023ರ ಜನವರಿ ತಿಂಗಳಲ್ಲಿ ಅದ್ದೂರಿಯಾಗಿ ತರಾತುರಿಯಿಂದ ಉದ್ಘಾಟನೆಗೊಂಡ ಪರಶುರಾಮ ಪಾರ್ಕ್‌ನಲ್ಲಿ ಪ್ರತಿಷ್ಠಾಪಿಸಿದ್ದ ಪರಶುರಾಮ ಮೂರ್ತಿಯ ಬಗ್ಗೆ ಕಾರ್ಕಳದಲ್ಲಿ ಕಾಂಗ್ರೆಸ್ ಪಕ್ಷ ಸೇರಿದಂತೆ ಹಲವರು ತಕರಾರು ಎತ್ತಿದ್ದರು. ಪ್ರತಿಮೆ ಕಂಚಿನದ್ದಲ್ಲ, ಇಡೀ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಪ್ರತಿಭಟನೆಗಳೂ ನಡೆದಿದ್ದವು.

ಕಾಮಗಾರಿಯ ತಾಂತ್ರಿಕ ಲೋಪದೋಷದಿಂದ ಪ್ರತಿಮೆಯ ಅರ್ಧಭಾಗ ವನ್ನು ಕೆಲವೇ ಸಮಯದಲ್ಲಿ ತೆಗೆಯಲಾಗಿತ್ತು. ಇದೀಗ ಉಳಿದ ಕಂಚಿನ ಅರ್ಧ ಭಾಗವನ್ನು ತೆರವು ಮಾಡುವ ಪ್ರಯತ್ನ ನಡೆದಿದೆ. ಈ ಮೂಲಕ ಹಗರಣಕ್ಕೆ ಸಾಕ್ಷಿಯಾಗಿದ್ದ ಕೊನೆಯ ಸಾಕ್ಷ್ಯವನ್ನು ನಾಶ ಮಾಡುವ ಪ್ರಯತ್ನ ಇದಾಗಿದೆ ಎಂದು ಮುನಿಯಾಲು ಉದಯ ಶೆಟ್ಟಿ ಆರೋಪಿಸಿದರು.

ಉಮಿಕ್ಕಲ್ ಬೆಟ್ಟದಲ್ಲಿ ಸುಸಜ್ಜಿತವಾದ ಥೀಮ್ ಪಾರ್ಕ್ ನಿರ್ಮಾಣಗೊ ಳ್ಳಬೇಕು. ಈ ಮೂಲಕ ಅದನ್ನೊಂದು ಪ್ರವಾಸೋದ್ಯಮ ಕೇಂದ್ರವಾಗಿ ಬೆಳೆಸಬೇಕು. ಸಾರ್ವಜನಿಕರು ಇದರ ಲಾಭ ಪಡೆಯಬೇಕು. ಕಾರ್ಕಳದ ಶಾಸಕರು ಪರಶುರಾಮನ ನಕಲಿ ಮೂರ್ತಿ ನಿರ್ಮಿಸಿ ಜನರ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ. ಅದಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಪರಶುರಾಮನ ಕುರಿತಂತೆ ಜನರಲ್ಲಿ ಧಾರ್ಮಿಕ ಭಾವನೆ ಇದೆ. ಕೊಡಲಿ ಹಿಡಿದ ಪರಶುರಾಮನ ಮೂರ್ತಿಯನ್ನು ಪಶ್ಚಿಮಾಭಿಮುಖವಾಗಿ ಸ್ಥಾಪಿಸಬೇಕು. ಈಗಿರುವಂತೆ ಪೂರ್ವಾಭಿಮುಖವಾಗಿ ಅಲ್ಲ ಎಂದರು.

ಕಾರ್ಕಳದಲ್ಲಿ ಸುನಿಲ್ ಕುಮಾರ್ ಅವರ ಸರಕಾರ ಅಧಿಕಾರದಲ್ಲಿದೆ ಎಂದು ಹೇಳಿದ ಮುನಿಯಾಲು, ಜನರಲ್ಲಿ ಕಂಚನ್ನು ಬೇಡಿಯಾದರೂ ಮೂರ್ತಿ ರಚಿಸಿ ಪ್ರತಿಷ್ಠಾಸುವುದಾಗಿ ಸುನಿಲ್ ಹೇಳಿದ್ದಾರೆ. ಹಾಗಾದರೂ ಮಾಡಿ ಮೂರ್ತಿ ನಿರ್ಮಿಸಿ ಪುಣ್ಯವನ್ನು ನೀವೆ ಇಟ್ಟುಕೊಳ್ಳಿ ಎಂದು ವ್ಯಂಗ್ಯವಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕರಾದ ರಮೇಶ್ ಕಾಂಚನ್ ಹಾಗೂ ಕೃಷ್ಣಮೂರ್ತಿ ಆಚಾರ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News