ಕನ್ನಡ ಭಾಷಾ ಪುನಶ್ಚೇತನಕ್ಕೆ ಕಾಯಕಲ್ಪ ಅಗತ್ಯ: ಅಶೋಕ ಆಚಾರ್ಯ

Update: 2024-05-05 14:59 GMT

ಶಿರ್ವ: ಹಿಂದಿನ ಹಳೆಗನ್ನಡ, ಗಮಕ ಪೂರಕ ಸಾಹಿತ್ಯ ಪರಂಪರೆ ಉಳಿಸಿ ಬೆಳೆಸಬೇಕಾಗಿದೆ. ಅಧ್ಯಯನಶೀಲತೆ ಕಡಿಮೆಯಾಗುತ್ತಿದೆ. ಆಂಗ್ಲ ಮಾಧ್ಯಮದ ಪ್ರಭಾವದಿಂದ ಕನ್ನಡ ಭಾಷಾಭಿಮಾನ ಕುಂಠಿತಗೊಳ್ಳುತ್ತಿದೆ. ಕನ್ನಡ ಭಾಷಾ ಪುನಶ್ಚೇತನಕ್ಕೆ ಕಾಯಕಲ್ಪಅಗತ್ಯ ಎಂದು ಹಿರಿಯ ವಿದ್ವಾಂಸ ವೇದಮೂರ್ತಿ ಅಶೋಕ ಆಚಾರ್ಯ ಕಲ್ಯಾ ಹೇಳಿದ್ದಾರೆ.

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ರವಿವಾರ ಕಾಪು ರೋಟರಿ ಶತಾಬ್ದಿ ವೇದಿಕೆ ಯಲ್ಲಿ ಆಯೋಜಿಸಲಾದ ಕಸಾಪ 110ನೇ ಸಂಸ್ಥಾಪನಾ ದಿನಾಚರಣೆ ಕಾರ್ಯ ಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಒಂದೆರಡು ಪೀಳಿಗೆಗಳು ಹಾಳಾದರೂ ಇನ್ನೂ ಕನ್ನಡ ಭಾಷಾ ಸಾಹಿತ್ಯದ ಪುನಶ್ಚೇತನ ಮಾಡಲು ಸಾಧ್ಯವಿದೆ. ಪ್ರತಿಭಾವಂತರು ಎಲ್ಲಾ ಕಾಲದಲ್ಲೂ ಇದ್ದೇ ಇರುತ್ತಾರೆ. ಬರೆಯುವ ಪೀಳಿಗೆಯನ್ನು ತಯಾರು ಮಾಡಬೇಕಾಗಿದೆ. ಪ್ರಾಕೃತಿಕ ಅನುಭವ, ಲೋಕಜ್ಞಾನ, ಅಧ್ಯಯನ ಜ್ಞಾನ,ಭಾಷಾ ಜ್ಞಾನ ಬೆಳೆದಾಗ ಸಾಹಿತ್ಯ ಸೃಷ್ಟಿಗೆ ಬೇಕಾದ ಮನೋಸ್ಥಿತಿ ನಿರ್ಮಾಣ ಆಗುತ್ತದೆ. ಸಾಹಿತ್ಯ ಸೃಷ್ಠಿಗೆ ಬೇಕಾದ ಮನೋಸ್ಥಿತಿ ನಿರ್ಮಾಣ ಆಗಬೇಕಾಗಿದೆ. ಶಿಕ್ಷಣದ ವ್ಯವಸ್ಥೆ, ಸಾಮಾಜಿಕ ವ್ಯವಸ್ಥೆಯೊಂದಿಗೆ ಸೇರಿಕೊಳ್ಳಬೇಕು. ಮಾತೃಭಾಷೆ ಉಳಿಸಬೇಕು ಎಂದರು.

ಕಸಾಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ 110 ವರ್ಷಗಳ ಹಿಂದೆ ಹಿರಿಯ ವಿದ್ವಾಂಸರು, ಚಿಂತಕರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡ ಸಂಘಟನೆ ಇಂದು ರಾಷ್ಟ್ರೀಯ ಮಟ್ಟದಲ್ಲಿ ಅಲ್ಲದೆ ದೇಶ ವಿದೇಶಗಳಲ್ಲಿರುವ ಕನ್ನಡ ಸಂಘಟನೆಗಳನ್ನು ಸಾಹಿತ್ಯ ಪರಿಷತ್‌ನ ವ್ಯಾಪ್ತಿಗೆ ತರುವ ಪ್ರಯತ್ನ ನಡೆಯುತ್ತಿದೆ. ಕನ್ನಡ ನಾಡು, ನುಡಿ ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ರೂಪಿಸಿ ಅನುಷ್ಟಾನ ಮಾಡುತ್ತಿದೆ ಎಂದರು.

ಕಸಾಪ ಉಡುಪಿ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಕಾಪು ರೋಟರಿ ಕ್ಲಬ್ ಅಧ್ಯಕ್ಷ ರಾಜೇಂದ್ರನಾಥ್ ಮಾತನಾಡಿದರು. ಕಸಾಪ ಸಭಾಭವನ ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷ ಕಟ್ಟಿಂಗೇರಿ ದೇವದಾಸ್ ಹೆಬ್ಬಾರ್, ಸಂಘಟನಾ ಕಾರ್ಯದರ್ಶಿ ದೀಪಕ್ ಬೀರ ಉಪಸ್ಥಿತರಿದ್ದರು. ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಸದಸ್ಯ ಕೃಷ್ಣಕುಮಾರ್ ರಾವ್ ಮಟ್ಟು ನಿರೂಪಿಸಿದರು. ಕೋಶಾಧಿಕಾರಿ ವಿದ್ಯಾಧರ್ ಪುರಾಣಿಕ್ ವಂದಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸಮಿತಿ ಸದಸ್ಯರಾದ ನರಸಿಂಹಮೂರ್ತಿ, ಕಸಾಪ ಹಿರಿಯ ಸದಸ್ಯರುಗಳಾದ ಪ್ರಜ್ಞಾ ಮಾರ್ಪಳ್ಳಿ, ಮಧುಕರ್ ಎಸ್,ಕಲ್ಯಾ, ಸಂಘಟನಾ ಕಾರ್ಯದರ್ಶಿ ಕೆ.ಆರ್.ಪಾಟ್ಕರ್, ದೇವದಾಸ ಪಾಟ್ಕರ್, ಸತ್ಯ ಸಾಯಿ ಪ್ರಸಾದ್, ಡಿ.ಆರ್.ನೊರೋನ್ಹಾ, ಗ್ರೆಟ್ಟಾ ಮೋರಾಸ್, ಸುಧಾಕರ ಶೆಣೈ, ಅಬ್ಬಾಸ್ ಎಂ.ಎಸ್.ಕಣ್ಣಂಗಾರ್, ವೇಣುಕೃಷ್ಣ, ಶಿವಾನಂದ ಕಾಮತ್ ಶಿರ್ವ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News