ಸಾಕ್ಷ್ಯಚಿತ್ರಗಳಿಂದ ವಾಸ್ತವತೆಗೆ ಕಲಾತ್ಮಕತೆಯ ಸ್ಪರ್ಶ: ಪಿ.ಎನ್.ರಾಮಚಂದ್ರ

Update: 2024-05-05 15:08 GMT

ಮಣಿಪಾಲ, ಮೇ 5: ಸಾಕ್ಷ್ಯಚಿತ್ರಗಳು ವಾಸ್ತವವನ್ನು ಇರುವ ಹಾಗೆ ಹಿಡಿಯಲು ಯತ್ನಿಸುತ್ತವೆ. ವಾಸ್ತವವಾದ ಎನ್ನುವುದು ವಾಸ್ತವತೆಗೆ ಕಲಾತ್ಮಕತೆಯ ಸ್ಪರ್ಶ ನೀಡುವ ಪ್ರಯತ್ನ ಮಾಡುತ್ತವೆ ಎಂದು ಗುಜರಾತಿನ ಕರ್ಣಾವತಿ ವಿಶ್ವವಿದ್ಯಾಲಯದ ಫಿಲ್ಮ್ ಸ್ಕೂಲಿನ ಮುಖ್ಯಸ್ಥ ಹಾಗೂ ಚಲನಚಿತ್ರ ನಿರ್ದೇಶಕ ಪಿ.ಎನ್.ರಾಮಚಂದ್ರ ಹೇಳಿದ್ದಾರೆ.

ಮಣಿಪಾಲ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆಂಡ್ ಸೈನ್ಸಸ್(ಜಿಸಿಪಿಎಎಸ್)ನ ಆಶ್ರಯ ದಲ್ಲಿ ತಮ್ಮ ‘ಅನ್ ಬಿಯರೆಬಲ್ ಬಿಯಿಂಗ್ ಆಫ್ ಲೈಟ್‌ನೆಸ್’ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಿದ ಬಳಿಕ ಅವರು ವಿದ್ಯಾರ್ಥಿಗಳೊಂದಿಗೆ ಮಾತನಾಡುತಿದ್ದರು.

ಸಾಕ್ಷ್ಯಚಿತ್ರಗಳು ಹಸಿ ವಾಸ್ತವವನ್ನು ಸೆರೆಹಿಡಿಯುತ್ತಲೇ, ಒಂದು ವಾಸ್ತವವಾದಿ ಕಲಾತ್ಮಕತೆಯನ್ನು ಅನುಸರಿಸುತ್ತವೆ. ಕೆಲವು ಸಂದರ್ಭಗಳಲ್ಲಿ ಈ ಕಲಾತ್ಮಕತೆ ಗಿಂತಲೂ ಅವುಗಳ ವಿಷಯ ಹೆಚ್ಚಿನ ಪ್ರಾಧಾನ್ಯ ಪಡೆಯುತ್ತವೆ ಎಂದು ಅವರು ಅಭಿಪ್ರಾಯ ಪಟ್ಟರು.

ಬಹುಚರ್ಚಿತ ಸಾಕ್ಷ್ಯಚಿತ್ರವಾದ ‘ಅನ್ ಬಿಯರೆಬಲ್ ಬಿಯಿಂಗ್ ಆಫ್ ಲೈಟ್‌ನೆಸ್’ ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿ ಯಾಗಿದ್ದ ರೋಹಿತ್ ವೇಮುಲಾ ಆತ್ಮಹತ್ಯೆಯ ಸುತ್ತಮುತ್ತಲಿನ ಘಟನೆಗಳನ್ನು ಒಳಗೊಂಡಿದೆ. ಆ ಸಂದರ್ಭದ ಅಪಾರ ವಿಷಾದವನ್ನು, ಅಲ್ಲಿ ನಡೆದ ಘಟನೆಗಳು, ಪತ್ರಿಕಾ ವರದಿ ಹಾಗೂ ವಿದ್ಯಾರ್ಥಿಯ ಕೊನೆಯ ಪತ್ರ ಇವುಗಳನ್ನು ಆಧರಿಸಿ ಸೆರೆಹಿಡಿಯಲು ಯತ್ನಿಸಿದೆ ಎಂದರು.

ವಿದ್ಯಾರ್ಥಿಗಳು ಸಾಕ್ಷ್ಯಚಿತ್ರದ ಮೂಲಕ ತೋರಿಸಲ್ಪಡುವ ಸಾಮಾಜಿಕ ತಾರತಮ್ಯ, ದೃಶ್ಯ ರೂಪಕಗಳು, ಸಂಗೀತ, ಕಥನದ ಆಕೃತಿ, ಫೈಜ್ ಅಹಮದ್ ಫೈಜ್ ಕವಿತೆ ಇವೆಲ್ಲವನ್ನೂ ಚರ್ಚಿಸಿದರು. ಜಿಸಿಪಿಎಎಸ್‌ನ ಮುಖ್ಯಸ್ಥ ಪ್ರೊ. ವರದೇಶ್ ಹಿರೇಗಂಗೆ, ಪ್ರೊ.ನೇಮಿರಾಜ್ ಶೆಟ್ಟಿ, ಡಾ.ಜನಾರ್ದನ್ ಹಾವಂಜೆ, ಡಾ.ಭ್ರಮರಿ ಶಿವಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News