ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಶಾಂತಿಯುತ, ಬಿರುಸಿನ ಮತದಾನ

Update: 2024-05-07 16:21 GMT

ಬೈಂದೂರು, ಮೇ7: ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿರುವ ಉಡುಪಿ ಜಿಲ್ಲೆ ಬೈಂದೂರು ವಿಧಾನಸಭಾ ಕ್ಷೇತ್ರದ ಮತದಾನ ಇಂದು 246 ಮತಗಟ್ಟೆಗಳಲ್ಲಿ ಶಾಂತಿಯುತವಾಗಿ ನಡೆದಿದ್ದು, ಒಟ್ಟಾರೆಯಾಗಿ ಬಿರುಸಿನ ಮತದಾನ ಕಂಡುಬಂದಿದೆ.

ನಗರ ಪ್ರದೇಶ ಹಾಗೂ ರಾಷ್ಟ್ರೀಯ ಹೆದ್ದಾರಿಯ ಆಸುಪಾಸಿನಲ್ಲಿ ಬೆಳಗ್ಗೆ ಮತದಾನ ಬಿರುಸಾಗಿ ಪ್ರಾರಂಭಗೊಂಡಿತಾದರೂ ಬಿಸಿಲಿನ ಕಾವು ಹೆಚ್ಚಾದಂತೆ 11ಗಂಟೆಯ ಬಳಿಕ ತೀರಾ ಮಂದಗತಿಯಲ್ಲಿ ಸಾಗಿತ್ತು. ಆದರೆ ಕ್ಷೇತ್ರದ ಒಳಗಿನ ಗ್ರಾಮೀಣ ಭಾಗದಲ್ಲಿ, ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದಲ್ಲಿ ಹಾಗೂ ಹಿಂದಿನ ನಕ್ಸಲ್ ಬಾಧಿತ ಪ್ರದೇಶಗಳಲ್ಲಿ ಮಾತ್ರ ಜನರು ಉತ್ಸಾಹದಿಂದಲೇ ಮತಗಟ್ಟೆಗೆ ಬಂದು ತಮ್ಮ ಮತ ಚಲಾಯಿಸುತಿದ್ದ ದೃಶ್ಯ ಕಂಡುಬಂತು. ಅದರಲ್ಲೂ ಮಹಿಳೆಯರು ಗ್ರಾಮೀಣ ಭಾಗದಲ್ಲಿ ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿರುವುದು ಎಲ್ಲೆಲ್ಲೂ ಕಂಡುಬಂತು.

ಈ ಬಾರಿಯ ಚುನಾವಣೆಯಲ್ಲಿ ಮತಯಂತ್ರದ ತೊಂದರೆ ಎಲ್ಲೂ ಕಂಡು ಬಂದಿಲ್ಲ. ಹೆಚ್ಚಾಗಿ ಪ್ರಾರಂಭದಲ್ಲಿ, ಕೆಲವೊಮ್ಮೆ ನಡುವಿನಲ್ಲಿ ಕೈಕೊಟ್ಟು ಕೆಟ್ಟು ನಿಲ್ಲುವ ಮತಯಂತ್ರಗಳು ಈ ಬಾರಿ ಯಾವುದೇ ಅಡಚಣೆ ಇಲ್ಲದೇ ಮತದಾನ ಸುಗಮ ವಾಗಿ ನಡೆಯಲು ಸಾಧ್ಯವಾಗಿದೆ ಎಂದು ಮತಗಟ್ಟೆಯ ಚುನಾವಣಾಧಿಕಾರಿಯೊಬ್ಬರು ನುಡಿದರು.

ಬೆಳಗ್ಗೆ 9ಗಂಟೆಯ ವೇಳೆಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಶೇ.11.45ರಷ್ಟು ಮತದಾನವಾದರೆ ಅದೇ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅತ್ಯಧಿಕ ಶೇ.13.66ರಷ್ಟು ಮತ ಚಲಾವಣೆಗೊಂಡಿತ್ತು. ಬೈಂದೂರು ಕ್ಷೇತ್ರದಲ್ಲಿ 11ಗಂಟೆಗೆ ಶೇ.31.22ರಷ್ಟು, ಅಪರಾಹ್ನ 1 ಗಂಟೆಯ ವೇಳೆಗೆ ಶೇ.48.09, 3:00ಗಂಟೆಗೆ ಶೇ.58.41ರಷ್ಟು ಹಾಗೂ ಸಂಜೆ 5 ಗಂಟೆಗೆ ಶೇ.72.47ರಷ್ಟು ಮಂದಿ ತಮ್ಮ ಮತ ಚಲಾಯಿಸಿದ್ದರು.

ತಿಂಗಳಿನಿಂದ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಉಷ್ಣತೆಯ ಪ್ರಮಾಣ, ಬಿಸಿಲಿನ ಪ್ರಖರತೆ ಹಾಗೂ ಅಪರಾಹ್ನ 12ರ ಬಳಿಕ ಬೀಸುತ್ತಿರುವ ಬಿಸಿಗಾಳಿಯ ಕಾರಣ, ಜನತೆ ಮತದಾನ ಪ್ರಾರಂಭಗೊಳ್ಳುತ್ತಿದಂತೆ ವಯೋಮಾನದ ಪರಿವೆ ಇಲ್ಲದೇ ಮತಗಟ್ಟೆಯತ್ತ ಧಾವಿಸಿ ತಮ್ಮ ಮತ ಚಲಾಯಿಸಲು ಉತ್ಸಾಹ ತೋರಿದರು. ಹೀಗಾಗಿ ಬೆಳಗ್ಗೆ 7 ಗಂಟೆಯಿಂದಲೇ ಮತಗಟ್ಟೆಗಳ ಮುಂದೆ ಮತದಾರರ ಉದ್ದನೆಯ ಸರದಿ ಸಾಲು ಕಂಡುಬಂತು. ಯುವ ಮತದಾರರನ್ನು ಹೊರತು ಪಡಿಸಿ ಮಹಿಳೆಯರು, ಹಿರಿಯ ನಾಗರಿಕರು ಹಾಗೂ ಮಧ್ಯವಯಸ್ಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತ ಚಲಾಯಿಸಿದರು.

ಹೆಚ್ಚಿನೆಲ್ಲಾ ಮತಗಟ್ಟೆಗಳಲ್ಲಿ ವೀಲ್‌ಚೇರ್ ಸೇರಿದಂತೆ ಸುಗಮ ಮತದಾನಕ್ಕೆ ಎಲ್ಲಾ ವ್ಯವಸ್ಥೆ ಮಾಡಲಾಗಿತ್ತು. ಮರವಂತೆಯ ಕರಾವಳಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮತಗಟ್ಟೆಗೆ ಮರವಂತೆಯ ಛಾಯಾದೇವಿ ವೀಲ್‌ಚೇರ್ ನಲ್ಲಿ ಬಂದು ಮತ ಚಲಾಯಿಸಿದರು. ದಾರಿ ಸರಿಯಾಗಿಲ್ಲದ ಕಾರಣ ಹಾಗೂ ಒಳಬರುವಲ್ಲಿ ಜಲ್ಲಿ ಕಲ್ಲು ಹಾಕಿದ್ದರಿಂದ ಬರಲು ತುಂಬಾ ತ್ರಾಸವಾಯಿತು ಎಂದವರು ದೂರಿದರು. ಇಲ್ಲಿ ಹಿರಿಯ ನಾಗರಿಕರು ಅನ್ಯರ ನೆರವಿನಿಂದ ಮತದಾನ ಮಾಡುತ್ತಿರುವುದು ಕಂಡುಬಂತು.

ಬೈಂದೂರು ಪದವಿಪೂರ್ವ ಕಾಲೇಜಿನ ಎರಡು ಮತಗಟ್ಟೆಗಳಲ್ಲಿ ಜನರು ಆರಾಮವಾಗಿ ಬಂದು ಮತ ಹಾಕಿ ಹೋಗುತಿದ್ದರು. ಸರದಿ ಸಾಲು ಇಲ್ಲದ ಕಾರಣ ಜನ ಬಂದಂತೆ ಮತದಾನ ಮಾಡಿ ನಿರ್ಗಮಿಸುತಿದ್ದರು. ಇದು ಕ್ಷೇತ್ರದ ಮಸ್ಟರಿಂಗ್ ಹಾಗೂ ಡಿಮಸ್ಚರಿಂಗ್ ಕೇಂದ್ರವೂ ಆಗಿದ್ದರಿಂದ ಹೆಚ್ಚುವರಿ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ಎಪಿಆರ್‌ಓಗಳು ತುರ್ತು ಕರೆಯ ನಿರೀಕ್ಷೆಯಲ್ಲಿ ಹೊರಗೆ ಕುಳಿತಿದ್ದರು.

ಎಳಜಿತ್‌ನಲ್ಲಿ ಬಿರುಸಿನ ಮತದಾನ: ಗ್ರಾಮೀಣ ಭಾಗವಾದ ಎಳಜಿತ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎರಡು ಮತಗಟ್ಟೆಗಳಲ್ಲಿ ಅಪರಾಹ್ನ 12 ಗಂಟೆ ಸುಮಾರಿಗೆ ಶೇ.48ರಷ್ಟು ಮತದಾನವಾಗಿತ್ತು. ಒಂದರಲ್ಲಿ 1214 ಮತದಾರರ ಪೈಕಿ 587 ಮಂದಿ ಹಾಗೂ ಇನ್ನೊಂದರಲ್ಲಿ 1266ರ ಪೈಕಿ ಅರ್ಧದಷ್ಟು ಮಂದಿ ಅದಾಗಲೇ ಮತ ಚಲಾಯಿಸಿದ್ದರು.

ವಿಕಲಚೇತನರು, ಹಿರಿಯ ನಾಗರಿಕರಿಂದ ಮತದಾನ: ಬೈಂದೂರು ಕ್ಷೇತ್ರದ ಹಲವು ಮತಗಟ್ಟೆಗಳಲ್ಲಿ ಭಾರೀ ಸಂಖ್ಯೆಯಲ್ಲಿ 85+ ವಯೋಮಾನದ ಹಿರಿಯ ನಾಗರಿಕರು ಹಾಗೂ ವಿಕಲಚೇತನರು ಮತದಾನ ಮಾಡಿರುವುದು ಕಂಡುಬಂತು. ಅರಿಶಿರೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಒಂದು ಮತಗಟ್ಟೆಯಲ್ಲಿ ಬೆಳಗಿನ ಹೊತ್ತಿನಲ್ಲಿ 7 ಮಂದಿ ಹಿರಿಯ ನಾಗರಿಕರು ನಡೆದು ಬಂದು ಮತ ಚಲಾಯಿಸಿದ್ದರೆ, 12 ಮಂದಿ ವಿಕಲಚೇತನರು ಮತ ಹಾಕಿರುವುದನ್ನು ಅಲ್ಲಿನ ಚುನಾವಣಾಧಿಕಾರಿ ಹೆಮ್ಮೆಯಿಂದ ಹೇಳಿಕೊಂಡರು.

ಅದೇ ಶಾಲೆಯ ಇನ್ನೊಂದು ಮತಗಟ್ಟೆಯಲ್ಲೂ ನಾಲ್ವರು ಹಿರಿಯ ನಾಗರಿಕರು ಹಾಗೂ ಎಂಟು ಮಂದಿ ವಿಕಲಚೇತನರು ಬಂದು ಮತ ಚಲಾಯಿಸಿದ್ದರು. ಇಲ್ಲಿ ಅವರನ್ನು ಕರೆತರಲೆಂದೇ ಜಿಲ್ಲಾಡಳಿತದ ವತಿಯಿಂದ ವಿಶೇಷ ವಾಹನದ ವ್ಯವಸ್ಥೆ ಮಾಡಲಾಗಿತ್ತು. ಕೊಲ್ಲೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲೂ ಮೂವರು ಹಿರಿಯ ನಾಗರಿಕರು ಬೆಳಗ್ಗೆಯೇ ಮತ ಹಾಕಿದ್ದರು.

ಕೊನೆಗೂ ಮತ ಹಾಕಿದ ಶೇಷ ನಾಯ್ಕ


ತನ್ನ 76 ವರ್ಷಗಳ ಜೀವನದಲ್ಲಿ ಯಾವುದೇ ಚುನಾವಣೆಯಲ್ಲಿ ತಪ್ಪಿಸಿಕೊಳ್ಳದ ಮತದಾನವನ್ನು ಮಾಡಲು ನಾಲ್ಕು ಕಿ.ಮೀ. ದೂರದಿಂದ ಉತ್ಸಾಹದಿಂದಲೇ ಗೋಳಿಹೊಳೆ ಎಳಜಿತ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಗೆ ಅಧಿಕಾರಿಗಳು ನೀಡಿದ ‘ಸ್ಲೀಪ್’ ಹಿಡಿದು ಬಂದ ಹುಲ್ಕಡ್ಕೆ ದುರ್ಗಾಪರಮೇಶ್ವರಿ ದೇವಸ್ಥಾನ ಬಳಿಯ ನಿವಾಸಿ ಶೇಷ ನಾಯ್ಕರಿಗೆ ಈ ಬಾರಿ ಅಚ್ಚರಿ ಕಾದಿತ್ತು.

ಕೇವಲ ‘ಸ್ಲೀಪ್’ನ್ನು ನೋಡಿ ಮತ ಹಾಕಲು ಮತಗಟ್ಟೆ ಅಧಿಕಾರಿ ಈ ಬಾರಿ ಅವರಿಗೆ ಅವಕಾಶ ನೀಡಲಿಲ್ಲ. ನೀವು ಗುರುತುಪತ್ರ ಅಥವಾ ಆಧಾರ್ ಕಾರ್ಡ್ ತರಬೇಕು ಎಂದವರು ತಾಕೀತು ಮಾಡಿದರು. ಕಳೆದ ಬಾರಿಯೂ ನಾನು ಸ್ಲಿಪ್ ತೋರಿಸಿಯೇ ಮತ ಹಾಕಿದ್ದಾಗಿ ಅವರು ವಾದಿಸಿದರೂ ಯಾವುದೇ ಫಲ ನೀಡಲಿಲ್ಲ.

ಈ ರಣ ಬಿಸಿಲಿನಲ್ಲಿ ನಾಲ್ಕು ಕಿ.ಮೀ. ದೂರ ನಡೆದು ಹೋಗಿ ಬರುವುದು 76 ವರ್ಷ ಪ್ರಾಯದ ನನಗೆ ಸಾಧ್ಯವಿಲ್ಲ. ಹೀಗಾದರೆ ನನಗೆ ಈ ಬಾರಿ ಮತಹಾಕಲು ಸಾಧ್ಯವಾಗುವುದಿಲ್ಲ ಎಂದು ಅವರು ಸ್ಥಳಕ್ಕೆ ಭೇಟಿ ನೀಡಿದ ಪತ್ರಕರ್ತರ ಬಳಿ ನಿರಾಶೆಯಿಂದ ಹೇಳಿಕೊಂಡರು. ಪೋಟೊ ಸಹಿತ ಇರುವ ಸ್ಲಿಪ್‌ನಲ್ಲಿ ಅವರ ಎಲ್ಲಾ ಮಾಹಿತಿಗಳು ಸರಿಯಾಗಿದ್ದವು. ಕೊನೆಗೆ ಪತ್ರಕರ್ತರು ಮತಗಟ್ಟೆ ಅಧಿಕಾರಿ ಬಳಿ ಮಾತನಾಡಿದ್ದು, ಅಲ್ಲಿದ್ದ ಬಿಎಲ್‌ಓ ರಂಗ ಮರಾಠೆ ಅವರು ಶೇಷ ನಾಯ್ಕರ ಗುರುತನ್ನು ಖಚಿತ ಪಡಿಸಿದ ಬಳಿಕ ಅವರಿಗೆ ಮತ ಹಾಕಲು ಅವಕಾಶ ನೀಡಲಾಯಿತು.

ಮತದಾನ ಮಾಡಿ ಹೊರಬಂದ ಶೇಷ ನಾಯ್ಕ ಖುಷಿಯಿಂದ ‘ಅಬ್ಬಾ ಕೊನೆಗೂ ನಾನು ಅಷ್ಟು ಕಾಲದಿಂದ ಹಾಕುತ್ತಾ ಬಂದ ಚಿಹ್ನೆಗೆ ಮತ್ತೊಮ್ಮೆ ಓಟು ಹಾಕಿ ಬಂದೆ’ ಎಂದು ಬಾಯ್ತುಂಬಾ ನಗುತ್ತಾ ಕೈ ಮೇಲೆತ್ತಿದರು.









Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News