ಸಿಎನ್‌ಜಿ ಅನಿಲ ಸಮಸ್ಯೆ ಪರಿಹಾರಕ್ಕೆ ನೂತನ ಸ್ಥಾವರ ನಿರ್ಮಾಣ; ಅದಾನಿ ಸಂಸ್ಥೆ ಭರವಸೆ: ಕೋಟ ಶ್ರೀನಿವಾಸ ಪೂಜಾರಿ

Update: 2024-05-08 15:46 GMT

ಉಡುಪಿ, ಮೇ 8: ಜಿಲ್ಲೆಯ ಉಡುಪಿ, ಕುಂದಾಪುರ, ಬೈಂದೂರು ಸೇರಿದಂತೆ ಜಿಲ್ಲೆಯಾದ್ಯಂತ ಇತ್ತೀಚಿನ ದಿನಗಳಲ್ಲಿ ಕಂಡು ಬಂದಿರುವ ಸಿಎನ್‌ಜಿ ಅನಿಲದ ಕೊರತೆಯ ಕುರಿತಂತೆ ಉತ್ತರಿಸಿರುವ ಅದಾನಿ ಟೋಟೆಲ್ ಗ್ಯಾಸ್ ಲಿಮಿಟೆಡ್ (ಎಟಿಜಿಎಲ್), ಜಿಲ್ಲೆಯ ಇನ್ನೂ ಮೂರು ಕಡೆಗಳಲ್ಲಿ ಸಿಎನ್‌ಜಿ ಸ್ಥಾವರ ನಿರ್ಮಿಸಲು ಕ್ರಮ ಕೈಗೊಂಡಿದ್ದು, ನಿರಂತರ ಅನಿಲ ಪೂರೈಕೆಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದೆ ಎಂದು ವಿಧಾನಪರಿಷತ್‌ನಲ್ಲಿ ವಿಪಕ್ಷದ ನಾಯಕರಾಗಿರುವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಉಡುಪಿ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಕಂಡು ಬಂದಿರುವ ನ್ಯಾಚುಲರ್ ಗ್ಯಾಸ್ (ಸಿಎನ್‌ಜಿ) ಅನಿಲ ಪೂರೈಕೆಯ ಕೊರತೆಯ ಬಗ್ಗೆ ಕೋಟ ಶ್ರೀನಿವಾಸ ಪೂಜಾರಿ ಅವರು ಇತ್ತೀಚೆಗೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವರಾದ ಹರ್‌ದೀಪ್‌ಸಿಂಗ್ ಪೂರಿ ಅವರಿಗೆ ಪತ್ರ ಬರೆದು ಗಮನ ಸೆಳೆದಿದ್ದು, ಸಮಸ್ಯೆಯನ್ನು ತುರ್ತಾಗಿ ಪರಿಹರಿಸುವಂತೆ ಮನವಿ ಮಾಡಿದ್ದರು.

ಜಿಲ್ಲೆಯಲ್ಲಿ ಸಿಎನ್‌ಜಿ ಅನಿಲ ಕೊರತೆಯಿಂದ ಆಟೋರಿಕ್ಷಾ ಚಾಲಕರು ಹಾಗೂ ಮಾಲಕರು ಅಲ್ಲದೇ ಇತರ ಸಿಎನ್‌ಜಿ ವಾಹನಗಳಿಗೆ ಅನಿಲದ ಕೊರತೆ ಉಂಟಾಗಿ ಈಗಿರುವ ಅದಾನಿ ಸಂಸ್ಥೆಯ ಸ್ಥಾವರಗಳ ಸಮೀಪ ಕಿ.ಮೀ. ಉದ್ದಕ್ಕೆ ಸರದಿ ಸಾಲಿನಲ್ಲಿ ರಿಕ್ಷಾಗಳು ನಿಂತಿರುವುದರಿಂದ ಉಂಟಾ ಗುವ ಟ್ರಾಫಿಕ್ ಅವ್ಯವಸ್ಥೆಯ ಬಗ್ಗೆಯೂ ಕೋಟ ಸಚಿವರ ಗಮನ ಸೆಳೆದಿದ್ದರು.

ಕೋಟ ಅವರ ಪತ್ರಕ್ಕೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಇಲಾಖೆ ಸ್ಪಂದಿಸಿದ್ದು, ಸಿಎನ್‌ಜಿ ಅನಿಲ ಪೂರೈಕೆಯನ್ನು ಸರಿಯಾದ ಪ್ರಮಾಣ ಮತ್ತು ಸಮಯದಲ್ಲಿ ಪೂರೈಸಬೇಕೆಂಬ ಕೇಂದ್ರ ಸಚಿವಾಲಯ ಜಿಲ್ಲೆಯ ಪೂರೈಕೆ ದಾರರಾದ ಅದಾನಿ ಸಂಸ್ಥೆಗೆ ಸೂಚನೆ ನೀಡಿ ಸಮಸ್ಯೆಯನ್ನು ತುರ್ತಾಗಿ ಬಗೆಹರಿಸುವಂತೆ ಆದೇಶ ನೀಡಿತ್ತು ಎಂದು ಕೋಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಅದಾನಿ ಟೋಟೆಲ್ ಗ್ಯಾಸ್ ಲಿಮಿಟೆಡ್ (ಎಟಿಜಿಎಲ್) ಕೋಟ ಅವರಿಗೆ ಪತ್ರ ಬರೆದು ಸದ್ಯ ಉಡುಪಿ ಜಿಲ್ಲೆಯಲ್ಲಿ ಎಟಿಜಿಎಲ್ ಎಂಟು ಸಿಎನ್‌ಜಿ ಸ್ಟೇಶನ್‌ಗಳು - ಹೆಮ್ಮಾಡಿ, ಪಡುಬಿದ್ರಿ, ಬ್ರಹ್ಮಾವರ, ಮಲ್ಪೆ, ಗುಂಡಿಬೈಲು, ಕೋಟೇಶ್ವರ, ಬೆಳ್ಮಣ್ ಹಾಗೂ ಕಾರ್ಕಳಗಳಲ್ಲಿ ಕಾರ್ಯಾಚರಿಸುತಿದ್ದು, ಅನಿಲದ ಕೊರತೆಯನ್ನು ಶಾಶ್ವತವಾಗಿ ನಿವಾರಿ ಸಲು ಹಿರಿಯಡ್ಕ, ಹೆಬ್ರಿ ಮತ್ತು ಮುಲ್ಲಿಕಟ್ಟೆಗಳಲ್ಲಿ ನೂತನ ಸ್ಥಾವರಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ಅಗತ್ಯವಿದ್ದರೆ ಇನ್ನೂ ಹೆಚ್ಚಿನ ಸ್ಥಾವರಗಳನ್ನು ನಿರ್ಮಿಸಿ ಸಮಯಕ್ಕೆ ಸರಿಯಾಗಿ ಅನಿಲ ಪೂರೈಕೆ ಮಾಡುವ ಭರವಸೆ ಯನ್ನು ಸಂಸ್ಥೆ ಪತ್ರದಲ್ಲಿ ನೀಡಿದೆ ಎಂದು ಕೋಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಡುಪಿ ಜಿಲ್ಲೆಗೆ ಸಿಎನ್‌ಜಿ ಸರಬರಾಜು ಮಾಡುವ ನಗರ ಅನಿಲ ವಿತರಣೆಯ ಹಕ್ಕನ್ನು ಪಿಎನ್‌ಜಿಆರ್‌ಬಿ, ಎಟಿಜಿಎಲ್‌ಗೆ ನೀಡಿದೆ. ಸದ್ಯ ಅದಾನಿ ಸಂಸ್ಥೆ, ಪಣಂಬೂರಿನಲ್ಲಿ ಕಾರ್ಯಾಚರಿಸುತ್ತಿರುವ ಗೈಲ್ ಗ್ಯಾಸ್ ಲಿಮಿಟೆಡ್‌ನಿಂದ ಉಡುಪಿಯಲ್ಲಿ ರುವ ಸಿಎನ್‌ಜಿ ಸ್ಟೇಶನ್‌ಗೆ ಅನಿಲ ಸರಬರಾಜು ಮಾಡುತ್ತಿದೆ.

ಉಡುಪಿ ಜಿಲ್ಲೆಗೆ ಎಟಿಜಿಎಲ್ ಸರಬರಾಜು ಮಾಡುವ ಸಿಟಿ ಗೇಟ್ ಸ್ಟೇಶನ್ ಮಂಗಳೂರು ಜಿಲ್ಲೆಯಲ್ಲಿದ್ದು, ಅಲ್ಲಿಂದ ಪೈಪ್‌ ಲೈನ್ ಸಂಪರ್ಕ ವ್ಯವಸ್ಥೆಗೆ ಅನುಮತಿ ದೊರಕದ ಹಿನ್ನೆಲೆಯಲ್ಲಿ ವಿಳಂಬವಾಗುತ್ತಿದೆ ಎಂದು ಸಂಸ್ಥೆ ಪತ್ರದಲ್ಲಿ ವಿವರಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News