ಮತಗಟ್ಟೆ ಬಳಿ ಮತ ಪ್ರಚಾರ: ಆಕ್ಷೇಪಿಸಿದಕ್ಕೆ ಹಲ್ಲೆ: ದೂರು ಪ್ರತಿದೂರು

Update: 2024-05-08 16:24 GMT

ಕುಂದಾಪುರ: ಮತಗಟ್ಟೆ ಬಳಿ ಮತ ಪ್ರಚಾರ ಮಾಡುತ್ತಿರುವ ಬಗ್ಗೆ ಸಿಬ್ಬಂದಿಗೆ ಮಾಹಿತಿ ನೀಡಿದ ಕಾರಣಕ್ಕಾಗಿ ಇನ್ನೊಂದು ಪಕ್ಷದ ಕಾರ್ಯಕರ್ತರಿಗೆ ತಂಡವೊಂದು ಹಲ್ಲೆಗೆ ಯತ್ನಿಸಿ ಜೀವ ಬೆದರಿಕೆ ಹಾಕಿದ ಘಟನೆ ನೇರಳಕಟ್ಟೆ ಎಂಬಲ್ಲಿ ನಡೆದಿದೆ.

ಸಂತೋಷ ಎಂಬಾತನು ಚಂದ್ರ ಎಂಬಾತನೊಂದಿಗೆ ಸೇರಿ ಮತಗಟ್ಟೆ ಬಳಿ ಮತ ಪ್ರಚಾರ ಮಾಡುತ್ತಿದ್ದು, ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಇನ್ನೊಂದು ಪಕ್ಷ ಕಾರ್ಯಕರ್ತ ಕರ್ಕುಂಜೆ ಗ್ರಾಮದ ಮಂಜುನಾಥ್ ಎಂಬವರು ಮತಗಟ್ಟೆಯಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿಯವರಿಗೆ ಈ ವಿಚಾರ ತಿಳಿಸಿದರು. ಅದರಂತೆ ಸಿಬ್ಬಂದಿಯವರು ಸಂತೋಷ್‌ ನನ್ನು ಹೊರಗಡೆ ಕಳುಹಿಸಿದ್ದರೆನ್ನಲಾಗಿದೆ.

ಆ ವೇಳೆ ಸಂತೋಷ್, ಮಂಜುನಾಥ್‌ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಚುನಾವಣೆ ಮುಗಿದ ನಂತರ ನಿನ್ನನ್ನು ಮುಗಿಸಿ ಬಿಡುತ್ತೇನೆ ಎಂದು ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ದೂರಲಾಗಿದೆ. ತದನಂತರ ಮಧ್ಯಾಹ್ನ ವೇಳೆ ನೇರಳಕಟ್ಟೆ ಸರ್ಕಲ್‌ನಲ್ಲಿ ಸಂತೋಷ, ಮಂಜುನಾಥ, ಗಿರೀಶ, ಗಣೇಶ, ಪ್ರದೀಪ, ಪ್ರಶಾಂತ, ಭರತ್ ಎಂಬವರು ಸೇರಿಕೊಂಡು ಮಂಜುನಾಥ್ ಹೋಗುತ್ತಿದ್ದ ಆಟೋ ರಿಕ್ಷಾವನ್ನು ಅಡ್ಡಗಟ್ಟಿ ರಿಕ್ಷಾದಿಂದ ಎಳೆದು ಹಾಕಲು ಪ್ರಯತ್ನಿಸಿದರು.

ಈ ಸಂದರ್ಭ ಮಂಜುನಾಥ್ ತಪ್ಪಿಸಿಕೊಂಡು ತಮ್ಮ ಪಕ್ಷದ ಬೂತ್‌ಗೆ ಹೋದಾಗ ಎಲ್ಲಾ ಆರೋಪಿಗಳು ಕೂಡ ಅಲ್ಲಿಗೆ ಬಂದು ಮಂಜುನಾಥ್ ಹಾಗೂ ಅವರ ಸ್ನೇಹಿತ ಫಜಲ್ ಎಂಬವರಿಗೂ ಹಲ್ಲೆಗೆ ಪ್ರಯತ್ನಿಸಿ ಕೊಲೆ ಬೆದರಿಕೆ ಹಾಕಿರುವುದಾಗಿ ದೂರಲಾಗಿದೆ.

ಪ್ರತಿದೂರು: ಕರ್ಕುಂಜೆ ಗ್ರಾಮದ ಸಂತೋಷ ನೇರಳಕಟ್ಟೆ ಸರ್ಕಲ್ ಬಳಿ ಮತಗಟ್ಟೆ ಕಡೆಗೆ ಮಂಜುನಾಥ, ಭರತ್, ಪ್ರದೀಪ, ಪ್ರಶಾಂತ್, ಗಿರೀಶ್, ಗಣೇಶ್ ಎಂಬವರೊಂದಿಗೆ ತೆರಳುತ್ತಿರುವಾಗ ಮಂಜುನಾಥ ಬುದ್ದನಜೆಡ್ಡು, ಉದಯ ಹಿಲ್ಕೋಡು, ರಾಜೀವ ಬಿಜ್ರಿ, ಅಶೋಕ, ಸುಕುಮಾರ ಹಿಲ್ಕೋಡು ಎಂಬವರು ಗುಂಪು ಕಟ್ಟಿಕೊಂಡು ಬಂದು ಅವಾಚ್ಯ ಶಬ್ದ ಗಳಿಂದ ಬೈದು ಬೆದರಿಕೆ ಹಾಕಿರುವುದಾಗಿ ದೂರಲಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರುಗಳು ದಾಖಲಾಗಿವೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News