ವಚನಗಳ ಮೂಲಕ ಸಮಾಜದ ಮೌಢ್ಯ ತೊಡೆಯಲು ಶ್ರಮಿಸಿದ ಬಸವಣ್ಣ: ಉಡುಪಿ ಡಿಸಿ ವಿದ್ಯಾಕುಮಾರಿ

Update: 2024-05-10 15:11 GMT

ಉಡುಪಿ, ಮೇ10: ಬಸವಣ್ಣ ತಮ್ಮ ನಡೆನುಡಿಗಳಿಂದ ದೈವತ್ವಕ್ಕೇರಿದ್ದು, ತಮ್ಮ ವಚನಗಳ ಮೂಲಕ ಸಮಾಜದಲ್ಲಿರುವ ಮೌಢ್ಯ, ಮೇಲುಕೀಳು ಭಾವನೆಗಳನ್ನು ಹೋಗಲಾಡಿಸಲು ಶ್ರಮಿಸಿದ್ದಾರೆ. ಸಮಾಜದ ನಡೆ ಹಾಗೂ ಬದ್ಧತೆ ಹೇಗಿರಬೇ ಕೆಂಬ ಮಾರ್ಗವನ್ನು ಅವರು ತೋರಿಸಿದ್ದಾರೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹೇಳಿದ್ದಾರೆ.

ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ಆಶ್ರಯದಲ್ಲಿ ಶುಕ್ರವಾರ ನಡೆದ ಬಸವಣ್ಣ ಜಯಂತಿ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯ ಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಹೇಮರೆಡ್ಡಿ ಮಲ್ಲಮ್ಮ ಇಂದಿನ ಸ್ತ್ರೀ ಸಮಾಜಕ್ಕೆ ಆದರ್ಶ ಪ್ರಾಯರಾಗಿದ್ದಾರೆ ಎಂದವರು ಅಭಿಪ್ರಾಯಪಟ್ಟರು.

ಬಸವಣ್ಣ 12ನೇ ಶತಮಾನದ ಮಹಾನ್ ಸಂತ. ತನ್ನ ವಚನಗಳ ಮೂಲಕ ವಚನ ಕ್ರಾಂತಿಯನ್ನು ದೇಶಾದ್ಯಂತ ಪಸರಿಸಿದ ಅವರು ಸಮಾಜದಲ್ಲಿದ್ದ ಅನೇಕ ಅಂಕುಡೊಂಕುಗಳನ್ನು ತಿದ್ದುವ ಮೂಲಕ ಉತ್ತಮ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದರು. ಕಾಯಕವೇ ಕೈಲಾಸ ಎಂಬ ಆಶಯ ಶ್ರಮ ಸಂಸ್ಕೃತಿಗೆ ದ್ಯೋತಕ ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲೆಯ ಶರಣ ಸಮಿತಿಯ ಅಧ್ಯಕ್ಷ ಡಾ. ನಿರಂಜನ್, ಬಸವಣ್ಣ ಮತ ವರ್ಗದ ಯಾವುದೇ ಬೇಧವಿಲ್ಲದೆ ಎಲ್ಲರೂ ಒಂದೇ ಎಂಬುದನ್ನು ಹೇಳುವುದರೊಂದಿಗೆ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದರು. ಅಲ್ಲದೇ ಕನ್ನಡದಲ್ಲಿ ಅಧ್ಯಾತ್ಮವನ್ನು ಹೇಳುವ ಮೂಲಕ ಅನೇಕ ವಚನಕಾರರು ಹಾಗೂ ವಚನಕಾರ್ತಿಯರನ್ನು ಮುನ್ನಲೆಗೆ ತಂದ ಕೀರ್ತಿಯು ಬಸವಣ್ಣನವರಿಗೆ ಸಲ್ಲುತ್ತದೆ ಎಂದರು.

ಬಸವಣ್ಣನವರಿಗೆ ರಾಜ್ಯ ಸರಕಾರ ಸಾಂಸ್ಕೃತಿಕ ನಾಯಕ ಎಂಬ ಬಿರುದನ್ನು ನೀಡಿದ್ದು ಸಾಂಸ್ಕೃತಿಕ ಲೋಕಕ್ಕೆ ಅವರ ಕೊಡುಗೆ ಅಪಾರ. ಅದೇ ರೀತಿ ಹೇಮರೆಡ್ಡಿ ಮಲ್ಲಮ್ಮ ಅವರ ತತ್ವ ಪದಗಳು, ಲಾವಣಿ ಹಾಗೂ ಜನಪದ ಗೀತೆಗಳು ಇಂದಿಗೂ ಉತ್ತರ ಕರ್ನಾಟಕ ಭಾಗದಲ್ಲಿ ಬೇಸಾಯದ ಸಮಯದಲ್ಲಿ ಬಳಕೆ ಮಾಡಲಾಗುತ್ತಿದೆ. ಅವರು ಕನ್ನಡ ಮಾತ್ರ ವಲ್ಲದೆ ತೆಲುಗು ಭಾಷೆಯಲ್ಲೂ ಸಾಹಿತ್ಯ ರಚಿಸಿದ್ದು, ಆಂಧ್ರಪ್ರದೇಶದ ನಾಡಗೀತೆ ಯಲ್ಲಿ ಮಲ್ಲಮ್ಮನ ಪತಿ ಭಕ್ತಿಯ ಕುರಿತು ಉಲ್ಲೇಖವಿದೆ ಎಂದು ಡಾ.ನಿರಂಜನ್ ನುಡಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ಸಮಾಜದಲ್ಲಿ ಸಾಮಾಜಿಕ, ಆರ್ಥಿಕ ಹಾಗೂ ಧಾರ್ಮಿಕ ಅಸ್ತಿತ್ವವನ್ನು ಕಳೆದುಕೊಂಡಿದ್ದ ಸ್ತ್ರೀಯರು ಬಸವಣ್ಣನವರ ವಚನಗಳ ಪ್ರಭಾವ ದಿಂದ ಮುಕ್ತವಾಗಿ ಬದುಕಲು ಸಾಧ್ಯವಾಯಿತು ಎಂದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ. ಎಸ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಐ.ಪಿ.ಗಡಾದ್, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅಭಿಮಾನಿ ಬಳಗದ ಶಾಂತೇನ ಗೌಡ, ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಅಧ್ಯಕ್ಷ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ, ಬಸವ ಸಮಿತಿ ಅಧ್ಯಕ್ಷ ಗಂಗಾಧರ, ಜಗನ್ನಾಥ್ ಪಣಸಾಲೆ, ಕಸಾಪ ಕಾರ್ಯದರ್ಶಿ ನರಸಿಂಹ ಮೂರ್ತಿ, ವೀರಶೈವ ಸಮಾಜ, ಉಡುಪಿ ಬಸವ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರೆ, ರಾಮಾಂಜಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News