ಪ್ರಧಾನಮಂತ್ರಿ ಮಾತೃವಂದನಾ ಯೋಜನೆ: ಉಡುಪಿ ಜಿಲ್ಲೆಯಲ್ಲಿ 16,377 ಮಂದಿ ಫಲಾನುಭವಿಗಳು
ಕೇಂದ್ರದಿಂದ 7.77 ಕೋಟಿ ರೂ. ಬಿಡುಗಡೆ
ಉಡುಪಿ: ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಲ್ಲಿ 2023ರಿಂದ ಪ್ರಸ್ತುತ ಅಕ್ಟೋಬರ್ ತಿಂಗಳವರೆಗೆ ಒಟ್ಟು 16,377 ಮಂದಿ ಫಲಾನುಭವಿಗಳನ್ನು ಗುರುತಿಸಲಾಗಿದ್ದು, 7,77,42,000 ರೂ.ಗಳನ್ನು ಈವರೆಗೆ ಬಿಡುಗಡೆಗೊಳಿಸಲಾಗಿದೆ ಎಂದು ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಮಣಿಪಾಲದ ಸಂಸದ ಕಚೇರಿ ಸಭಾಂಗಣದಲ್ಲಿ ಇಂದು ತಾನು ನಡೆಸಿದ ಮಾತೃವಂದನಾ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಸರಕಾರದಿಂದ ಎಲ್ಲಾ ಸೌಲಭ್ಯ ಸಿಗುವ ಸರಕಾರಿ ನೌಕರರು ಮತ್ತು ಆದಾಯ ಪರಿಮಿತಿ ಹೆಚ್ಚಿರುವ ಕುಟುಂಬಗಳನ್ನು ಹೊರತುಪಡಿಸಿ, ಉಳಿದೆಲ್ಲ ಬಹುತೇಕ ಮಹಿಳೆಯರಿಗೆ ಮೊದಲನೇ ಹೆರಿಗೆಗೆ 5,000 ರೂ. ಎರಡನೇ ಹೆಣ್ಣು ಮಗುವಿನ ಹೆರಿಗೆಯಲ್ಲಿ 6,000 ರೂ. ಮೊತ್ತವನ್ನು ಮಕ್ಕಳ ತಾಯಂದಿರಿಗೆ ನೀಡುವ ಯೋಜನೆ ಇದಾಗಿದೆ ಎಂದರು.
ಮಕ್ಕಳ ಸುರಕ್ಷತೆಗಾಗಿ ರೋಗನಿರೋಧಕ ಚುಚ್ಚುಮದ್ದನ್ನು ಪಡೆಯುವುದು ಮಾತೃವಂದನಾ ಯೋಜನೆಯಲ್ಲಿ ಕಡ್ಡಾಯವಾಗಿದೆ. ಮೊದಲನೆ ಹೆರಿಗೆ ನೊಂದಾವಣೆ ಮಾಡಿದ ಫಲಾನುಭವಿಗಳ ಸಂಖ್ಯೆ ಜಿಲ್ಲೆಯಲ್ಲಿ 11,706 ಆಗಿದ್ದು, 3,18,51000 ರೂ. ಮೊತ್ತ ಮಕ್ಕಳ ತಾಯಂದಿರಿಗೆ ಬಿಡುಗಡೆ ಮಾಡಲಾಗಿದೆ ಎಂದು ವಿವರಿಸಿದರು.
ಎರಡನೇ ಹೆಣ್ಣು ಮಗುವಿನ ನೊಂದಾವಣಿ ಫಲಾನುಭವಿಗಳ ಸಂಖ್ಯೆ 4,671 ಆಗಿದ್ದು, 2,80,26,000 ರೂ. ಹಣ ಪಾವತಿ ಮಾಡಲಾಗಿದೆ ಎಂದ ಸಂಸದರು, ಯಾವುದೇ ಸಂದರ್ಭದಲ್ಲಿ ಫಲಾನುಭವಿಗಳಿಗೆ ಸಮಸ್ಯೆ ಆಗದಂತೆ ಕೇಂದ್ರ ಸರಕಾರದ ಈ ಯೋಜನೆ ಎಲ್ಲಾ ಅರ್ಹ ಫಲಾನುಭವಿ ಗಳಿಗೆ ತಲುಪಿಸಬೇಕೆಂದು ಸಲಹೆ ಇತ್ತರು.
ಮಾತೃವಂದನಾ ಯೋಜನೆ ಸಾಮಾನ್ಯ ಜನರಿಗೆ ಅದರಲ್ಲೂ ಮಹಿಳೆ ಯರಿಗೆ ಅತ್ಯುತ್ತಮವಾದ ಯೋಜನೆಯಾಗಿದೆ. ಕೇಂದ್ರ ಸರಕಾರದ ಆಶಯ ವನ್ನು ಅರ್ಥ ಮಾಡಿಕೊಂಡು ಕರ್ತವ್ಯ ನಿರ್ವಹಿಸಬೇಕೆಂದು ಅವರು ಪ್ರಗತಿ ಪರಿಶೀಲನಾ ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲೆ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.
ಅಂಗನವಾಡಿ ಮಕ್ಕಳಿಗೆ ನೀಡುವ ಆಹಾರ ಪ್ರಕ್ರಿಯೆಗಳಲ್ಲಿ ಗುಣಮಟ್ಟದ ಆಹಾರ ಒದಗಿಸುವಂತೆ ಸಲಹೆ ನೀಡಿದ ಕೋಟ, ಈ ಆಹಾರದ ಸರಬರಾಜಿ ನಲ್ಲಿ ಕೇಂದ್ರ ಸರಕಾರ ಶೇ.60ರಷ್ಟು ಹಾಗೂ ರಾಜ್ಯ ಸರಕಾರ ಶೇ.40ರಷ್ಟು ವೆಚ್ಚವನ್ನು ಭರಿಸುತ್ತಿವೆ. ಈ ಜಂಟಿ ಯೋಜನೆಯಲ್ಲಿ ಗುಣಮಟ್ಟದ ಆಹಾರದ ಕಡೆ ಹೆಚ್ಚು ಗಮನಹರಿಸುವುದು ಅಗತ್ಯ ಎಂದು ಸಂಸದರು ಅಭಿಪ್ರಾಯ ಪಟ್ಟರು.
ಸಂಸದರಿಗೆ ಸಭೆಯಲ್ಲಿ ಮಾಹಿತಿ ಒದಗಿಸಿದ ಜಿಲ್ಲಾಮಟ್ಟದ ಅಧಿಕಾರಿ ಶ್ಯಾಮಲಾ, ಜಿಲ್ಲೆಯಲ್ಲಿ ಸುಮಾರು 1122 ಅಂಗನವಾಡಿಗಳು ಇದ್ದು ಈ ಪೈಕಿ 47,784 ಮಕ್ಕಳು ಅಂಗನವಾಡಿಯಲ್ಲಿ ಕಲಿಯುತ್ತಿರುವುದಾಗಿ ಮಾಹಿತಿ ನೀಡಿದರು. ಕಾಲಕಾಲಕ್ಕೆ ಮಕ್ಕಳಿಗೆ ಚುಚ್ಚುಮದ್ದು ಕೊಡುವ, ಅಪೌಷ್ಠಿಕತೆಯುಳ್ಳ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವ, ಗರ್ಭಿಣಿ ಮತ್ತು ಬಾಣಂತಿಯರಿಗೆ ವಿಶೇಷ ಒತ್ತು ಕೊಟ್ಟು ಕೆಲಸ ಮಾಡುವ ಜವಾಬ್ದಾರಿಯನ್ನು ಅಂಗನವಾಡಿ ನಿರ್ವಹಿಸುತ್ತಿದೆ ಎಂದು ಅವರು ವಿವರಿಸಿದರು.
ಸಭೆಯಲ್ಲಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ, ಜಿಲ್ಲಾ ನಿರೂಪಣಾಧಿಕಾರಿ ಅನುರಾಧಾ ಹಾದಿಮನಿ, ಉಡುಪಿ ಮತ್ತು ಬ್ರಹ್ಮಾವರದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಯ ನಾಯ್ಕ, ಕಾರ್ಕಳ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಲತಾ, ಕುಂದಾಪುರದ ಹಿರಿಯ ಮೇಲ್ವಿಚಾರಕಿ ಸುಜಯಾ, ಜಿಲ್ಲಾ ಮಿಷನ್ ಸಂಯೋಜಕಿ ಶಾರದಾ, ಮಾತೃವಂದನಾ ಜಿಲ್ಲಾ ಸಂಯೋಜಕ ಜೀವನ್ ಕುಮಾರ್ ಉಪಸ್ಥಿತರಿದ್ದರು.