ಶೀರೂರು ಮಠ ಪರ್ಯಾಯ: ಜಿಲ್ಲೆಯ ಮನೆಮನೆಗೂ ಅಹ್ವಾನ ಪತ್ರಿಕೆ ಹಂಚಿಕೆ
ಉಡುಪಿ: 2026ರ ಜನವರಿ 18ರಂದು ನಡೆಯುವ ಶೀರೂರು ಮಠದ ಪರ್ಯಾಯ ಮಹೋತ್ಸವದ ಪೂರ್ವಭಾವಿ ಸಮಾಲೋಚನಾ ಸಭೆಯು ಪರ್ಯಾಯ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಅಧ್ಯಕ್ಷತೆಯಲ್ಲಿ ಇದೇ ನ. 7ರಂದು ಸಂಜೆ 4:30ಕ್ಕೆ ಉಡುಪಿಯ ಸೋದೆ ಮಠದ ಬಳಿಯ ವಿದ್ಯೋದಯ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ ಎಂದು ಪರ್ಯಾಯ ಸ್ವಾಗತ ಸಮಿತಿ ಅಧ್ಯಕ್ಷ, ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಹೇಳಿದ್ದಾರೆ.
ಉಡುಪಿ ಶೀರೂರು ಮಠದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಭೆಯಲ್ಲಿ ಪರ್ಯಾಯ ಪೂರ್ವಭಾವಿ ತಯಾರಿ ಬಗ್ಗೆ ಪ್ರಮುಖರೊಂದಿಗೆ ಚರ್ಚೆ ನಡೆಯಲಿದೆ. ಈ ಬಾರಿಯ ಪರ್ಯಾಯವು ‘ಶೀರೂರು ಪರ್ಯಾಯ ನಮ್ಮ ಪರ್ಯಾಯ’ ಎಂಬ ಧ್ಯೇಯವಾಕ್ಯ ದೊಂದಿಗೆ ನಡೆಯಲಿದ್ದು, ಉಡುಪಿ ಜಿಲ್ಲೆಯ ಪ್ರತಿ ಮನೆಗೂ ಆಮಂತ್ರಣ ಪತ್ರಿಕೆಗಳನ್ನು ತಲುಪಿಸಲಾಗುವುದು. ಅಲ್ಲದೆ, ಜಿಲ್ಲೆಯ ಪ್ರತಿಯೊಂದು ಮನೆಯವರು ಕೂಡಾ ಈ ಮಹೋತ್ಸವದಲ್ಲಿ ಪಾಲ್ಗೊಳ್ಳುವಂತೆ ವ್ಯವಸ್ಥೆಯನ್ನು ಮಾಡಲಾಗುವುದು ಎಂದರು.
ಈ ಬಾರಿ ವಿಶೇಷವಾಗಿ ಹೊರಕಾಣಿಕೆಯನ್ನು ಸಂಗ್ರಹಿಸುವ ಗುರಿಯನ್ನು ಹೊಂದಲಾಗಿದ್ದು, ಇದಕ್ಕಾಗಿ ಜಿಲ್ಲೆಯನ್ನು ಎಂಟು ವಲಯಗಳನ್ನಾಗಿ ಮಾಡಿ ಪ್ರತೀ ಮನೆಯಿಂದಲೂ ಹೊರಕಾಣಿಕೆಯನ್ನು ಸಂಗ್ರಹಿಸಲು ತೀರ್ಮಾನಿ ಸಲಾಗಿದೆ. ಅದೇ ರೀತಿ ಧರ್ಮಸ್ಥಳ, ಕಟೀಲು, ಮಂಗಳೂರು, ಪುತ್ತೂರು ವಲಯಗಳಿಂದ ದೊಡ್ಡ ಪ್ರಮಾಣದ ಹೊರಕಾಣಿಕೆಯನ್ನು ನಿರೀಕ್ಷಿಸಲಾ ಗುತ್ತಿದೆ ಎಂದು ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದರು.
ಪ್ರಥಮ ಬಾರಿಗೆ ಸರ್ವಜ್ಞ ಪೀಠಾರೋಹಣ ಮಾಡಲಿರುವ ಶ್ರೀವೇದವರ್ಧನ ತೀರ್ಥ ಶ್ರೀಪಾದರು, ದೇಶ ಪರ್ಯಟನದ ಬಳಿಕ ಜನವರಿ 9ರಂದು ಕಡಿಯಾಳಿ ಮೂಲಕ ಪುರಪ್ರವೇಶ ಮಾಡಲಿದ್ದು, ಅಂದು ಸಂಜೆ 3:30ಕ್ಕೆ ಉಡುಪಿಯ ಕಡಿಯಾಳಿಯಲ್ಲಿ ಶೀರೂರುಶ್ರೀಗಳನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಿ, ಸಮಾಜದ ಪ್ರಮುಖರು, ಧಾರ್ಮಿಕ ಮುಖಂಡರನ್ನು ಒಳಗೊಂಡಂತೆ ಭವ್ಯ ಮೆರವಣಿಗೆಯಲ್ಲಿ ಕರೆತರಲಾ ಗುವುದು. ಬಳಿಕ ಉಡುಪಿ ನಗರಸಭೆ ವತಿಯಿಂದ ಭಾವೀ ಪರ್ಯಾಯ ಶ್ರೀಗಳಿಗೆ ರಥಬೀದಿಯಲ್ಲಿ ಪೌರ ಸಮ್ಮಾನ ನಡೆಯಲಿದೆ ಎಂದರು.
ಜನವರಿ10ರಿಂದ 17ರವರೆಗೆ ಪ್ರತಿದಿನ ಅದ್ದೂರಿಯ ಹೊರೆ ಕಾಣಿಕೆಯ ಮೆರವಣಿಗೆ ನಡೆಯಲಿದೆ. ಹೊರಕಾಣಿಕೆಯಲ್ಲಿ ಬಂದ ಎಲ್ಲಾ ಪರಿಕರಗಳನ್ನು ಶ್ರೀಮಠದ ವಾಹನ ನಿಲುಗಡೆ ಸಮೀಪ (ರಾಜಾಂಗಣ ಪಾರ್ಕಿಂಗ್) ಅಚ್ಚುಕಟ್ಟಾಗಿ ಜೋಡಿಸಿ ಅಲ್ಲಿ ವಸ್ತು ಪ್ರದರ್ಶನ ಏರ್ಪಡಿಸಲು ಯೋಜಿಸಲಾಗಿದೆ ಎಂದು ಮಟ್ಟಾರು ಹೇಳಿದರು.
ಜನವರಿ 18ರ ಮುಂಜಾನೆ ಶೀರೂರುಶ್ರೀಗಳು ಪರ್ಯಾಯ ಪೀಠಾರೋಹಣ ಮಾಡಲಿದ್ದು, ಬಳಿಕ ರಾಜಾಂಗಣದಲ್ಲಿ ಅಷ್ಟ ಮಠಾಧೀಶರ ಉಪಸ್ಥಿತಿಯಲ್ಲಿ ಬೃಹತ್ ದರ್ಬಾರ್ ನಡೆಯಲಿದ್ದು, ಇದರಲ್ಲಿ ಸಮಾಜದ ಗಣ್ಯರಿಗೆ ಶ್ರೀಕೃಷ್ಣಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಬಳಿಕ ನಿರಂತರ 10 ದಿನಗಳ ಕಾಲ ದೇಶ-ವಿದೇಶಗಳ ಪ್ರಸಿದ್ಧ ಕಲಾವಿದರಿಂದ ವಿಶೇಷ ಸಾಂಸ್ಕೃತಿಕ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮಗಳು ನಡೆಯಲಿವೆ.
ಪರ್ಯಾಯವನ್ನು ಸುವ್ಯವಸ್ಥಿತವಾಗಿ ನಡೆಸಲು ಡಾ.ಡಿ.ವೀರೇಂದ್ರ ಹೆಗ್ಗಡೆ ಗೌರವಾಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿಯನ್ನು ರಚಿಸಲಾಗಿದ್ದು, ಸಮಿತಿಯಲ್ಲಿ ಡಾ.ರಂಜನ್ ಪೈ, ಸಂಸದ ತೇಜಸ್ವಿ ಸೂರ್ಯ, ಡಾ.ಎಚ್.ಎಸ್.ಬಲ್ಲಾಳ್, ಡಾ.ಮೋಹನ ಆಳ್ವ, ಡಾ.ಜಿ.ಶಂಕರ್, ಬಂಜಾರ ಪ್ರಕಾಶ್ ಶೆಟ್ಟಿ, ಎಂ.ಎನ್.ರಾಜೇಂದ್ರಕುಮಾರ್ ಮುಂತಾದವರು ಇದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಠದ ದಿವಾನರಾದ ಡಾ.ಉದಯಕುಮಾರ್ ಸರಳತ್ತಾಯ, ಕಾರ್ಯದರ್ಶಿ ಮೋಹನ್ ಭಟ್, ಹೊರೆಕಾಣಿಕೆ ಸಂಚಾಲಕ ಸುಪ್ರಸಾದ ಶೆಟ್ಟಿ, ಕಿರಣ್ ಕುಮಾರ್ ಉಪಸ್ಥಿತರಿದ್ದರು.