ಕೊರಗರ ಆರೋಗ್ಯ ತಪಾಸಣೆಗೆ ‘ಸ್ವಸ್ತ್ಯ-ಪೋಷಣ್ ಸೇವಾ ಸಂಘಮ್’
ಕೊರಗರು ಇರುವಲ್ಲಿ ತೆರಳಿ ಆರೋಗ್ಯದ ವಿವಿಧ ತಪಾಸಣೆ
ಕುಂದಾಪುರ, ನ.17: ಕೊರಗರು ವಾಸಿಸುವ ಪ್ರದೇಶದ ಸಮೀಪವೇ ತೆರಳಿ ಅವರ ಆರೋಗ್ಯ ತಪಾಸಣೆ ಮಾಡುವ ಮಹತ್ವಾಕಾಂಕ್ಷಿ ಯೋಜನೆ ಉಡುಪಿ ಜಿಲ್ಲೆಯಲ್ಲಿ ನಡೆದಿದ್ದು ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ ನವದೆಹಲಿಯಿಂದ ‘ರಿಫಾರ್ಮ್ ಉತ್ಸವ್’ ಕಾರ್ಯಕ್ರಮವನ್ನು ಆಯೋಜಿಸಿದ್ದು, ಇದರ ಭಾಗವಾಗಿ ಪಿಎಂ-ಜನಮನ್ ಯೋಜನೆಯಡಿ ಅ.15ರಿಂದ ನ.15ರವರೆಗೆ ’ಸ್ವಸ್ತ್ಯ-ಪೋಷಣ್ ಸೇವಾ ಸಂಘಮ್’ ಕಾರ್ಯಕ್ರಮವನ್ನು ಪಿವಿಟಿಜಿ ಫಲಾನುಭವಿಗಳಿಗೆ ಆರೋಗ್ಯ ಸೇವೆಗಳನ್ನು ಒದಗಿಸಲು ಉಡುಪಿ ಜಿಲ್ಲಾದ್ಯಂತ ಕೊರಗ ಸಮುದಾಯದವರು ವಾಸಿಸುತ್ತಿರುವ ವಿವಿದೋದ್ದೇಶ ಕಟ್ಟಡ (ಎಂಪಿಸಿ) ಮಂಜೂರಾದ ಪ್ರದೇಶಗಳಲ್ಲಿ ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ.
ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆ (ಐಟಿಡಿಪಿ) ಮುಂದಾಳತ್ವದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೇತೃತ್ವದಲ್ಲಿ ನಡೆದ ಈ ಶಿಬಿರಗಳಿಗೆ ಮಣಿಪಾಲ ಕೆ.ಎಂ.ಸಿ ಕಮ್ಯೂನಿಟಿ ಮೆಡಿಸಿನ್ ವಿಭಾಗ, ಪ್ರಸಾದ್ ನೇತ್ರಾಲಯ, ಸ್ಥಳೀಯ ಆರೋಗ್ಯ ಕೇಂದ್ರಗಳ ಸಹಭಾಗಿತ್ವವಿದ್ದು ಆಯಾ ಗ್ರಾಮ ಪಂಚಾಯಿತಿಗಳು ಸಹಕರಿಸಿದ್ದವು.
ಎಲ್ಲೆಲ್ಲಿ ಕಾರ್ಯಕ್ರಮ?: ಹಳ್ಳಿಗಾಡಿನ ಕೊರಗ ಸಮುದಾಯ ಈಗಲೂ ಸಾಮಾಜಿಕ ವ್ಯವಸ್ಥೆಯಿಂದ ಬಹಳಷ್ಟು ದೂರವೇ ಇವೆ. ಅನಾರೋಗ್ಯದ ಸಂದರ್ಭದಲ್ಲೂ ಕೂಡ ಆಸ್ಪತ್ರೆಗೆ ತೆರಳದೇ ಇರುವವರು ಬಹಳಷ್ಟು ಮಂದಿ ಈಗಲೂ ಇದ್ದಾರೆ. ಹೀಗಾಗಿ ಕುಗ್ರಾಮಗಳಿಗೆ ತೆರಳಿ ಅವರಿದ್ದಲ್ಲಿಯೇ ಕ್ಯಾಂಪ್ ನಡೆಸಿ ಆರೋಗ್ಯ ತಪಾಸಣೆ ನಡೆಸುವುದು ಈ ಯೋಜನೆಯ ಉದ್ದೇಶವಾಗಿತ್ತು.
ಕುಂದಾಪುರದ ಹಾಲಾಡಿ, ಉಳ್ಳೂರು-74 ಎಂಪಿಸಿ ಕೇಂದ್ರ, ಅಮಾಸೆಬೈಲು ಗ್ರಾ.ಪಂ ಸಭಾಂಗಣ, ಬೈಂದೂರಿನ ಕೆರಾಡಿ ಎಂಪಿಸಿ ಕೇಂದ್ರ, ಜಡ್ಕಲ್-ಮುದೂರು ಹಾಗೂ ನಾಡದಲ್ಲಿನ ಕೊರಗ ಸಮುದಾಯ ಭವನ, ಹೆಬ್ರಿಯ ಬೆಳ್ವೆ ಎಂಪಿಸಿ ಕೇಂದ್ರ, ಬಡಾಗುಡ್ಡೆ ಕೊರಗ ಸಮುದಾಯ ಭವನ, ಉಡುಪಿಯ ಕಳತ್ತೂರು, ಕಾರ್ಕಳದ ಸಚ್ಚರಿಪೇಟೆ-ಮುಂಡ್ಕೂರು ಎಂಪಿಸಿ ಕೇಂದ್ರ, ಕಾಪು ಅಲೆವೂರು ಗ್ರಾಪಂ ಸಭಾಂಗಣದಲ್ಲಿ ಆರೋಗ್ಯ ತಪಾಸಣೆ ನಡೆಸಲಾಗಿತ್ತು ಎಂದು ಐಟಿಡಿಪಿ ಮ್ಯಾನೇಜರ್ ವಿಶ್ವನಾಥ್ ಶೆಟ್ಟಿ ಮಾಹಿತಿ ನೀಡಿದರು.
ಏನೆಲ್ಲಾ ತಪಾಸಣೆ?
ಪ್ರಮುಖವಾಗಿ ಕೊರಗ ಮಹಿಳೆಯರ ಗರ್ಭಕೋಶ ತಪಾಸಣೆ ನಡೆಸಿದ್ದು ಈ ಕ್ಯಾಂಪ್ನ ದೂರದೃಷ್ಟಿ ಚಿಂತನೆ. ಉಳಿದಂತೆ ನೇತ್ರ ತಪಾಸಣೆ, ದಂತ ತಪಾಸಣೆ, ರಕ್ತ ತಪಾಸಣೆ, ರಕ್ತದೊತ್ತಡ, ಮಧುಮೇಹ ತಪಾಸಣೆ ಸಹಿತ ವಿವಿಧ ರೀತಿಯ ತಪಾಸಣೆಗಳನ್ನು ನಡೆಸಲಾಗಿದೆ.
ಅಪೌಷ್ಠಿಕತೆ ಕೊರಗ ಸಮುದಾಯದ ಬಹುದೊಡ್ಡ ಕೊರತೆಯಾಗಿದ್ದು, ಈ ಬಗ್ಗೆಯೂ ತಪಾಸಣೆ ನಡೆಸಿ ಅವರಿಗೆ ಸೂಕ್ತ ಸಲಹೆ-ಸೂಚನೆಗಳನ್ನು ನೀಡಲಾಗಿದೆ.
‘ಕೇಂದ್ರದಿಂದ ಎಂಪಿಸಿ ಮಂಜೂರಾದ ಪ್ರದೇಶಗಳಲ್ಲಿ ಸ್ವಸ್ತ್ಯ ಪೋಷಣ್ ಸೇವಾ ಸಂಘಮ್’ ಕಾರ್ಯಕ್ರಮ ಹಮ್ಮಿ ಕೊಂಡಿದ್ದು ಕೊರಗ ಸಮುದಾಯದ ಮಂದಿಯಿಂದ ಉತ್ತಮ ಸ್ಪಂದನೆ ದೊರಕಿದೆ. ಹೆಚ್ಚಿನ ಸಂಖ್ಯೆಯಲ್ಲಿ ಆರೋಗ್ಯ ತಪಾಸಣೆಯಲ್ಲಿ ಪಾಲ್ಗೊಂಡಿದ್ದಾರೆ. ತಪಾಸಣೆಗೊಳಪಟ್ಟವರ ಪೈಕಿ ಅಗತ್ಯಬಿದ್ದವರ ರಕ್ತದ ಮಾದರಿ ಸಂಗ್ರಹಿಸಿ ಹೆಚ್ಚಿನ ಪರೀಕ್ಷೆಗೆ ಕಳಿಸಲಾಗಿದೆ. ಹಲವರ ನೇತ್ರ ತಪಾಸಣೆಯೂ ನಡೆದಿದೆ. ಇದೆಲ್ಲದರ ವರದಿ ಬಂದ ಬಳಿಕ ಸೂಕ್ತ ಕ್ರಮಕೈಗೊಳ್ಳಲಾಗುತ್ತದೆ.
-ನಾರಾಯಣಸ್ವಾಮಿ ಎಂ., ಉಡುಪಿ ಐಟಿಡಿಪಿ ಇಲಾಖೆಯ ಯೋಜನಾ ಸಮನ್ವಯಾಧಿಕಾರಿ.
‘ಹಾಲಾಡಿಯ ಭತ್ತಗುಳಿ ಕೊರಗರ ಗುಂಪುಗಳಲ್ಲಿ 100ಕ್ಕೂ ಅಧಿಕ ಮಂದಿ ಈ ಶಿಬಿರದ ಪ್ರಯೋಜನ ಪಡೆದರು. ಮುಖ್ಯವಾಗಿ ಗರ್ಭಕೋಶ ಕ್ಯಾನ್ಸರ್ ಸಂಬಂಧಿ ತಪಾಸಣೆ ನಮ್ಮ ಸಮುದಾಯದ ಮಹಿಳೆಯರಿಗೆ ಅತೀ ಅಗತ್ಯವಾಗಿತ್ತು. ನಾವಿರುವಲ್ಲಿ ಬಂದು ಇಂತಹ ಕ್ಯಾಂಪ್ ನಡೆಸಿದ್ದು ಮಾದರಿಯಾಗಿದೆ. ಕೇಂದ್ರ ಸರಕಾರದ ದೂರಗಾಮಿ ಚಿಂತನೆಯಿದು. ಪ್ರತಿವರ್ಷ ಇಂತಹ ಆರೋಗ್ಯ ತಪಾಸಣಾ ಶಿಬಿರಗಳು ನಡೆಯಲಿ. ತಪಾಸಣೆಯಲ್ಲಿ ಭಾಗಿಯಾದವರ ಪೈಕಿ ಪ್ರಯೋಗಾಲಯದ ವರದಿ ಬಂದ ಬಳಿಕ ಚಿಕಿತ್ಸೆ ಅಗತ್ಯವಿರುವವರ ಬಗ್ಗೆ ಸೂಕ್ತ ಕ್ರಮವನ್ನು ಐಟಿಡಿಪಿ ವಹಿಸಬೇಕು. ಕೊರಗ ಸಂಘಟನೆಗಳು ಜೊತೆಗಿರುತ್ತೇವೆ.
-ಕುಮಾರದಾಸ್ ಹಾಲಾಡಿ, ಕೊರಗ ಸಮುದಾಯ ಮುಖಂಡ ಭತ್ತಗುಳಿ -ಹಾಲಾಡಿ.