×
Ad

ಉಡುಪಿ| ಶಾಲಾ ಕಾಲೇಜುಗಳ ಬಸ್‌ಗಳಿಗೆ ನಕಲಿ ವಿಮೆ ಪಾಲಿಸಿ ಪ್ರಕರಣ: ಇಬ್ಬರು ಆರೋಪಿಗಳ ಬಂಧನ; ಕೋಟ್ಯಂತರ ರೂ. ವಂಚನೆ

Update: 2025-10-06 21:26 IST

ರಾಕೇಶ್ - ಚರಣ್

ಉಡುಪಿ, ಅ.6: ಶಾಲಾ ಕಾಲೇಜುಗಳ ಬಸ್‌ಗಳಿಗೆ ನಕಲಿ ವಿಮೆ ಪಾಲಿಸಿ ಮಾಡಿ ಕೋಟ್ಯಂತರ ರೂ. ವಂಚಿಸುತ್ತಿದ್ದ ಪ್ರಕರಣವನ್ನು ಬೇಧಿಸಿರುವ ಪೊಲೀಸರು, ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಬಗ್ಗೆ ಉಡುಪಿ ಎಸ್ಪಿ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಮಾಹಿತಿ ನೀಡಿದ್ದಾರೆ.

ಸಾಸ್ತಾನ ಕುಂಜಿಕೆರೆ ರಸ್ತೆಯ ರಾಕೇಶ ಎಸ್.(33) ಹಾಗೂ ಶಿರಸಿಯ ಚರಣ ಬಾಬು ಮೇಸ್ತ ಬಂಧಿತ ಆರೋಪಿಗಳು. ಆರೋಪಿಗಳು ನಕಲಿ ವಿಮೆ ಮೂಲಕ ಕೋಟ್ಯಂತರ ರೂ. ಹಣ ವಂಚನೆ ಎಸಗಿದ್ದಾರೆ ಎಂದು ಎಸ್ಪಿ ತಿಳಿಸಿದರು.

ಅಪಘಾತದಿಂದ ಪ್ರಕರಣ ಬೆಳಕಿಗೆ

2024ರ ನ.25ರಂದು ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಹೊಂಬಾಡಿ - ಮಂಡಾಡಿ ಗ್ರಾಮದ ಹುಣ್ಸೆಮಕ್ಕಿ ಎಂಬಲ್ಲಿ ಶಾಲಾ ವಾಹನವೊಂದು ರಿಕ್ಷಾಕ್ಕೆ ಢಿಕ್ಕಿ ಹೊಡೆದ ಬಗ್ಗೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಕುಂದಾಪುರ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು ರಿಕ್ಷಾದ ಚಾಲಕ ವಿಮಾ ಪರಿಹಾರವಾಗಿ 15,95,000ರೂ. ಹಣ ಕೋರಿಕೊಂಡಿದ್ದರು.

ಈ ಸಂಬಂಧ ವಿಮಾ ಕಂಪೆನಿಯವರು ಪರಿಶೀಲಿಸಿದಾಗ ಶಾಲಾ ಬಸ್ಸಿನ ವಿಮಾ ಪಾಲಿಸಿಯು ನಕಲಿ ಆಗಿರುವುದು ಕಂಡುಬಂದಿದೆ. ನಕಲಿ ವಿಮಾ ಪಾಲಿಸಿಯನ್ನು ಸೃಷ್ಟಿಸಿ ಠಾಣೆಗೆ ಹಾಗೂ ನ್ಯಾಯಾಲಯಕ್ಕೆ ಹಾಜರುಪಡಿಸಿ ಈ ಮೂಲಕ ವಿಮಾ ಕಂಪೆನಿಗೆ ಮೋಸ ಮಾಡಿರುವುದಾಗಿ ರಿಲಯನ್ಸ್ ಜನರಲ್ ಇನ್ಯೂರೆನ್ಸ್ ಕಂಪೆನಿಯ ಮೇನೇಜರ್ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಬಗ್ಗೆ ಬ್ರಹ್ಮಾವರ ವೃತ್ತ ನಿರೀಕ್ಷಕ ಗೋಪಿಕೃಷ್ಣ ನೇತೃತ್ವದಲ್ಲಿ ಕೋಟ ಪೊಲೀಸ್ ಠಾಣೆಯ ಎಸ್ಸೈ ಪ್ರವೀಣ ಕುಮಾರ್ ಅವರನ್ನು ಒಳಗೊಂಡ ವಿಶೇಷ ತಂಡ ತನಿಖೆ ನಡೆಸಿದಾಗ ಈ ವಂಚನೆ ಪ್ರಕರಣ ಬೆಳಕಿಗೆ ಬಂತು ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.

ಶಾಲಾ ಕಾಲೇಜು ಬಸ್‌ಗಳೇ ಟಾರ್ಗೆಟ್

ತನಿಖಾ ತಂಡವು ಸೆ.6ರಂದು ಪ್ರಕರಣದ ಆರೋಪಿ ರಾಕೇಶ್‌ನನ್ನು ಬಂಧಿಸಿ, ವಿಚಾರಣೆ ನಡೆಸಿದಾಗ ರಿಲಯನ್ಸ್ ಜನರಲ್ ಇನ್ಸೂರೆನ್ಸ್ ಕಂಪೆನಿ ಯಲ್ಲಿ ಎಸ್‌ಡಿಓ ಆಗಿದ್ದ ಚರಣ ಬಾಬು ಮೇಸ್ತನ ಜೊತೆ ಸೇರಿಕೊಂಡು ಕುಂದಾಪುರ, ಕೋಟ, ಬ್ರಹ್ಮಾವರ, ಶಿರೂರು, ಭಟ್ಕಳಗಳಲ್ಲಿನ ಶಾಲೆ ಹಾಗೂ ಕಾಲೇಜಿನ ಬಸ್ಸಿಗೆ ವಿಮೆ ಪಾಲಿಸಿ ಮಾಡುವುದಾಗಿ ನಂಬಿಸಿ ನಕಲಿ ವಿಮೆ ಪಾಲಿಸಿಯನ್ನು ಮಾಡಿ ಮೋಸ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.

ಅದರಂತೆ ಚರಣ ಬಾಬು ಮೇಸ್ತನನ್ನು ಪೊಲೀಸರು ಅ.3ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ತನಿಖೆ ಬಗ್ಗೆ ಪೊಲೀಸ್ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆರೋಪಿಗಳು ಭಟ್ಕಳ ಹಾಗೂ ಉಡುಪಿ ಕಡೆಗಳ ಲ್ಲಿಯ ಖಾಸಗಿ/ಅನುದಾನಿತ ಶಾಲಾ ಕಾಲೇಜಿನಲ್ಲಿ ಶಾಲಾ ಬಸ್ಸಿನ ವಿಮೆ ಮಾಡಿಸುವುದಾಗಿ ಹಣ ಪಡೆದು ಇದೇ ರೀತಿಯ ಕೃತ್ಯವೆಸಗಿರುವುದು ತಿಳಿದು ಬಂದಿದೆ.

ಶಾಲಾ ವಾಹನಗಳಲ್ಲಿ ಮಕ್ಕಳು ಇರುವುದರಿಂದ ಬಸ್ ನಿಧಾನವಾಗಿಯೇ ಚಲಿಸುತ್ತದೆ ಮತ್ತು ಈ ಬಸ್‌ಗಳು ಅಪಘಾತಕ್ಕೆ ಒಳಗಾಗುವುದು ಬಹಳಷ್ಟು ವಿರಳ ಎಂಬುದಾಗಿ ತಿಳಿದು ಆರೋಪಿಗಳು ಶಾಲಾ ಕಾಲೇಜು ವಾಹನ ಗಳನ್ನೇ ಗುರಿಯಾಗಿರಿಸಿಕೊಂಡು ನಕಲಿ ವಿಮೆ ಮಾಡಿದ್ದಾರೆ ಎಂದು ಎಸ್ಪಿ ತಿಳಿಸಿದರು.

46 ಶಾಲಾ ಕಾಲೇಜುಗಳಿಗೆ ವಂಚನೆ

ಉತ್ತರ ಕನ್ನಡ ಜಿಲ್ಲೆ ಭಟ್ಕಳ, ಉಡುಪಿ ಜಿಲ್ಲೆಯ ಕುಂದಾಪುರ, ಕೋಟ ಠಾಣಾ ವ್ಯಾಪ್ತಿಯಲ್ಲಿರುವ ಶಾಲೆ/ಕಾಲೇಜಿನ ಶಾಲಾ ಬಸ್ಸಿಗೆ ವಿಮೆ ಮಾಡಿಸುವುದಾಗಿ ಆರೋಪಿಗಳು ಸೇರಿ ಸುಮಾರು 86 ಪಾಲಿಸಿಗಳಲ್ಲಿ 29 ಪಾಲಿಸಿ ನಕಲಿ ಹಾಗೂ 2ನೇ ಆರೋಪಿತ ಒಬ್ಬನೇ 111 ಪಾಲಿಸಿಯಲ್ಲಿ 17 ನಕಲಿ ಪಾಲಿಸಿ ಮಾಡಿ ಒಟ್ಟು 46 ಶಾಲೆ/ಕಾಲೇಜು ವಾಹನಗಳ ವಿಮೆಯನ್ನು ನಕಲಿ ಮಾಡಿರುವುದು ತನಿಖೆ ವೇಳೆ ತಿಳಿದು ಬಂದಿದೆ.

ಆರೋಪಿಗಳು ಈ ಹಿಂದೆ ರಿಲಾಯನ್ಸ್ ಜನರಲ್ ಇನ್ಸೂರೆನ್ಸ್ ಕಂಪೆನಿಯಲ್ಲಿ ಕೆಲಸ ಮಾಡಿರುವುದರಿಂದ ಹಳೆ ಪಾಲಿಸಿಗಳನ್ನು ಪಿಡಿಎಫ್ ಪೈಲ್ ಮಾಡಿ ಕಂಪ್ಯೂಟರನಲ್ಲಿ ಸಂಗ್ರಹಿಸಿ ಪಿಡಿಎಫ್ ಎಡಿಟರ್ ಆ್ಯಪ್ ಮೂಲಕ ವಿಮೆ ಪಾಲಿಸಿಯಲ್ಲಿ ವಿಮೆ ನಂಬ್ರ, ದಿನಾಂಕ, ವಾಹನದ ನಂಬ್ರ ಮತ್ತು ವಿಮೆ ಮೊತ್ತದ ಹಣವನ್ನು ತಮಗೆ ಬೇಕಾದ ರೀತಿಯಲ್ಲಿ ಎಡಿಟ್ ಮಾಡಿ ವಿಮೆ ಪಾಲಿಸಿ ಮಾಡಲು ನೀಡಿದ ಶಾಲಾ /ಕಾಲೇಜಿಗೆ ಕಳುಹಿಸಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಎಸ್ಪಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News