ಉಡುಪಿ | ಕೇರಳ ಸಮಾಜದಿಂದ ಆ.31ರಂದು ‘ಓಣಂ ಹಬ್ಬ’ ಆಚರಣೆ
ಉಡುಪಿ, ಆ.30: ಉಡುಪಿಯ ಕೇರಳ ಕಲ್ಬರಲ್ ಆ್ಯಂಡ್ ಸೋಶಿಯಲ್ ಸೆಂಟರ್‌ನ 31ನೇ ವಾರ್ಷಿಕೋತ್ಸವ ಹಾಗೂ ಓಣಂ ಸಂಭ್ರಮ-2025 ಕಾರ್ಯಕ್ರಮವನ್ನು ಇದೇ ಆ.31ರ ರವಿವಾರ ಅಂಬಲಪಾಡಿಯ ಶ್ಯಾಮಿಲಿ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಸುಗುಣ ಕುಮಾರ್ ತಿಳಿಸಿದ್ದಾರೆ.
ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸುಗುಣ ಕುಮಾರ್, ಅಂದು ಬೆಳಗ್ಗೆ 8 ಗಂಟೆಯಿಂದ 9:00 ಗಂಟೆಯವರೆಗೆ ಹೂವಿನ ರಂಗೋಲಿ ಸ್ಪರ್ಧೆ ಪೂಕಳಂ ನಡೆಯಲಿದೆ. 9ರಿಂದ 11ಗಂಟೆಯವರೆಗೆ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿದ್ದು, 11ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ಹಾಗೂ ಪ್ರಶಸ್ತಿ ವಿತರಣೆ ನಡೆಯಲಿದೆ ಎಂದರು.
ಅಪರಾಹ್ನ 12:30ರಿಂದ 2:30ರವರೆಗೆ ಕೆಸಿಎಸ್‌ಸಿ ಕಲ್ಬರಲ್ ಬ್ಲಾಸ್ಟ್ ಹಾಗೂ 2:30ರಿಂದ 4:30ರವರೆಗೆ ವಿಶೇಷ ಆಕರ್ಷಣೆಯಾಗಿ ತ್ರಿಶೂರ್‌ನ ಜನನಯನ ತಂಡದಿಂದ ‘ಕೇರಳೀಯ ವೈಭವಂ’ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ 4:30ಕ್ಕೆ ಸಮಾರೋಪ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ಜರುಗಲಿದೆ ಎಂದವರು ವಿವರಿಸಿದರು.
ಬೆಳಿಗ್ಗೆ 11:00 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಖ್ಯಾತ ಮಲಯಾಳಂ ಚಲನಚಿತ್ರ ನಟ ಹಾಗೂ ಕೊಲ್ಲಂ ವಿಧಾನಸಭಾ ಕ್ಷೇತ್ರದ ಶಾಸಕ ಮುಕೇಶ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಮಾಜಿ ಶಾಸಕ ವಿನಯಕುಮಾರ ಸೊರಕೆ, ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ., ಎಸ್ಪಿ ಹರಿರಾಂ ಶಂಕರ್, ಮಾಹೆ ಪ್ರಸನ್ನ ಪಬ್ಲಿಕ್ ಹೆಲ್ತ್ ಸ್ಕೂಲ್‌ನ ನಿರ್ದೇಶಕ ಡಾ.ಚೆರಿಯನ್ ವರ್ಗೀಸ್ ಮೊದಲಾದವರು ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ಸಾಧಕರಾದ ಡಾ.ಎ.ಗಿರಿಜ (ಆರೋಗ್ಯ ಸೇವೆ), ಹಾಜಿ ಕೆ.ಅಬ್ದುಲ್ಲ ಕುಂಜಿ ಪರ್ಕಳ (ವ್ಯಾಪಾರ), ಈಶ್ವರ್ ಮಲ್ಪೆ (ಸಮಾಜ ಸೇವೆ), ವಲ್ಸಾ ಜಾರ್ಜ್ (ಕೃಷಿ) ಹಾಗೂ ಕ್ಯಾಪ್ಟನ್ ವೇಣುಗೋಪಾಲನ್ ನಾಯರ್ (ರಕ್ಷಣಾ ಸೇವೆ) ಅವರಿಗೆ ಕೆಸಿಎಸ್‌ಸಿ ಪಂಚರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಅವರು ವಿವರಿಸಿದರು.
ಪ್ರತಿವರ್ಷದಂತೆ ಈ ಬಾರಿಯ ಎಸೆಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಸಂಘದ ಸದಸ್ಯರ ಪ್ರತಿಭಾನ್ವಿತ ಮಕ್ಕಳನ್ನು ಸನ್ಮಾನಿಸಲಾಗುವುದು ಎಂದು ಸುಗುಣಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಓಣಂ ಸಂಭ್ರಮ ಸಮಿತಿ ಅಧ್ಯಕ್ಷ ಶಿನೋದ್ ಟಿ.ಆರ್., ಕೆಸಿಎಸ್‌ಸಿ ಕಾರ್ಯದರ್ಶಿ ಬಿನೇಶ್ ವಿ.ಸಿ., ಉಪಾಧ್ಯಕ್ಷ ಸಂತೋಷ್ ಕುಮಾರ್, ಗಣೇಶ್ ವಕೇರಿ, ತೇಜಸ್ವಿನಿ ಮಹಿಳಾ ವಿಭಾಗದ ಅಧ್ಯಕ್ಷೆ ಶೈನಿ ಸತ್ಯಭಾಮ, ಸಮಿತಿ ಸದಸ್ಯ ಮನೋಜ್ ಕಡಬ ಉಪಸ್ಥಿತರಿದ್ದರು.