×
Ad

ಉಡುಪಿ | ಲಕ್ಷಕಂಠ ಗೀತಾ ಕಾರ್ಯಕ್ರಮ, ಪ್ರಧಾನಿ ಭೇಟಿಯ ಪೂರ್ವಭಾವಿ ಸಭೆ

Update: 2025-11-03 16:29 IST

ಉಡುಪಿ : ಉಡುಪಿ ಪರ್ಯಾಯ ಪುತ್ತಿಗೆ ಶ್ರೀಕೃಷ್ಣಮಠದಲ್ಲಿ ನ.28ರಂದು ನಡೆಯುವ ಲಕ್ಷಕಂಠ ಗೀತಾ ಆಯೋಜನೆ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೇಟಿಯ ಪೂರ್ವತಯಾರಿಗಳ ಬಗ್ಗೆ ಉಡುಪಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನೊಳಗೊಂಡ ಪೂರ್ವಭಾವಿ ಸಭೆ ಉಡುಪಿ ಶ್ರೀಕೃಷ್ಣಮಠದ ಗೀತಾ ಮಂದಿರದಲ್ಲಿ ಇಂದು ನಡೆಯಿತು.

ಅಧ್ಯಕ್ಷತೆಯನ್ನು ವಹಿಸಿದ್ದ ಪುತ್ತಿಗೆ ಪರ್ಯಾಯ ಶ್ರೀಸುಗುಣೇಂದ್ರತೀರ್ಥ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿ, ತಮ್ಮ ಕಳೆದ ಪರ್ಯಾಯದಲ್ಲಿ ಗುಜರಾತಿನ ಮುಖ್ಯಮಂತ್ರಿಗಳಾಗಿ ಆಗಮಿಸಿದ್ದ ನರೇಂದ್ರ ಮೋದಿ ಈ ಬಾರಿ ನಮ್ಮ ಪರ್ಯಾಯದಲ್ಲಿಯೇ ಪ್ರಧಾನಮಂತ್ರಿಗಳಾಗಿ ಆಗಮಿಸುತ್ತಿದ್ದು, ಉಡುಪಿಯ ಸಭ್ಯತೆ, ಸಂಸ್ಕೃತಿ, ಆತಿಥ್ಯಗಳ ವಿಶೇಷತೆಗಳು ಸರ್ವರಿಗೂ ತಿಳಿಯುವಂತೆ ಕಾರ್ಯಕ್ರಮ ಆಯೋಜನೆಯಾಗಬೇಕಿದೆ ಎಂದರು.

ಪ್ರಧಾನಮಂತ್ರಿಗಳ ಸುರಕ್ಷತೆಗೂ ಸಂಪೂರ್ಣ ಆದ್ಯತೆ ನೀಡಬೇಕಾಗಿದೆ. ಒಂದು ತಿಂಗಳ ಪರ್ಯಂತವಾಗಿ ನಡೆಯುವ ಗೀತೋತ್ಸವದಲ್ಲಿ ಸಂತ ಸಂಗಮ, ಗೀತಾ ಮಹಾಯಾಗ, ಅಂತರರಾಷ್ಟ್ರೀಯ ಗೀತಾ ಸಮ್ಮೇಳನ ನಡೆಯಲಿದ್ದು, ಈ ಕಾರ್ಯಕ್ರಮಗಳಿಗಾಗಿ ಉತ್ತರ ಪ್ರದೇಶದ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ, ಅಮೇರಿಕ ಸೇರಿದಂತೆ ವಿಶ್ವದ ಹಲವು ಗಣ್ಯರು , ಹಾಗೂ ಹಲವು ಕೇಂದ್ರ ಸಚಿವರು ಭಾಗವಹಿಸುವ ನಿರೀಕ್ಷೆಯಿದೆ. ಇದು ಸಮಗ್ರ ಉಡುಪಿಗೆ ಗೌರವ ತರುವ ಐತಿಹಾಸಿಕ ಕಾರ್ಯಕ್ರಮವಾಗಲಿದ್ದು, ಎಲ್ಲ ಜನರೂ ಇದರ ಯಶಸ್ಸಿಗೆ ಕೈಜೋಡಿಸಬೇಕು ಎಂದರು.

ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಪುತ್ತಿಗೆ ಶ್ರೀಗಳು ಕಳೆದ ಪರ್ಯಾಯದಲ್ಲಿಯೂ ಉಡುಪಿಯ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿದ್ದು, ಪ್ರಸಕ್ತ ಉಡುಪಿಗೆ ಪ್ರಧಾನಮಂತ್ರಿಗಳ ಭೇಟಿಯೊಂದಿಗೆ ಉಡುಪಿಯ ಸರ್ವಾಂಗೀಣ ಅಭಿವೃದ್ಧಿಗೆ ಮತ್ತಷ್ಟು ಬಲ ಸಿಕ್ಕಿದಂತೆ ಆಗುತ್ತದೆ. ಇದಕ್ಕಾಗಿ ಎಲ್ಲ ಜನಪ್ರತಿನಿಧಿಗಳು ಪಕ್ಷಭೇದ ಮರೆತು ಸಹಕರಿಸಬೇಕೆಂದು ಕೋರಿದರು.

ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ, ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಬೆಳಪು ದೇವಿಪ್ರಸಾದ್ ಶೆಟ್ಟಿ, ಬೈಕಾಡಿ ಸುಪ್ರಸಾದ್ ಶೆಟ್ಟಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿದರು. ಜಿಲ್ಲಾ ಪೋಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಭದ್ರತಾ ವ್ಯವಸ್ಥೆಗಳ ಬಗ್ಗೆ ಮಾಹಿತಿ ನೀಡಿದರು. ಕುಂದಾಪುರ ಉಪ ಆಯುಕ್ತೆ ರಶ್ಮಿ, ತಹಶೀಲ್ದಾರ್‌ ಗುರುರಾಜ್ ಮೊದಲಾದವರು ಭಾಗವಹಿಸಿದ್ದರು.

ದಿವಾನ ನಾಗರಾಜ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ಸಾಗರೋತ್ತರ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ವಂದಿಸಿದರು. ಮಠದ ಪ್ರಮುಖರಾದ ಸಂತೋಷ್ ಶೆಟ್ಟಿ ತೆಂಕರಗುತ್ತು, ರತೀಶ್ ತಂತ್ರಿ, ಪ್ರಮೋದ್ ಸಾಗರ, ಯೋಗೀಂದ್ರ ಭಟ್, ರವೀಂದ್ರ ಆಚಾರ್ಯ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News