ಉಡುಪಿ| ಗೂಡ್ಸ್ ಲಾರಿಯಲ್ಲಿ ಗಾಂಜಾ ಸಾಗಾಟ: ಇಬ್ಬರು ಆರೋಪಿಗಳ ಬಂಧನ
50 ಲಕ್ಷ ರೂ. ಮೌಲ್ಯದ 65 ಕೆ.ಜಿ. ಗಾಂಜಾ ವಶಕ್ಕೆ
ಉಡುಪಿ, ಸೆ.11: ಗೂಡ್ಸ್ ಲಾರಿಯೊಂದರಲ್ಲಿ ಸಾಗಾಟ ಮಾಡುತ್ತಿದ್ದ ಭಾರೀ ಪ್ರಮಾಣದ ಗಾಂಜಾ ವನ್ನು ಉಡುಪಿ ಸೆನ್ ಪೊಲೀಸರು ಗುರುವಾರ ಉಡುಪಿ ಕಿನ್ನಿಮುಲ್ಕಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪತ್ತೆ ಹಚ್ಚಿದ್ದು, ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿ, 65 ಕೆ.ಜಿ. ತೂಕದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಮೈಸೂರು ಹುಣಸೂರು ತಾಲೂಕಿನ ಬಿಳಿಕೆರೆ ನಿವಾಸಿ ಗಣೇಶ(38) ಆಂಧ್ರಪ್ರದೇಶ ಅನಂತಪುರಂ ನಿವಾಸಿ ಪಿ.ಗೋಪಾಲ ರೆಡ್ಡಿ(43) ಬಂಧಿತ ಆರೋಪಿಗಳು. ಇವರು ಉಡುಪಿ ಹಾಗೂ ಮಂಗಳೂರು ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಮಾರಾಟ ಮಾಡುವ ನಿಟ್ಟಿನಲ್ಲಿ ಗೂಡ್ಸ್ ಲಾರಿಯಲ್ಲಿ ಅಕ್ರಮವಾಗಿ ಗಾಂಜಾವನ್ನು ಸಾಗಾಟ ಮಾಡುತ್ತಿದ್ದರೆನ್ನಲಾಗಿದೆ.
ಈ ಕುರಿತ ಖಚಿತ ಮಾಹಿತಿಯಂತೆ ದಾಳಿ ನಡೆಸಿದ ಪೊಲೀಸರು, ಕಿನ್ನಿಮೂಲ್ಕಿ ಸ್ವಾಗತ ಗೋಪುರ ಹತ್ತಿರದ ಅಂಡರ್‌ಪಾಸ್‌ನಲ್ಲಿ ಲಾರಿಯನ್ನು ತಡೆದು ಪರಿಶೀಲನೆ ನಡೆಸಿದರು. ಆಗ ಲಾರಿಯಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಭಾರೀ ಪ್ರಮಾಣದ ಗಾಂಜಾ ಪತ್ತೆಯಾಗಿದೆ. ಲಾರಿಯಲ್ಲಿದ್ದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.
ಬಂಧಿತರಿಂದ 32ರಿಂದ 50ಲಕ್ಷರೂ.ವರೆಗಿನ ಮೌಲ್ಯದ 65.039ಕೆ.ಜಿ. ತೂಕದ ಗಾಂಜಾ, 20ಲಕ್ಷ ರೂ. ಮೌಲ್ಯದ ಗೂಡ್ಸ್ ಲಾರಿಯ, 1520ರೂ. ನಗದು, 20ಸಾವಿರ ರೂ. ಮೌಲ್ಯದ 2 ಮೊಬೈಲ್ ಪೋನ್‌ಗಳನ್ನು ವಶಪಡಿಸಿ ಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ 72,21,520ರೂ. ಎಂದು ಅಂದಾಜಿಸಲಾಗಿದೆ. ಸೊತ್ತುಗಳನ್ನು ಮಲ್ಪೆ ಪೊಲೀಸ್ ಠಾಣೆಗೆ ಹಸ್ತಾಂತರಿಸ ಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಕಾರ್ಕಳ ಸಹಾಯಕ ಪೊಲೀಸ್ ಅಧೀಕ್ಷಕ ಹಾಗೂ ಸೆನ್ ಅಪರಾಧ ಪೊಲೀಸ್ ಠಾಣೆಯ ಪ್ರಭಾರ ಡಾ.ಹರ್ಷ ಪ್ರಿಯಂವದಾ ನಿರ್ದೇಶನದ ಮೇರೆಗೆ ಉಡುಪಿ ಡಿವೈಎಸ್ಪಿ ಡಿ.ಟಿ.ಪ್ರಭು ಮಾರ್ಗದರ್ಶನದಲ್ಲಿ ಸೆನ್ ಅಪರಾಧ ಪೊಲೀಸ್ ಠಾಣೆಯ ಪ್ರಭಾರ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್, ಹಾಗೂ ಸೆನ್ ಠಾಣಾ ಸಿಬ್ಬಂದಿ ಪ್ರವೀಣ್ ಕುಮಾರ್, ಪ್ರವೀಣ್ ಶೆಟ್ಟಿಗಾರ್, ಯತೀನ್ ಕುಮಾರ್, ರಾಘವೇಂದ್ರ, ದಿಕ್ಷೀತ್, ನಿಲೇಶ್, ಮಾಯಪ್ಪ, ಮುತ್ತಪ್ಪ, ಪವನ್ ಹಾಗೂ ಮಲ್ಪೆ ಪೊಲೀಸ್ ಠಾಣೆಯ ಪ್ರವೀಣ್, ಉಡುಪಿ ಸಂಚಾರ ಪೊಲೀಸ್ ಠಾಣೆಯ ಶ್ರೀನಿವಾಸ್ ಅವರನ್ನೊಳಗೊಂಡ ವಿಶೇಷ ತಂಡವು ಈ ಕಾರ್ಯಾಚರಣೆ ನಡೆಸಿದೆ.
‘ಆಂಧ್ರ-ಒರಿಸ್ಸಾ ಗಡಿ ಪ್ರದೇಶದಿಂದ ಸಾಗಾಟ’
ಈ ಅಪಾರ ಪ್ರಮಾಣದ ಗಾಂಜಾವನ್ನು ಆಂಧ್ರ ಪ್ರದೇಶ ಹಾಗೂ ಒರಿಸ್ಸಾ ರಾಜ್ಯದ ಗಡಿ ಪ್ರದೇಶದಿಂದ ಸಾಗಾಟ ಆಗಿರುವುದು ಪ್ರಾಥಮಿಕ ತನಿಖೆ ಯಿಂದ ತಿಳಿದುಬಂದಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಸದ್ಯಕ್ಕೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಇದರಲ್ಲಿ ಇನ್ನೂ ಕೆಲವರು ಭಾಗಿಯಾಗಿರು ವುದು ತನಿಖೆಯಿಂದ ತಿಳಿದು ಬಂದಿದೆ. ಆ ಬಗ್ಗೆ ತನಿಖೆ ನಡೆಸಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗು ವುದು ಎಂದು ಅವರು ತಿಳಿಸಿದ್ದಾರೆ.