×
Ad

ಡಾ.ಕಾರಂತ ಮಹಾಮಾನವತಾವಾದಿ: ಡಾ. ಸಭಾಹಿತ್

‘ಯಕ್ಷಗಾನ ಪೂರ್ವರಂಗ’ ಕೃತಿ ಅನಾವರಣ

Update: 2025-10-11 19:47 IST

ಉಡುಪಿ: ಡಾ. ಶಿವರಾಮ ಕಾರಂತರು ಸಾಹಿತಿ, ಲೇಖಕರು ಮಾತ್ರವಲ್ಲ, ಮಹಾ ಮಾನವತಾವಾದಿ, ಪರಿಸರಪ್ರೇಮಿ, ಉತ್ತರಕನ್ನಡ ಜಿಲ್ಲೆಯ ಕೈಗಾದಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪನೆಯಾದಾಗ ಅದರ ವಿರುದ್ಧ ಪ್ರತಿಭಟನೆಗೆ ಇಳಿದ ಮೊದಲಿಗರು. ಅದಕ್ಕಾಗಿಯೇ ಲೋಕಸಭಾ ಚುನಾವಣೆಯಲ್ಲಿ ಕಾರವಾರದಿಂದ ಚುನಾವಣೆಗೆ ನಿಂತು ಸ್ಪರ್ಧಿಸಿದವರು ಎಂದು ಮಾಹೆ ವಿವಿಯ ಸಹಕುಲಪತಿ ಡಾ.ನಾರಾಯಾಣ ಸಭಾಹಿತ್ ಹೇಳಿದ್ದಾರೆ.

ಉಡುಪಿ ಇಂದ್ರಾಳಿಯ ಯಕ್ಷಗಾನ ಕೇಂದ್ರ ಮತ್ತು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಇದರ ಸಹಯೋಗದಲ್ಲಿ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರಮಂಟಪದಲ್ಲಿ ಶುಕ್ರವಾರ ನಡೆದ ಡಾ.ಕೋಟ ಶಿವರಾಮ ಕಾರಂತರ ೧೨೩ನೇ ಜನ್ಮದಿನಾಚರಣೆ ಹಾಗೂ ‘ಯಕ್ಷಗಾನ ಪೂರ್ವರಂಗ’ ಕೃತಿ ಅನಾವರಣ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಕೈಗಾ ಅಣುಸ್ಥಾವರದಿಂದ ಉತ್ತರಕನ್ನಡದ ಜೀವವೈಧ್ಯ, ಕಾಡು ಪರಿಸರ ನಾಶವಾಗುತ್ತದೆ ಎಂಬ ಕಾರಣಕ್ಕಾಗಿ ಚುನಾವಣೆಗೆ ನಿಂತು ಪರಿಸರ ಜಾಗೃತಿ ಮೂಡಿಸಿದವರು. ಚುನಾವಣೆಯಲ್ಲಿ ೬೦,೦೦೦ ಮತಗಳನ್ನು ಪಡೆದು ಸೋತರೂ ಉತ್ತರಕನ್ನಡದ ಪರಿಸರ ಉಳಿಸುವ ತಮ್ಮ ಹೋರಾಟವನ್ನು ಜೀವಂತವಾಗಿಟ್ಟವರು. ಇಂತಹ ಚಿಂತಕ, ಸಮಾಜಪ್ರೇಮಿಯನ್ನು ನಾವೆಂದೂ ಮರೆಯಬಾರದು ಎಂದು ಡಾ.ಸಭಾಹಿತ್ ನುಡಿದರು.

ಕಾರಂತರು ನಡೆದಾಡುವ ವಿಶ್ವಕೋಶದಂತಿದ್ದವರು. ಯಕ್ಷಗಾನದ ಕುರಿತಂತೆ ಅವರೆಲ್ಲಾ ಪ್ರಯೋಗಗಳು, ಚಿಂತನೆಗಳು ಇಂದ್ರಾಳಿಯ ಯಕ್ಷಗಾನ ಕೇಂದ್ರದ ಮೂಲಕವೇ ನಡೆಯುತ್ತಿತ್ತು. ಯಕ್ಷಗಾನ ಕೇಂದ್ರ ಹಾಗೂ ಕರಾವಳಿಯ ಯಕ್ಷಗಾನದ ಬೆಳವಣಿಗೆಯಲ್ಲಿ ಅವರ ಕೊಡುಗೆ ಅಪಾರ. ಇಂದು ಯಕ್ಷಗಾನ ವಿಶ್ವ ಮಟ್ಟದಲ್ಲೂ ಪರಿಚಿತವಾಗಿದ್ದರೆ ಅದಕ್ಕೆ ಕಾರಂತರ ಪ್ರಯತ್ನವೇ ಕಾರಣ ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಅವರು ಪೂರ್ಣಪ್ರಜ್ಞ ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ಶಿವಕುಮಾರ್ ಅಳಗೋಡು ಅವರ ‘ಯಕ್ಷಗಾನ ಪೂರ್ವರಂಗ’ ಕೃತಿಯ ಲೋಕಾರ್ಪಣೆ ಮಾಡಿದರು. ಹಿರಿಯ ವಿದ್ವಾಂಸ ಡಾ.ಪಾದೇಕಲ್ಲು ವಿಷ್ಣು ಭಟ್ ಅವರು ಕೃತಿಯ ಕುರಿತು ಮಾತನಾಡಿದರು.

ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಪ್ರೊ. ರವಿರಾಜ ಶೆಟ್ಟಿ ಕಾರಂತರ ಸಂಸ್ಮರಣೆ ಮಾಡಿದರು. ಕಾರಂತರು ತಮ್ಮ ಅಧ್ಯಯನದ ಕಾರಣದಿಂದ 400ಕ್ಕೂ ಮಿಕ್ಕಿ ಕೃತಿಗಳನ್ನು ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ಯಕ್ಷಗಾನ, ನಾಟಕದಂತಹ ಕಲಾಪ್ರಕಾರಗಳನ್ನು ಭಿನ್ನವಾಗಿ ರೂಪಿಸಿದ ಪ್ರಯೋಗಶೀಲ ವ್ಯಕ್ತಿತ್ವ ಅವರದು ಎಂದರು.

ಮುಖ್ಯ ಅತಿಥಿಯಾಗಿ ಯಕ್ಷಗಾನ ಕೇಂದ್ರದ ಸಲಹಾ ಸಮಿತಿಯ ಅಧ್ಯಕ್ಷ ಪಳ್ಳಿ ಕಿಶನ್ ಹೆಗ್ಡೆ ಉಪಸ್ಥಿತರಿದ್ದರು. ಡಾ. ಶಿವಕುಮಾರ್ ಅಳಗೋಡು ಕೃತಿಕಾರನ ನೆಲೆಯಲ್ಲಿ ಮಾತನಾಡಿದರು. ಆರ್‌ಆರ್‌ಸಿಯ ವತಿಯಿಂದ ಕಾರಂತರ ಕುರಿತಾದ ಸಾಕ್ಷ್ಯಚಿತ್ರ ಪ್ರದರ್ಶನ ಹಾಗೂ ಕಾರಂತರ ಅಪೂರ್ವ ಭಾವಚಿತ್ರಗಳ ಪ್ರದರ್ಶನ ನಡೆಯಿತು.

ಸಂಸ್ಥೆಯ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್‌ಆರ್‌ಸಿ ಸಹ ಸಂಶೋಧಕ ಡಾ.ಅರುಣಕುಮಾರ್ ಎಸ್.ಆರ್. ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಪ್ರಸಿದ್ಧ ಯಕ್ಷಗಾನ ಕಲಾವಿದರ ಕೂಡುವಿಕೆಯಿಂದ ‘ಭೀಷ್ಮೋತ್ಪತ್ತಿ’ ಯಕ್ಷಗಾನ ಪ್ರದರ್ಶನ ನಡೆಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News