ಭಟ್ಕಳ ರೈಲು ನಿಲ್ದಾಣದಲ್ಲಿ ಮೂಲಸೌಕರ್ಯ ಸುಧಾರಣೆಗೆ ತಂಝೀಮ್ ಮನವಿ
ಭಟ್ಕಳ: ಪಟ್ಟಣದ ಪ್ರಮುಖ ಸಾಮಾಜಿಕ ಸಂಘಟನೆಯಾದ ಮಜ್ಲಿಸ್-ಎ-ಇಸ್ಲಾಹ್ ವ ತಂಝೀಮ್ ನೇತೃತ್ವದ ನಿಯೋಗವು ಕೊಂಕಣ ರೈಲ್ವೆಯ ಸಹಾಯಕ ಸಂಚಾರ ವ್ಯವಸ್ಥಾಪಕರು (Assistant Traffic Manager) ಭಟ್ಕಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರನ್ನು ಭೇಟಿ ಮಾಡಿ, ಭಟ್ಕಳ ರೈಲು ನಿಲ್ದಾಣದಲ್ಲಿನ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿತು.
ಮಳೆಗಾಲದಲ್ಲಿ ರೈಲು ನಿಲ್ದಾಣದ ಕಟ್ಟಡದ ಮೇಲ್ಛಾವಣಿ ಹಾಗೂ ಶೆಡ್ ಗಳಿಂದ ಹಲವೆಡೆ ನೀರು ಸೋರಿಕೆಯಾಗುತ್ತಿರುವುದರಿಂದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದು, ಅವರ ಸುರಕ್ಷತೆಗೂ ಅಪಾಯ ಎದುರಾಗುತ್ತಿದೆ. ಹೀಗಾಗಿ ಕಟ್ಟಡದ ದುರಸ್ತಿ ಹಾಗೂ ನಿರ್ವಹಣೆ ಕಾಮಗಾರಿಯನ್ನು ತುರ್ತಾಗಿ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಮುಂಬೈ ಕಡೆಗೆ ಸಂಚರಿಸುವ ರೈಲುಗಳನ್ನು ಹೆಚ್ಚಿನ ಸಂದರ್ಭಗಳಲ್ಲಿ ಎರಡನೇ ಪ್ಲಾಟ್ ಫಾರ್ಮ್ ನಲ್ಲಿ ನಿಲ್ಲಿಸಲಾಗುತ್ತಿದೆ. ಈ ಮಾರ್ಗದಲ್ಲಿ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಭಾರೀ ಸಾಮಗ್ರಿಗಳೊಂದಿಗೆ ಪ್ರಯಾಣಿಸುವುದರಿಂದ ಮೊದಲನೇ ಪ್ಲಾಟ್ ಫಾರ್ಮ್ ನಿಂದ ಎರಡನೇ ಪ್ಲಾಟ್ ಫಾರ್ಮ್ ಗೆ ತೆರಳಲು ಸಾಕಷ್ಟು ಕಷ್ಟವಾಗುತ್ತಿದೆ. ಆದ್ದರಿಂದ ಸಾಧ್ಯವಾದಷ್ಟು ಮುಂಬೈ ಮಾರ್ಗದ ರೈಲುಗಳನ್ನು ಮೊದಲನೇ ಪ್ಲಾಟ್ ಫಾರ್ಮ್ ನಲ್ಲೇ ನಿಲ್ಲಿಸುವ ವ್ಯವಸ್ಥೆ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಎರಡನೇ ಪ್ಲಾಟ್ ಫಾರ್ಮ್ ನಲ್ಲಿ ಸಮರ್ಪಕ ಮೇಲ್ಛಾವಣಿ ಇಲ್ಲದ ಕಾರಣ ಮಳೆಗಾಲದಲ್ಲಿ ಪ್ರಯಾಣಿಕರು ನೆನೆಯುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಅಲ್ಲದೆ, ಮೊದಲನೇ ಪ್ಲಾಟ್ ಫಾರ್ಮ್ ನಲ್ಲಿರುವಂತೆ ಎರಡನೇ ಪ್ಲಾಟ್ ಫಾರ್ಮ್ ನಲ್ಲೂ ಟೈಲ್ಸ್ ಅಳವಡಿಕೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಲಾಗಿದೆ.
ಮೊದಲ ಮತ್ತು ಎರಡನೇ ಪ್ಲಾಟ್ ಫಾರ್ಮ್ ಗಳನ್ನು ಸಂಪರ್ಕಿಸುವ ಮೇಲ್ಸೇತುವೆಗೆ (ಫುಟ್ ಓವರ್ ಬ್ರಿಡ್ಜ್) ಬಿಸಿಲು ಮತ್ತು ಮಳೆಯಿಂದ ರಕ್ಷಣೆ ನೀಡುವ ಶೆಡ್ ನಿರ್ಮಿಸುವುದರ ಜೊತೆಗೆ, ಹಿರಿಯ ನಾಗರಿಕರು, ದಿವ್ಯಾಂಗರು ಹಾಗೂ ಭಾರೀ ಸಾಮಾನುಗಳೊಂದಿಗೆ ಸಂಚರಿಸುವ ಪ್ರಯಾಣಿಕರಿಗೆ ಅನುಕೂಲವಾಗುವಂತೆ ರ್ಯಾಂಪ್ ಮತ್ತು ವೀಲ್ ಚೇರ್ ಸ್ನೇಹಿ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಪ್ರಯಾಣಿಕರ ಅನುಕೂಲಕ್ಕಾಗಿ ರೈಲು ನಿಲ್ದಾಣದಲ್ಲಿ ಕನಿಷ್ಠ ಎಂಟರಿಂದ ಹತ್ತು ಲಗೇಜ್ ಟ್ರಾಲಿಗಳನ್ನು ಒದಗಿಸಬೇಕು. ಪ್ರಸಕ್ತ ಟ್ರಾಲಿಗಳ ಕೊರತೆಯಿಂದ ಕುಟುಂಬ ಸಮೇತರಾಗಿ ಪ್ರಯಾಣಿಸುವವರು, ಹಿರಿಯ ನಾಗರಿಕರು ಹಾಗೂ ದೂರ ಪ್ರಯಾಣಿಕರು ತಮ್ಮ ಸಾಮಾನು ಸಾಗಿಸಲು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಇದಲ್ಲದೆ, ರೈಲು ನಿಲ್ದಾಣದಿಂದ ಪಟ್ಟಣ ಹಾಗೂ ಇತರೆ ಪ್ರಮುಖ ಸ್ಥಳಗಳಿಗೆ ತೆರಳುವ ಮಾರ್ಗಗಳನ್ನು ಸೂಚಿಸುವ ಸ್ಪಷ್ಟ ದಿಕ್ಕು ಸೂಚಕ ಫಲಕಗಳನ್ನು ಅಳವಡಿಸುವುದು ಹಾಗೂ ನಿಲ್ದಾಣದ ಹೊರಭಾಗದಲ್ಲಿ ಸುಸಜ್ಜಿತ ವಾಹನ ನಿಲುಗಡೆ (ಪಾರ್ಕಿಂಗ್) ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವಂತೆ ಅಧಿಕಾರಿಗಳನ್ನು ಕೋರಲಾಗಿದೆ.
ತಂಝೀಮ್ ನ ಪ್ರಧಾನ ಕಾರ್ಯದರ್ಶಿ ಮೌಲಾನಾ ಅಝೀಝುರ್ರಹ್ಮಾನ್ ರುಕ್ನುದ್ದೀನ್ ನದ್ವಿ ನೇತೃತ್ವದಲ್ಲಿ ನಿಯೋಗ ಮನವಿ ಸಲ್ಲಿಸಿತು. ಸಂಘಟನೆಯ ಇತರ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.