ಭಟ್ಕಳ | ವಾಹನ ಡಿಕ್ಕಿ: ಚಿರತೆ ಸಾವು
ಭಟ್ಕಳ: ತಾಲ್ಲೂಕಿನ ಸರ್ಪನಕಟ್ಟೆ ಸಮೀಪದ ಹುಯಿಲ್ಮಡಿ ರಸ್ತೆಯಲ್ಲಿ ಮಂಗಳವಾರ ಮುಂಜಾನೆ ವಾಹನ ಡಿಕ್ಕಿಯಾಗಿ ಸುಮಾರು ಎರಡು ವರ್ಷ ವಯಸ್ಸಿನ ಚಿರತೆಯೊಂದು ಮಂಗಳವಾರ ಸಾವನ್ನಪ್ಪಿದೆ.
ಸರ್ಪನಕಟ್ಟೆಯಲ್ಲಿರುವ ನೀರಿನ ಕಾರ್ಖಾನೆಯ ಸಮೀಪ ಚಿರತೆ ರಸ್ತೆ ದಾಟುತ್ತಿದ್ದಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದಿರಬಹುದು ಎಂದು ಶಂಕಿಸಲಾಗಿದೆ. ಡಿಕ್ಕಿಯ ತೀವ್ರತೆಗೆ ಚಿರತೆ ಸ್ಥಳದಲ್ಲೇ ಮೃತಪಟ್ಟಿದೆ ಎನ್ನಲಾಗಿದೆ.
ಘಟನೆಯ ಮಾಹಿತಿ ತಿಳಿದು ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಚಿರತೆಯ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.