×
Ad

ಭಟ್ಕಳ: ಮರಳು ಸಮಸ್ಯೆ ಪರಿಹಾರಕ್ಕಾಗಿ ನ.13ರಂದು ಬೃಹತ್ ಪ್ರತಿಭಟನಾ ಮೆರವಣಿಗೆ

Update: 2024-11-12 17:22 IST

ಭಟ್ಕಳ: ಮರಳು ಲಭ್ಯತೆಗಾಗಿ ಶಾಶ್ವತ ಪರಿಹಾರ ಒದಗಿಸಬೇಕೆಂಬ ಆಗ್ರಹದೊಂದಿಗೆ ತಾಲೂಕು ಎಲ್ಲಾ ಕಾರ್ಮಿಕ ಸಂಘಟನೆಗಳ ಒಕ್ಕೂಟದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಬುಧವಾರ ಬೆಳಿಗ್ಗೆ 9 ಗಂಟೆಗೆ ಭಟ್ಕಳ ಹಳೆ ಬಸ್ ನಿಲ್ದಾಣದಿಂದ ಆರಂಭಗೊಳ್ಳಲಿದ್ದು, ಈ ಮೆರವಣಿಗೆಯು ಸಂಶುದ್ದೀನ್ ಸರ್ಕಲ್ ಮೂಲಕ, ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಗುವುದು ಎಂದು ಭಟ್ಕಳ ಇಂಜಿನಿಯರ್ ಹಾಗೂ ಆರ್ಕಿಟೆಕ್ಚರ್ ಅಸೋಸಿಯೇಷನ್ ಕಾರ್ಯದರ್ಶಿ ಸುರೇಶ ಪೂಜಾರಿ ತಿಳಿಸಿದ್ದಾರೆ.

ಅಮೀನಾ ಪ್ಯಾಲೇಸ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಾ, "ಕಳೆದ ಆರು ತಿಂಗಳಿನಿಂದ ಮರಳು ಕೊರತೆಯಿಂದ 30 ಸಾವಿರಕ್ಕೂ ಹೆಚ್ಚು ಕುಟುಂಬಗಳು, 80 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಕಟ್ಟಡ ನಿರ್ಮಾಣ ಕಾಮಗಾರಿಗಳು ನಿಂತಿದ್ದು, ಎಲ್ಲಾ ವಲಯದ ಕಾರ್ಮಿಕರ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಇದನ್ನು ಸರಕಾರ ತಕ್ಷಣ ಪರಿಹರಿಸಬೇಕಿದೆ," ಎಂದು ಪುನರ್ರದಿಸಿದರು.

ಇನ್ನು, ಭಟ್ಕಳ ಸೆಂಟ್ರಿಂಗ್ ಸಂಘದ ಸಹ ಕಾರ್ಯದರ್ಶಿ ರಾಮ ಹೆಬಳೆ, "ಮರಳಿನ ಕೊರತೆಯಿಂದ ದೀಪಾವಳಿ ಹಬ್ಬದ ವೇಳೆ ಕಾರ್ಮಿಕರಿಗೆ ಸಂಕಟವಾಗಿದೆ. ಕಾರ್ಮಿಕರ ಆರ್ಥಿಕ ಪರಿಸ್ಥಿತಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು," ಎಂದು ಮನವಿ ಮಾಡಿದರು.

ಭಟ್ಕಳ ಇಂಜಿನಿಯರ್ ಹಾಗೂ ಆರ್ಕಿಟೆಕ್ಚರ್ ಅಸೋಸಿಯೇಷನ್ ಸದಸ್ಯ ಮಿಸ್ಬ್ ಉಲ್ ಹಕ್ ಮಾತನಾಡಿ 'ಮರಳುಗಾರಿಕೆಯಿಂದ ಕೇವಲ ಕಾರ್ಮಿಕರ ಅಥವಾ ದೋಣಿ ಮಾಲಕರ ಬದುಕು ಮಾತ್ರ ಸಾಗುವುದಿಲ್ಲ. ಕಟ್ಟಡ ನಿರ್ಮಾಣದಲ್ಲಿ ಮರಳು ಒಂದು ಮೂಲ ವಸ್ತು. ವಾಸ್ತವ ಹೀಗಿರುವಾಗ ದಿಢೀರ್ ಎಂದು ಮರಳುಗಾರಿಕೆಯನ್ನೇ ನಿಲ್ಲಿಸಿದರೆ ತೀರಾ ಬಡ ವರ್ಗದ ಕಾರ್ಮಿಕರ ಪಾಡೇನು? ಇದರ ಬಗ್ಗೆ ಜನಪ್ರತಿನಿಧಿಗಳು, ಆಡಳಿತದ ಆಯಾಕಟ್ಟಿನ ಸ್ಥಳದಲ್ಲಿ ಕೂತವರು ಯೋಚನೆ ಮಾಡಬೇಕಲ್ಲವೇ?

ಈ ಸಂದರ್ಭದಲ್ಲಿ ಭಟ್ಕಳ ಇಂಜಿನಿಯರ್ಸ್ ಮತ್ತು ಆರ್ಕಿಟೆಕ್ಟ್ ಅಶೋಸಿಯೇಶನ್ ಸಂಘದ ಅಧ್ಯಕ್ಷ ನಾಗೇಂದ್ರ ನಾಯ್ಕ, ಭಟ್ಕಳ ಸೆಂಟ್ರಿಂಗ್ ಸಂಘದ ಅಧ್ಯಕ್ಷ ಲೋಕೇಶ ನಾಯ್ಕ, ಕಾರ್ಯದರ್ಶಿ ಶಿವರಾಮ ನಾಯ್ಕ, ಭಟ್ಕಳ ಕಟ್ಟಡ ಕೂಲಿ ಕಾರ್ಮಿಕ ಸಂಘದ ಮಾಜಿ ಅಧ್ಯಕ್ಷ ಶ್ರೀಧರ ನಾಯ್ಕ ಚೌಥನಿ, ಭಟ್ಕಳ ಕಟ್ಟಡ ಕೂಲಿ ಪೇಂಟಿಂಗ್ ಸಂಘದ ರಾಮ ನಾಯ್ಕ, ಮಂಜುನಾಥ ಗೊಂಡ ಭಟ್ಕಳ ಟಿಪ್ಪರ್ ಮಾಲಕರ ಸಂಘದ ಅಜೀಜ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News