×
Ad

ಕನ್ನಡ ಎಂ.ಎ.ಯಲ್ಲಿ ಪ್ರಥಮ ರ‍್ಯಾಂಕ್: ಶ್ರೇಯಸ್ ನಾಯಕಗೆ 9 ಚಿನ್ನದ ಪದಕ

Update: 2026-04-24 19:09 IST

ಭಟ್ಕಳ: ಇಲ್ಲಿನ ಪ್ರತಿಷ್ಠಿತ ಅಂಜುಮನ್ ಹಾಮಿಯೇ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಂಜುಮನ್ ಪದವಿ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗದ ವಿದ್ಯಾರ್ಥಿ ಶ್ರೇಯಸ್ ನಾಯಕ ಅವರು ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಸ್ನಾತಕೋತ್ತರ (ಎಂ.ಎ.) ಪದವಿಯಲ್ಲಿ ಪ್ರಥಮ ರ‍್ಯಾಂಕ್ ಗಳಿಸಿ ವಿಶಿಷ್ಟ ಸಾಧನೆ ಮಾಡಿದ್ದಾರೆ.

ಎಂ.ಎ. ಕನ್ನಡ ವಿಭಾಗದಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿರುವ ಶ್ರೇಯಸ್, ಒಟ್ಟು ಒಂಬತ್ತು ಸುವರ್ಣ ಪದಕಗಳು ಹಾಗೂ ಎರಡು ನಗದು ಪುರಸ್ಕಾರಗಳನ್ನು ಪಡೆದು ಕಾಲೇಜಿಗೆ ಕೀರ್ತಿಯನ್ನು ತಂದಿದ್ದಾರೆ.

ಅವರು ಪಡೆದ ಸುವರ್ಣ ಪದಕಗಳಲ್ಲಿ ದಿವಂಗತ ಮಲ್ಲಪ್ಪ ಯಲ್ಲಪ್ಪ ಕವಳಿ ಸ್ಮರಣಾರ್ಥ ಪದಕ, ಜಗದ್ಗುರು ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಸುತ್ತೂರು ಮಠದ ಪದಕ, ಡಾ. ಆರ್.ಸಿ. ಹಿರೇಮಠ, ಪ್ರೊ. ಕೆ.ಜಿ. ಕುಂದಣಗಾರ, ಡಾ. ಪಂಚಾಕ್ಷರಿ ಹಿರೇಮಠ, ಡಾ. ವಿಲಿಯಂ ಮಾಡ್ತಾ, ಡಾ. ಗುರುಲಿಂಗ ಕಾಪಸೆ, ಸಂಗಯ್ಯಸ್ವಾಮಿ ರಾಚಯ್ಯ ಸ್ವಾಮಿ ಹಾಗೂ ಮುರುಘಾಮಠದ ಮಹಾಂತ ಸ್ವಾಮಿ ಅವರ ಹೆಸರಿನ ಪದಕಗಳು ಸೇರಿವೆ.

ಇದೇ ವೇಳೆ, ರೆವರೆಂಡ್ ಚೆನ್ನಪ್ಪ ಉತ್ತಂಗಿ ಜನ್ಮಶತಾಬ್ದಿ ಸ್ಮರಣಾರ್ಥ ಪುರಸ್ಕಾರ ಹಾಗೂ ನಾಡೋಜ ಚೆನ್ನವೀರ ಕಣವಿ ಮತ್ತು ಶಾಂತಾದೇವಿ ಕಣವಿ ಸ್ಮರಣಾರ್ಥ ಪುರಸ್ಕಾರಗಳನ್ನು ಕೂಡ ಅವರು ತಮ್ಮದಾಗಿಸಿಕೊಂಡಿದ್ದಾರೆ.

ಕರ್ನಾಟಕ ವಿಶ್ವವಿದ್ಯಾಲಯದ 75ನೇ ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯಪಾಲರೂ ಆಗಿರುವ ಕುಲಾಧಿಪತಿ ಥಾವರ್ ಚಂದ್ ಗೆಹ್ಲೋಟ್ ಅವರು ಶ್ರೇಯಸ್ ಅವರಿಗೆ ಪ್ರಮಾಣಪತ್ರಗಳನ್ನು ನೀಡಿ ಗೌರವಿಸಿದರು. ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ಸುವರ್ಣ ಪದಕಗಳನ್ನು ಪ್ರದಾನ ಮಾಡಿದರು.

ಭಟ್ಕಳದಲ್ಲಿಯೇ ಪ್ರಾಥಮಿಕ ಶಿಕ್ಷಣದಿಂದ ಸ್ನಾತಕೋತ್ತರ ಪದವಿವರೆಗೆ ಅಭ್ಯಾಸ ಮಾಡಿದ ಶ್ರೇಯಸ್, ಆರಂಭ ದಿಂದಲೇ ಪ್ರತಿಭೆಯನ್ನು ತೋರಿಸಿಕೊಂಡು ಬಂದಿದ್ದಾರೆ. ಸಣ್ಣ ಪಟ್ಟಣದಲ್ಲಿಯೂ ಉತ್ತಮ ಶಿಕ್ಷಣದ ಮೂಲಕ ಉನ್ನತ ಸಾಧನೆ ಸಾಧ್ಯವೆಂಬುದನ್ನು ಅವರು ಸಾಬೀತುಪಡಿಸಿದ್ದಾರೆ.

ಈ ಸಾಧನೆಗೆ ಕಾಲೇಜಿನ ಅಧ್ಯಾಪಕರ ಮಾರ್ಗದರ್ಶನ ಮತ್ತು ಪ್ರೋತ್ಸಾಹವೇ ಕಾರಣ ಎಂದು ಶ್ರೇಯಸ್ ತಿಳಿಸಿದ್ದಾರೆ.

ಅಂಜುಮನ್ ಸಂಸ್ಥೆಯ ಕನ್ನಡ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಆರ್.ಎಸ್. ನಾಯಕ ಮತ್ತು ರೇಣುಕಾ ದಂಪತಿಗಳ ಪುತ್ರನಾದ ಶ್ರೇಯಸ್, ಪ್ರಸ್ತುತ ತಮಿಳುನಾಡಿನ ಪೆರಂಬಲೂರು ಜಿಲ್ಲೆಯಲ್ಲಿ ಕೆನರಾ ಬ್ಯಾಂಕ್‌ನಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಸಾಧನೆಗೆ ಅಂಜುಮನ್ ಸಂಸ್ಥೆಯ ಆಡಳಿತ ಮಂಡಳಿ, ಅಧ್ಯಾಪಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News