ಮುಟ್ಟಳ್ಳಿ ಶಾಲೆಯ 70ನೇ ವಾರ್ಷಿಕೋತ್ಸವ; ಸಾಂಸ್ಕೃತಿಕ ಸಮ್ಮಿಲನ
ಭಟ್ಕಳ: ತಾಲೂಕಿನ ಮುಟ್ಟಳ್ಳಿ ಶಾಲೆಯ 70ನೇ ವರ್ಷದ ವಾರ್ಷಿಕ ಸ್ನೇಹ ಸಾಂಸ್ಕೃತಿಕ ಸಮ್ಮಿಲನ ನಡೆಯಿತು. ಕಾರ್ಯಕ್ರಮವನ್ನು ಶಾಲೆಯ ಮೊದಲ ವಿದ್ಯಾರ್ಥಿಯಾಗಿರುವ ಜಟ್ಟಪ್ಪ ನಾಯ್ಕ ಉದ್ಘಾಟಿಸಿದರು.
ಕಾರ್ಯಕ್ರಮದ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದ ಹಳೆ ವಿದ್ಯಾರ್ಥಿ ಹಾಗೂ ಬೈಂದೂರು ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ ಮಾತನಾಡಿ, “ನಾವು ಕಲಿಯುತ್ತಿದ್ದಾಗ ಎದುರಿಸಿದ ತೊಂದರೆಗಳನ್ನು ಈಗಿನ ವಿದ್ಯಾರ್ಥಿಗಳು ಅನುಭವಿಸಬಾರದು. ಉತ್ತಮ ಗುಣಮಟ್ಟದ ಶಿಕ್ಷಣ ದೊರಕುವಂತೆ ಹಳೆ ವಿದ್ಯಾರ್ಥಿಗಳು ಹಾಗೂ ಊರ ಜನತೆ ಶ್ರಮಿಸಬೇಕು. ವಾರ್ಷಿಕೋತ್ಸವವು ಕೇವಲ ಮನೋರಂಜನೆಯ ಕಾರ್ಯಕ್ರಮವಾಗದೆ, ಹೊಸ ಯುಗದ ಪ್ರಾರಂಭವಾಗಬೇಕು” ಎಂದು ಅಭಿಪ್ರಾಯಪಟ್ಟರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಎನ್. ನಾಯ್ಕ ಮಾತನಾಡಿ, “ಈ ಕಾರ್ಯಕ್ರಮ ಹಬ್ಬದಂತಹ ಅನುಭವ ನೀಡಿತು. 35-36 ವರ್ಷಗಳ ಬಳಿಕ ಈ ಮಟ್ಟದ ಅದ್ಧೂರಿ ಕಾರ್ಯಕ್ರಮವನ್ನು ಆಯೋಜಿಸಿರುವ ಶಿಕ್ಷಕರ ಶ್ರಮ ಶ್ಲಾಘನೀಯ” ಎಂದು ಹೇಳಿದರು.
ದೈಹಿಕ ಶಿಕ್ಷಣ ಪರಿವೀಕ್ಷಕರಾದ ಪ್ರಕಾಶ ಶಿರಾಲಿ ಅವರು ಮಾತನಾಡಿ, “ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದ್ದರೂ, ಖಾಸಗಿ ಶಾಲೆಗಳತ್ತ ಪೋಷಕರ ಆಕರ್ಷಣೆ ಹೆಚ್ಚುತ್ತಿದೆ. ಈ ಪಥವು ಸರ್ಕಾರಿ ಶಾಲೆಗಳ ಭವಿಷ್ಯಕ್ಕೆ ಆತಂಕ ಉಂಟುಮಾಡುತ್ತಿದೆ” ಎಂದು ವಿಷಾದ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಂಗವಾಗಿ ಹಳೆಯ ವಿದ್ಯಾರ್ಥಿಗಳು, ಎಸ್.ಡಿ.ಎಂ.ಸಿ ಸದಸ್ಯರು, ಗ್ರಾಮಸ್ಥರು ಸೇರಿ ನಿವೃತ್ತ ಶಿಕ್ಷಕರನ್ನು ಮೆರವಣಿಗೆಯ ಮೂಲಕ ಶಾಲೆಗೆ ಕರೆತರಲಾಯಿತು. ಮೆರವಣಿಗೆಯಲ್ಲಿ ಗೊಂಡರ ಡಕ್ಕೆ ಕುಣಿತ, ಹುಲಿ ವೇಷ, ಚಂಡೆ ವಾದನ ವಿಶೇಷ ಆಕರ್ಷಣೆಯಾಗಿದ್ದವು.
ಸಭಾ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಿಗೆ, ಹಳೆ ವಿದ್ಯಾರ್ಥಿಗಳಿಗೆ ಹಾಗೂ ದಾನಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಟ್ಟಳ್ಳಿ ಗ್ರಾಮಪಂಚಾಯತ್ ಅಧ್ಯಕ್ಷೆ ರಜನಿ ನಾಯ್ಕ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಹಿರಿಯ ಉಪನ್ಯಾಸಕ ಎಸ್.ಪಿ. ಭಟ್ಟ, ಬಿ.ಆರ್.ಸಿ. ಸಮನ್ವಯಾಧಿಕಾರಿ ಪೂರ್ಣಿಮಾ ಮೊಗೇರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಉಲ್ಲಾಸ ಎಸ್. ನಾಯ್ಕ, ಸಿಆರ್.ಪಿ. ಜಯಶ್ರೀ ಆಚಾರಿ, ಎಸ್.ಡಿ.ಎಂ.ಸಿ. ಅಧ್ಯಕ್ಷ ಅನಂತ ನಾಯ್ಕ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ. ರವಿ ನಾಯ್ಕ, ನಿವೃತ್ತ ಶಿಕ್ಷಕ ಎಂ.ಕೆ. ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯಿನಿ ಗಂಗಾ ಮೊಗೇರ ಸ್ವಾಗತಿಸಿದರು. ಶಿಕ್ಷಕಿ ಲತಾ ನಾಯ್ಕವರದಿ ವಾಚಿಸಿದರು. ಶಿಕ್ಷಕ ಗಜಾನನ ನಾಯ್ಕ ವಂದನಾರ್ಪಣೆ ಮಾಡಿದರು. ಶಿಕ್ಷಕರಾದ ಸುರೇಶ್ ಮುರುಡೇಶ್ವರ, ನಾರಾಯಣ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಭಾಗವಾಗಿ ಅಂಗನವಾಡಿ ಪುಟಾಣಿಗಳಿಂದ ಸಾಂಸ್ಕೃತಿಕ ಸಂಜೆ, ಶಾಲಾ ಮಕ್ಕಳಿಂದ ವೈವಿಧ್ಯಮಯ ನೃತ್ಯ ವೈಭವ, ನವಶಕ್ತಿ ವೈಭವ ಹಾಗೂ ನವ್ಯ ಶೈಲಿಯ ನೃತ್ಯಗಳ ಪ್ರದರ್ಶನ ನಡೆಯಿತು.